ವಿಹಿಂಪ ದಕ್ಷಿಣ ಭಾರತ ಧರ್ಮಪ್ರಚಾರ ಪ್ರಮುಖ್ ಸೂರ್ಯನಾರಾಯಣ ಅಭಿಮತ
ನಾಗಮಂಗಲ: ಕಾಂಗ್ರೆಸ್ ಸರ್ಕಾರದ ತುಷ್ಟೀಕರಣ ನೀತಿಯೇ ನಾಗಮಂಗಲದ ಗಲಭೆಗೆ ಕಾರಣ ಎಂದು ವಿಶ್ವಹಿಂದು ಪರಿಷತ್‌ನ ದಕ್ಷಿಣ ಭಾರತ ಧರ್ಮ ಪ್ರಚಾರ ಪ್ರಮುಖ್ ಸೂರ್ಯನಾರಾಯಣ ದೂರಿದರು.
ಕೋಮು ಗಲಭೆ ಹಿನ್ನೆಲೆಯಲ್ಲಿ ಬೆಂಕಿಗೆ ಆಹುತಿಯಾದ ಅಂಗಡಿಗಳನ್ನು ಸೋಮವಾರ ವೀಕ್ಷಿಸಿದ ನಂತರ ಅವರು ಸುದ್ದಿ ಗೋಷ್ಠಿಯಲ್ಲಿ ಮಾತನಾಡಿ,ಸರ್ಕಾರ ಮುಸಲ್ಮಾನರನ್ನು ಓಲೈಸುವಿಕೆ ಧೋರಣೆಯಿಂದ ಕೆಲವು ಮುಸ್ಲಿಂ ಜಿಹಾದಿ ಮನಸುಗಳುವ್ಯವಸ್ಥಿತ ಸಂಚು ರೂಪಿಸಲು ಮುಂದಾಗುತ್ತಿದೆ. ರಾಜ್ಯದ ಹಲವೆಡೆ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗುತ್ತಿದೆ ಎಂದು ದೂರಿದರು.
ಕಪ್ಪುಚುಕ್ಕೆಯಂತೆ ಬಿಂಬಿತವಾಗುತ್ತಿದೆ: ದೇಶದಾದ್ಯಂತ ನಾಗಮಂಗಲ ಕಪ್ಪುಚುಕ್ಕೆಯಂತೆ ಬಿಂಬಿತವಾಗುತ್ತಿದೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಮುಸ್ಲಿಂ ಸಮುದಾಯದ ಕೆಲವು ಜಿಹಾದಿ ಮನುಸ್ಥಿತಿಯವರಿಂದ ಗಲಭೆಗಳು ಹೆಚ್ಚಾಗುತ್ತಿದೆ. ಗೋಹತ್ಯೆ, ಲವ್ ಜಿಹಾದ್, ಹಿಂದುಗಳ ಆಚರಣೆಗಳಿಗೆ ಅಡ್ಡಿ ಮಾಡುವುದು ಅಧಿಕವಾಗಿದೆ ಎಂದು ಆರೋಪಿಸಿದರು.
ಪಟ್ಟಣದಲ್ಲಿ ಶಾಂತಿಯುತವಾಗಿ ನಡೆಯುತ್ತಿದ್ದ ಮೆರವಣಿಗೆಗೆ ಅಡ್ಡಿಪಡಿಸಿರುವುದನ್ನು ನೋಡಿದರೆ ಇದೊಂದು ಪೂರ್ವನಿಯೋಜಿತ ಕೃತ್ಯ ಎಂದು ಸಾಬೀತಾಗುತ್ತದೆ.
ಕೇರಳದ ಬಹುಸಂಖ್ಯಾತ ಮುಸ್ಲಿಮರೇ ಇರುವ ಮಣಪ್ಪುರಂ ಮೂಲದವರು ಈ ಪ್ರಕರಣದಲ್ಲಿ ಬಂಧಿತರಾಗಿರುವುದು ಅನುಮಾನಕ್ಕೆ ಇನ್ನಷ್ಟು ಪುಷ್ಟಿ ನೀಡಿದೆ. ಅವರ ಎಲ್ಲ ಕೆಲಸಗಳಿಗೆ ಕಾಂಗ್ರೆಸ್ ಸರ್ಕಾರ ಕುಮ್ಮಕ್ಕು ನೀಡುತ್ತಿರುವುದೇ ಕಾರಣ ಎಂದು ಟೀಕಿಸಿದರು.
