ಜಿಲ್ಲೆ

ನಾಗರ ಪಂಚಮಿ, ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ

Rest of Bengaluru - Chikkaballapura - Venkatesh

ಚಿಕ್ಕಬಳ್ಳಾಪುರ: ಜಿಲ್ಲಾದ್ಯಂತ ನಾಗರ ಪಂಚಮಿ ಅಂಗವಾಗಿ ಶುಕ್ರವಾರ ವಿವಿಧ ದೇವಾಲಯಗಳಲ್ಲಿ ವಿಶೇಷ ಪೂಜಾ ಕಾರ್ಯಕ್ರಮ ಶ್ರದ್ಧಾ ಭಕ್ತಿಯಿಂದ ನೆರವೇರಿತು.

ನಗರದ ಹಳೇ ಸುಬ್ರಮಣ್ಯೇಶ್ವರ ಸ್ವಾಮಿ, ಎಚ್​.ಎಸ್​.ಗಾರ್ಡನ್​ ಶ್ರೀ ಶನೈಶ್ವರ ಸ್ವಾಮಿ, ಶಿರಡಿ ಸಾಯಿ ಬಾಬಾ ಮತ್ತು ಸುಬ್ರಮಣ್ಯೇಶ್ವರ ಸ್ವಾಮಿ, ಶ್ರೀ ಮರಳು ಸಿದ್ದೇಶ್ವರ ಸ್ವಾಮಿ, ಚಿತ್ರಾವತಿ ಶ್ರೀ ಸುಬ್ರಮಣ್ಯೇಶ್ವರ ಸ್ವಾಮಿ ಸೇರಿದಂತೆ ವಿವಿಧ ಆಲಯಗಳಲ್ಲಿ, ನಾಗರಕಲ್ಲುಗಳನ್ನು ಹೊಂದಿರುವ ಅಶ್ವತ್ಥಕಟ್ಟೆಗಳಲ್ಲಿ ಯುವತಿಯರು, ಮಹಿಳೆಯರು ವಿಶೇಷ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಕಂಡು ಬಂತು.

ಉಪವಾಸದಲ್ಲಿ ಆಲಯಕ್ಕೆ ಆಗಮಿಸಿದ ಭಕ್ತರು ಸಮೀಪದ ಹುತ್ತ, ನಾಗರಕಲ್ಲುಗಳಿಗೆ ಹಾಲು, ತುಪ್ಪ, ಸಕ್ಕರೆಯನ್ನು ಸುರಿದು ದಾರವನ್ನು ಸುತ್ತಿದರು. ಬಳಿಕ ಅರಿಶಿನ ಕುಂಕುಮ, ನೈವೇದ್ಯ ಸಮರ್ಪಿಸಿ ಬಳಿಕ ಅರತಿ ಬೆಳಗಿದರು. ಹಲವರು ಹರಕೆಯನ್ನು ತೀರಿಸಿದರು. ಇನ್ನೂ ಆಲಯಗಳಲ್ಲಿ ದೇವರಿಗೆ ವಿಶೇಷ ಅಭಿಷೇಕ ಮತ್ತು ಅಲಂಕಾರವನ್ನು ಕೈಗೊಳ್ಳಲಾಗಿತ್ತು. ಬೆಳಗ್ಗೆಯಿಂದಲೇ ಭಕ್ತಾದಿಗಳು ಸರತಿ ಸಾಲಿನಲ್ಲಿ ಬಂದು ದೇವರ ದರ್ಶನ ಪಡೆದರು.

ನಾಗರ ಪಂಚಮಿ ದಿನದಂದು ನಾಗದೇವರನ್ನು ಪೂಜಿಸಿದರೆ ಒಳ್ಳೆಯದಾಗುತ್ತದೆ. ಸರ್ಪದೋಷ ದೂರವಾಗುತ್ತದೆ. ಇದಕ್ಕೆ ಬೆಳಗ್ಗೆಯಿಂದ ಉಪವಾಸವಿದ್ದು ಆಲಯ ಮತ್ತು ಮನೆಯಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಳಿಕ ನಾಗರಪಂಚಮಿ ಪುರಾಣ ಕತೆಯನ್ನು ಕೇಳುವುದು ಸಂಪ್ರದಾಯವಾಗಿದೆ.