ವಿಜಯವಾಣಿ ಸುದ್ದಿಜಾಲ ಕಲಬುರಗಿ
ನಾಗರ ಪಂಚಮಿ ಹಬ್ಬವನ್ನು ತೊಗರಿ ನಾಡಿನಲ್ಲಿ ಸೋಮವಾರ ಶ್ರದ್ಧಾ ಭಕ್ತಿಯ ಜತೆಗೆ ಸಡಗರ ಸಂಭ್ರಮದಿಂದ ಆಚರಿಸಲಾಗುತ್ತಿದೆ. ಕಲಬುರಗಿ ನಗರ ಮತ್ತು ಜಿಲ್ಕೆಯ ಎಲ್ಲಡೆ ಹಬ್ಬದ ಸಂಭ್ರಮ ಕಳೆಗಟ್ಟಿದೆ.
ಸೋಮವಾರ ಬೆಳಗ್ಗೆ ಹೆಂಗಳೆಯರು ಮತ್ತು ಮಕ್ಕಳು ಪವಿತ್ರ ಸ್ನಾನ ಮಾಡಿ ಮನೆಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಸಮೀಪದ ನಾಗರಕಟ್ಟೆಗಳಿಗೆ, ನಾಗ ದೇವತೆ ದೇವಾಲಯಗಳಿಗೆ ತೆರಳಿ ನಾಗದೇವರಿಗೆ ಹಾಲು ಎರೆದರು. ಕೆಲವು ಕಡೆ ಹುತ್ತಕ್ಕೆ ಹಾಲು ಎರೆದು ಭಕ್ತಿ ಮೆರದರು.
ಗೋದುತಾಯಿ ನಗರದ ಶಿವ ಮಂದಿರದ ನಾಗದೇವತೆ ಕಟ್ಟೆ, ಮಹಾಂತ ನಗರದ ನಾಗದೇವತೆ ಗುಡಿ, ಕರುಣೇಶ್ವರ ನಗರ, ಜಯನಗರ, ಓಂ ನಗರ, ಶಹಾಬಜಾರ, ನೆಹರು ಗಂಜ್, ಖೂಬಾ ಪ್ಲಾಟ್, ಸಂಗಮೇಶ್ವರ ಕಾಲನಿ, ವಿದ್ಯಾನಗರ, ದೇವಿನಗರ, ರೇವಣಸಿದ್ದೇಶ್ವರ ನಗರ ಮೊದಲಾದ ಕಡೆಗಳಲ್ಲಿನ ನಾಗ ದೇವರ ವಿಗ್ರಹಗಳಿಗೆ ಮಹಿಳೆಯರು ಹಾಲೆರೆದು ಪೂಜೆ ಸಲ್ಲಿಸಿ ರಕ್ಷಣೆಗೆ ಪ್ರಾರ್ಥಿಸಿದರು.
ನಾಡಿಗೆಲ್ಲಾ ದೊಡ್ಡ ಡಂದು ಕರೆಸಿಕೊಳ್ಳುವ ನಾಗರ ಪಂಚಮಿ ಹಬ್ಬವನ್ನು ಪ್ರತಿ ವರ್ಷ ಶ್ರಾವಣ ಮಾಸದ ಶುಕ್ಲ ಪಕ್ಷದ ಐದನೇ ದಿನದಂದು ಆಚರಿಸಿಕೊಂಡು ಬರಲಾಗುತ್ತದೆ.
ಈ ದಿನ ನಾಗದೇವತೆಯನ್ನು ಪೂಜಿಸಿ ಪ್ರಾರ್ಥನೆ ಸಲ್ಲಿಸುವುದು ಎಲ್ಲಡೆ ಕಂಡು ಬರುತ್ತಿದೆ. ಹಬ್ಬದಂದು ನಾಗದೇವತೆಯೊಂದಿಗೆ ಶಿವನನ್ನು ಪೂಜಿಸುವುದರಿಂದ ಧನ-ಧಾನ್ಯಗಳಿಗೆ ಕೊರತೆಯಾಗುವುದಿಲ್ಲ ಜತೆಗೆ ದುಷ್ಟ ಅಸಕ್ತಿಗಳಿಂದ ರಕ್ಷಣೆ ಸಿಗಲಿದೆ ಎನ್ನುವ ನಂಬಿಕೆ ಇದೆ.
. ಕೆಲವೆಡೆ ಜನರು ತಮ್ಮ ಮನೆಯ ಗೋಡೆಯ ಮೇಲೆ ಹಾವಿನ ಚಿತ್ರಗಳನ್ನು ಬಿಡಿಸಿ ಪೂಜಿಸಿದರೆ, ಇನ್ನು ಕೆಲವೆಡೆ ಹತ್ತಿರದ ನಾಗ ಸನ್ನಿಧಾನಕ್ಕೆ ಭೇಟಿ ನೀಡಿ ದರುಶನ ಪಡೆದುಕೊಂಡರು.