ನಾಗಮಂಗಲದ ಜೂನಿಯರ್ ಕಾಲೇಜು ಆವರಣದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವದಲ್ಲಿ ರಂಗಕರ್ಮಿ ಸುಂದರ್ ಅವರನ್ನು ಅಭಿನಂಧಿಸಲಾಯಿತು. 
ಜಿಲ್ಲೆ

ರಂಗಾಸಕ್ತರ ಅಕ್ಕರೆ ಭೂಮಿ ನಾಗಮಂಗಲ

ನಾಗಮಂಗಲ: ಕಲೆ, ಸಾಹಿತ್ಯ, ಜಾನಪದ ಮತ್ತು ರಂಗಭೂಮಿಯನ್ನು ಪೋಷಿಸುತ್ತಿರುವ ನಾಗಮಂಗಲವನ್ನು ರಂಗಾಸಕ್ತರ ಅಕ್ಕರೆಯ ಭೂಮಿ ಎಂದರೆ ತಪ್ಪಾಗಲಾರದು ಎಂದು ನಟ ಹಾಗೂ ಹಿರಿಯ ರಂಗಕರ್ಮಿ ಡಾ.ಎಂ.ಕೆ.ಸುಂದರ್‌ರಾಜ್ ಹೇಳಿದರು.

ಪಟ್ಟಣದ ಸರ್ಕಾರಿ ಜೂನಿಯರ್ ಕಾಲೇಜು ಆವರಣದಲ್ಲಿ ಕನ್ನಡ ಸಂಘದ ವತಿಯಿಂದ ಆಯೋಜಿಸಿದ್ದ ರಂಗಸಪ್ತಾಹ ರಾಜ್ಯಮಟ್ಟದ ನಾಗರಂಗ ನಾಟಕೋತ್ಸವದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದರು.

ಒಬ್ಬ ನಟ ನಿಜವಾಗಿ ನಟನಾಗಿ ಕಾಣುವುದು ರಂಗಭೂಮಿಯಲ್ಲಿ ಮಾತ್ರ. ಆದರೆ ಮನುಷ್ಯ ಮನುಷ್ಯನಂತೆ ನಿಜಸ್ವರೂಪದಲ್ಲಿ ಕಾಣುವುದು ನಾಟಕಗಳಲ್ಲಿ ಮಾತ್ರ. ಭಾರತದಲ್ಲಿ ನಾಗಮಂಗಲವನ್ನು ಹೊರತುಪಡಿಸಿ ಈ ರೀತಿಯಲ್ಲಿ ನಾಗರಂಗವನ್ನು ಎಲ್ಲಿಯೂ ಕಟ್ಟಿಲ್ಲ ಎಂದು ಹರ್ಷ ವ್ಯಕ್ತಪಡಿಸಿದರು.

ನಟ ಸುಂದರ್ ಮಾತನಾಡಿ, ಇಂದಿಗೂ ನಿಜವಾದ ರಂಗಭೂಮಿ ಕಲೆ ಉಳಿದಿರುವುದು ಇಂತಹ ಗ್ರಾಮೀಣ ಪ್ರದೇಶಗಳಲ್ಲಿ. ಇತ್ತೀಚಿನ ಶಿಕ್ಷಣ ಎಲ್ಲವನ್ನೂ ಹೇಳಿಕೊಡುತ್ತದೆ. ಆದರೆ ಅದರಿಂದ ಅವರು ಮಾಹಿತಿಯನ್ನಷ್ಟೆ ಪಡೆಯುತ್ತಿದ್ದಾರೆ ಹೊರತು ಅದು ಜ್ಞಾನವಾಗಲು ಸಾಧ್ಯವಿಲ್ಲ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ಕನ್ನಡ ಸಂಘದ ಕಾರ್ಯ ಚಟುವಟಿಕೆಗಳು ರಾಜ್ಯದಲ್ಲಿ ಹೆಸರು ಮಾಡಿವೆ. ನಾಡಿನ ಕಲೆಯ ಜೀವಂತಿಕೆಗಾಗಿ 16 ವರ್ಷಗಳಿಂದ ನಾಟಕೋತ್ಸವ ನಡೆಸುತ್ತಿರುವುದು ಶ್ಲಾಘನೀಯ. ಅತೀ ಶೀಘ್ರದಲ್ಲಿ ಕಲಾಮಂದಿರ ನಿರ್ಮಾಣಕ್ಕೆ ಜಾಗ ಗುರುತಿಸಲು ತಹಸೀಲ್ದಾರ್ ಅವರಿಗೆ ಸೂಚಿಸಿ ಜಾಗ ನಿಗದಿಯಾದ ನಂತರ ಕಲಾಮಂದಿರ ನಿರ್ಮಾಣಕ್ಕೆ ಕ್ರಮವಹಿಸುವುದಾಗಿ ಭರವಸೆ ನೀಡಿದರು.

ಕನ್ನಡ ಸಂಘದ ಅಧ್ಯಕ್ಷ ಕೆ.ಅಲಮೇಲ, ವಿಧಾನ ಪರಿಷತ್ ಮಾಜಿ ಸದಸ್ಯ ಎನ್.ಅಪ್ಪಾಜಿಗೌಡ, ಉದ್ಯಮಿ ಸ್ಟಾರ್ ಚಂದ್ರು, ಐಪಿಎಸ್ ಅಧಿಕಾರಿ ಬಿ.ಆರ್.ರವಿಕಾಂತೇಗೌಡ ಸೇರಿದಂತೆ ಮತ್ತಿತರರಿದ್ದರು.