ಮೊದಲೇ ಬಾಗಿಲು ಹಾಕಿದ್ದರು: ಗಲಭೆ ದಿನ ಸಂಜೆ 4 ಗಂಟೆ ವೇಳೆಗೆ ಬಹುತೇಕ ಮುಸ್ಲಿಮರ ಅಂಗಡಿಗಳು ಬಾಗಿಲು ಹಾಕಿದ್ದವು. ಪೆಟ್ರೋಲ್ ಬಾಂಬ್ ಇದ್ದ ವಾಹನಗಳು ಓಡಾಡಿವೆ. ಮಾಸ್ಕ್‌ಗಳನ್ನು ಮೊದಲೇ ಖರೀದಿ ಮಾಡಲಾಗಿದೆ. ಒಟ್ಟಾರೆ ಪೂರ್ವನಿಯೋಜಿತ ಗಲಭೆಗೆ 3 ದಿನಗಳ ಹಿಂದೆಯೇ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಿದರು. ಪೋಲೀಸ್ ಇಲಾಖೆ ಘಟನೆಯನ್ನು ಗಂಭೀರವಾಗಿ ಪರಿಗಣಿಸಿ ಯಾರ ಕೈವಾಡ ಇದೆ ಎಂಬುದನ್ನು ಪತ್ತೆ ಹಚ್ಚಬೇಕು. ಕೋಕಾ ಕಾಯ್ದೆಯಡಿ ಆರೋಪಿಗಳನ್ನು ಬಂಧಿಸಬೇಕು ಎಂದರು.
ಎನ್‌ಐಎ ತನಿಖೆಗೆ ಆಗ್ರಹ: ಘಟನೆಗೆ ಹಿಂದುಗಳು ಕಾರಣರಲ್ಲ. ಹಿಂದುಗಳ ಮನೆ ಮನೆಗೆ ಹೋಗಿ ಅಮಾಯಕರನ್ನು ಬಂಧಿಸುತ್ತಿರುವುದು ಸಲ್ಲದು. ಹಿಂದುಗಳ ಹಿತರಕ್ಷಣೆಗೆ ಜಿಲ್ಲಾಡಳಿತ ನಮಗೆ ಸಂಪೂರ್ಣ ಸಹಕಾರ ನೀಡಬೇಕು. ಕೇರಳದ ನಂಟಿರುವ ಕಾರಣ ಪ್ರಕರಣದ ಬಗ್ಗೆ ಎನ್‌ಐಎ ತನಿಖೆ ಮಾಡಿಸುವುದೇ ಸೂಕ್ತ . ರಾಜ್ಯ ಸರ್ಕಾರದ ಮೇಲೆ ನಮಗೆ ವಿಶ್ವಾಸವಿಲ್ಲ ಎಂದರು.
ವಿಶ್ವ ಹಿಂದು ಪರಿಷತ್‌ನ ಮೈಸೂರು ವಿಭಾಗ ಸಹಕಾರ್ಯದರ್ಶಿ ಬಾಲು ಮಾತನಾಡಿ ಗಲಭೆಯಲ್ಲಿ ಬಂಧಿತರಾಗಿರುವ ಅಮಾಯಕ ಹಿಂದುಗಳ ಪರವಾಗಿ ಕಾನೂನಾತ್ಮಕ ಹೋರಾಟ ಮಾಡುತ್ತೇವೆ. ಕೋರ್ಟ್‌ಗಳಲ್ಲಿ ಉಚಿತವಾಗಿ ವಾದ ನಡೆಸಲು ವಿಹಿಂಪ ನೆರವಾಗಲಿದೆ. ಊರು ತೊರೆದಿರುವ ಕುಟುಂಬಗಳಿಗೆ ಸಹಾಯಹಸ್ತ ನೀಡಲೂ ಪರಿಷತ್ ಮುಂದಾಗಿದೆ ಎಂದರು.
ವಿಹಿಂಪ ರಾಜ್ಯ ಪ್ರಕೋಷ್ಟ ಸಂಯೋಜಕ ಪ್ರದೀಶ್, ದಕ್ಷಿಣ ಭಾರತ ಸತ್ಸಂಗ ಪ್ರಮುಖ್ ಮಹಾಬಲೇಶ್, ಮಂಡ್ಯ ಜಿಲ್ಲಾ ವಿಹಿಂಪ ಕಾರ್ಯದರ್ಶಿ ರಾಘವೇಂದ್ರ ಪುಣ್ಯಕೋಟಿ, ತಾಲೂಕು ಅಧ್ಯಕ್ಷ ಅಜಿತ್‌ಜೈನ್, ಕಾರ್ಯದರ್ಶಿ ಮಹೇಶ್, ಜಿಲ್ಲಾ ಬಜರಂಗದಳ ಸಹ ಸಂಯೋಜಕ ಶಶಿಕಿರಣ್, ಮುಖಂಡ ಸೋಮಶೇಖರ್ ಇದ್ದರು.