ದೊಡ್ಡಬಳ್ಳಾಪುರ ತಾಲೂಕು ತೂಬಗೆರೆ ಹೋಬಳಿ ಘಾಟಿ ಸುಬ್ರಹ್ಮಣ್ಯ ಕ್ಷೇತ್ರದಲ್ಲಿ ನಾಗರ ಪಂಚಮಿಯಂದು ಮಹಿಳೆಯರು ನಾಗರ ಕಲ್ಲುಗಳಿಗೆ ಪೂಜೆ ಸಲ್ಲಿಸಿ ಹಾಲೆರದರು. 
ಜಿಲ್ಲೆ

ಘಾಟಿಯಲ್ಲಿ ನಾಗರಪಂಚಮಿ ಸಂಭ್ರಮ

ಬೆಂಗಳೂರು ಗ್ರಾಮಾಂತರ ಡೆಸ್ಕ್

ತೂಬಗೆರೆ : ನೂರಾರು ಮೀಟರ್​ ದೂರದವರೆಗೆ ಸಾಲುಗಟ್ಟಿ ನಿಂತ ಭಕ್ತರು, ನಾಗರ ಕಲ್ಲುಗಳಿಗೆ ಹಾಲೆರೆದು ಪೂಜಿಸಿದ ಮಹಿಳೆಯರು, ಎಲ್ಲೆಲ್ಲೂ ಭಕ್ತಿ& ಭಾವದ ಕ್ಷಣ...

ಇದು, ನಾಗರಪಂಚಮಿ ದಿನವಾದ ಮಂಗಳವಾರ ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆ ಹೋಬಳಿ ಘಾಟಿ ಸುಬ್ರಹ್ಮಣ್ಯಸ್ವಾಮಿ ದೇವಾಲಯದಲ್ಲಿ ಕಂಡು ಬಂದ ದೃಶ್ಯ. ಮುಂಜಾನೆಯಿಂದಲೇ ಸ್ವಾಮಿಗೆ ಅಭಿಷೇಕ, ಅಲಂಕಾರ, ಮಂಗಳಾರತಿ ನಡೆದು ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ದೇವಾಲಯವನ್ನು ತಳಿರು ತೋರಣ ಮತ್ತು ಹೂವುಗಳಿಂದ ಸಿಂಗಾರ ಮಾಡಲಾಗಿತ್ತು. ರಾತ್ರಿ ವಿದ್ಯುತ್​ ದೀಪಗಳ ಅಲಂಕಾರಗಳಿಂದ ದೇವಾಲಯ ಮಿನುಗುತ್ತಿತ್ತು, ಮಂಗಳವಾರ ಬೆಳ್ಳಂಬೆಳಗ್ಗೆಯೇ ಮಹಿಳೆಯರು, ಮಕ್ಕಳು, ಪುರುಷರು, ಯುವಕ& ಯುವತಿಯರು ನಾಗರಕಲ್ಲುಗಳಿಗೆ ಹಾಲೆರೆದು ಪೂಜೆ ಸಲ್ಲಿಸಿ ಕಷ್ಟಗಳಿಂದ ಪಾರು ಮಾಡಿ ಇಷ್ಟಾರ್ಥ ನೆರವೇರಿಸುವಂತೆ ಕೋರಿದರು.

ನಾಗರ ಕಲ್ಲುಗಳನ್ನು ಪೂಜಿಸುವುದರಿಂದ ನಾಗದೋಷದಿಂದ ಉಂಟಾಗುವ ಎಲ್ಲ ಸಮಸ್ಯೆಗಳು ದೂರವಾಗುತ್ತವೆ ಎಂಬ ನಂಬಿಕೆಯಿಂದಾಗಿ ಶ್ರೀ ಕ್ಷೇತ್ರದಲ್ಲಿ ಜನಸಾಗರವೇ ಹರಿದು ಬಂದಿತ್ತು. ಪ್ರತಿ ವರ್ಷಕ್ಕಿಂತ ಈ ವರ್ಷ ಹಿರಿಯ ನಾಗರಿಕರು, ಅಂಗವಿಕಲರಿಗೆ ವಾಹನ ವ್ಯವಸ್ಥೆ ಮಾಡಲಾಗಿತ್ತು. ಗರ್ಭಿಣಿಯರು ಹಾಗೂ ವೃದ್ಧರಿಗೆ ಶ್ರೀ ದರ್ಶನದ ವ್ಯವಸ್ಥೆ ಮಾಡಲಾಗಿತ್ತು. ಸರದಿ ಸಾಲಿನಲ್ಲಿ ನಿಲ್ಲುವ ಭಕ್ತರಿಗೆ ನೀರು ಮತ್ತು ಮಜ್ಜಿಗೆ ನೀಡುವ ವ್ಯವಸ್ಥೆ ಮಾಡಲಾಗಿತ್ತು. ಹಬ್ಬದ ವಿಶೇಷವಾಗಿ ದೇವಾಲಯ ಪ್ರಾಧಿಕಾರದಿಂದ ಬೆಳಗ್ಗೆಯಿಂದಲೇ ಊಟದ ವ್ಯವಸ್ಥೆ ಮಾಡಲಾಗಿತ್ತು. ದರ್ಶನಕ್ಕೆ ಸರದಿ ಸಾಲಿನಲ್ಲಿ ಬರುವ, ನಿಂತುಕೊಳ್ಳಲಾಗದೆ ಇರುವ ಭಕ್ತರಿಗೆ ಅಲ್ಲಲ್ಲಿ ಕುಳಿತುಕೊಳ್ಳಲು ಆಸನಗಳ ವ್ಯವಸ್ಥೆ ಮಾಡಲಾಗಿತ್ತು.

ದೋಷ ನಿವಾರಣೆ : ಘಾಟಿ ಸುಬ್ರಹ್ಮಣ್ಯ ಕ್ಷೇತ್ರ ದೇವಸ್ಥಾನ ನಾಗದೋಷ ನಿವಾರಣೆಗೆ ಹೆಸರುವಾಸಿ. ಹೀಗಾಗಿ ಮಕ್ಕಳ ದೋಷ, ಸ್ತ್ರೀ ದೋಷಗಳಿದ್ದರೆ ಇಲ್ಲಿ ಬಂದು 5 ವಾರ ಪೂಜೆ ಸಲ್ಲಿಸುವುದರಿಂದ ದೋಷಗಳು ನಿವಾರಣೆಯಾಗುತ್ತದೆ ಎಂಬ ಪ್ರತಿತಿ ಇದೆ ಎಂದು ಪ್ರಧಾನ ಅರ್ಚಕ ಶ್ರೀನಿಧಿ ಹೇಳಿದರು.