ಜಿಲ್ಲೆ

ಸಂಭ್ರಮ ಸಡಗರದಿಂದ ನಾಗರ ಪಂಚಮಿ ಆಚರಣೆ

Haveri - Kariyappa Aralikatti

ರಾಣೆಬೆನ್ನೂರ: ನಗರ ಸೇರಿ ತಾಲೂಕಿನಾದ್ಯಂತ ಭಾನುವಾರ ನಾಗರಪಂಚಮಿ ಹಬ್ಬವನ್ನು ಅತ್ಯಂತ ಸಡಗರ ಸಂಭ್ರಮದಿಂದ ಆಚರಿಸಿದರು. ಮಳೆ, ಬೆಳೆ, ಜೀವನ ಸಮೃದ್ಧಗೊಳಿಸುವಂತೆ ನಾಗದೇವರಿಗೆ ಪೂಜೆ ಸಲ್ಲಿಸಿದರು.
ಬೆಳಗ್ಗೆಯಿಂದಲೇ ಅವಳಿ ನಗರದ ಜನರು ಮನೆಯಲ್ಲಿ ಹಾಗೂ ವಿವಿಧ ದೇವಸ್ಥಾನಗಳಲ್ಲಿ ಪ್ರತಿಷ್ಠಾಪಿಸಿರುವ ನಾಗದೇವತೆಗಳ ಮೂರ್ತಿಗಳು, ಹಾವಿನ ಹುತ್ತಗಳು ಹಾಗೂ ಹಬ್ಬದ ನಿಮಿತ್ತ ಮನೆಯಲ್ಲಿಟ್ಟಿದ್ದ ಮಣ್ಣಿನ ನಾಗದೇವರಿಗೆ ಮನೆ ಮಂದಿ ಹಾಲರೆದು, ಶ್ರದ್ಧಾ ಭಕ್ತಿಯಿಂದ ಪೂಜೆ ಸಲ್ಲಿಸಿದರು. ಈ ವೇಳೆ ಕೆಲವರು ಇದು ನನ್ನ ಪಾಲು, ಇದು ತಂದೆ, ತಾಯಿ, ಅಜ್ಜ, ಅಜ್ಜಿ, ಅಕ್ಕ ಹಾಗೂ ಅಣ್ಣ ಹಾಗೂ ತಮ್ಮನ ಪಾಲು ಎಂದು ಹೇಳುವ ಮೂಲಕ ಹಾಲೆರೆದು ಧನ್ಯ ಮೆರೆದರು.
ಹಬ್ಬದ ಅಂಗವಾಗಿ ಗೋಲ್ ಬೊಗರಿ, ಜೋಕಾಲಿಯಲ್ಲಿ ಜೀಕುವ ಮೂಲಕ ಮಹಿಳೆಯರು, ಮಕ್ಕಳು ಸಂಭ್ರಮದ ಅಲೆಯಲ್ಲಿ ತೇಲಿದರು. ಇದೇ ವೇಳೆ ಮನೆಯಲ್ಲಿ ತಯಾರಿಸಿದ್ದ ಶೇಂಗಾ, ಪುಠಾಣಿ, ರವೆ, ದಾನಿ, ಅಳ್ಳಿಟ್ಟು, ಎಳ್ಳು ಸೇರಿ ಇನ್ನಿತರ ಉಂಡಿಗಳನ್ನು ನೈವೇದ್ಯವಾಗಿ ಅರ್ಪಿಸಿ, ಬಳಿಕ ಮನೆಯ ಮಂದಿಯೆಲ್ಲ ಒಟ್ಟಿಗೆ ಕುಳಿತು ಭೋಜನ ಸವಿದರು.
ಅಲ್ಲದೆ ಶ್ರಾವಣ ಮಾಸದ ಅಂಗವಾಗಿ ಮನೆಯಂಗಳದ ಬೃಹತ್ ಮರಗಳಿಗೆ ಹಗ್ಗದಿಂದ ಜೋಕಾಲಿ ಕಟ್ಟಿದ್ದು ಅಲ್ಲಲ್ಲಿ ಕಂಡು ಬಂದಿತು. ಮಕ್ಕಳು, ಮಹಿಳೆಯರು, ವಯಸ್ಕರರು ಸರದಿಯಂತೆ ಜೋಕಾಲಿ ಜೀಕಿ ಸಂಭ್ರಮಿಸಿದರು. ಒಬ್ಬರು, ಇಬ್ಬರು ಜೋಕಾಲಿಯಲ್ಲಿ ಜೀಕಿದರೆ, ಇನ್ನುಳಿದವರು ಬದುಕಿನ ಸಾರ ಹೇಳುವ ಜಾನಪದ ಹಾಡುಗಳನ್ನು ಹಾಡಿದರು.