ಜಿಲ್ಲೆ

ಶಾಸಕ ಸುರೇಶ್‌ಗೌಡ ಬಣಕ್ಕೆ ಗೆಲುವು

ನಾಗಮಂಗಲ : ತಾಲೂಕಿನ ಹೊಣಕೆರೆ ಹೋಬಳಿ ತಟ್ಟೆಕೆರೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಸ್ಥಾನಕ್ಕೆ ಶನಿವಾರ ನಡೆದ ಚುನಾವಣೆಯಲ್ಲಿ ಶಾಸಕ ಸುರೇಶ್‌ಗೌಡ ಬಣದ 10 ಜನ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.
ಸಂಘದ ಒಟ್ಟು 12 ಸ್ಥಾನಗಳ ಪೈಕಿ ಸಾಲಗಾರರ ಕ್ಷೇತ್ರದ 11 ಸ್ಥಾನಕ್ಕೆ 20 ಅಭ್ಯರ್ಥಿಗಳು ಹಾಗೂ ಸಾಲಗಾರರಲ್ಲದ ಕ್ಷೇತ್ರದ 1 ಸ್ಥಾನಕ್ಕೆ 3 ಜನ ಸ್ಪರ್ಧಿಸಿದ್ದರು. ಇದರಲ್ಲಿ ಸಾಲಗಾರರ ಕ್ಷೇತ್ರದಿಂದ ಪರಿಶಿಷ್ಟ ಪಂಗಡ ಮೀಸಲಾತಿಯಿಂದ ಮುನಿಯಮ್ಮ ಅವಿರೋಧವಾಗಿ ಆಯ್ಕೆಯಾಗಿದ್ದರು. ಹೀಗಾಗಿ ಇನ್ನುಳಿದ 10 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಶಾಸಕರ ಸುರೇಶ್‌ಗೌಡ ಬಣದಿಂದ 9 ಜನ ಮತ್ತು ಮಾಜಿ ಸಚಿವ ಚಲುವರಾಯಸ್ವಾಮಿ ಬಣದಿಂದ 10 ಜನ ಸ್ಪರ್ಧಿಸಿದ್ದರು.
ಸಾಲಗಾರರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಶಾಸಕ ಸುರೇಶ್‌ಗೌಡ ಬಣದ ಶ್ರೀನಿವಾಸೇಗೌಡ,ರಮೇಶ, ಧನಂಜಯ, ಸಂತೋಷ, ಲಕ್ಷ್ಮಣ, ನಂಜಮ್ಮ, ಕೆಂಪೇಗೌಡ, ಷಣ್ಮುಖಚಾರಿ, ಕುಮಾರ ಜಯ ಸಾಧಿಸಿದರೆ, ಚಲುವರಾಯಸ್ವಾಮಿ ಬಣದಿಂದ ಅನುಪಮಾ ಗೆಲುವು ಸಾಧಿಸಿದರು. ಸಾಲಗಾರರಲ್ಲದ ಕ್ಷೇತ್ರದಿಂದ ಸ್ಪರ್ಧಿಸಿದ್ದ ಚಲುವರಾಯಸ್ವಾಮಿ ಬೆಂಬಲಿಗ ನಾಗೇಗೌಡ ಅವರು ಶಾಸಕ ಸುರೇಶ್‌ಗೌಡ ಬಣ ಸೇರ್ಪಡೆಗೊಂಡು ಗೆಲುವು ಸಾಧಿಸಿದರು.
ಚುನಾವಣಾಧಿಕಾರಿಯಾಗಿ ಫೈರೋಜ್‌ಪಾಷ ಕರ್ತವ್ಯ ನಿರ್ವಹಿಸಿದರು. ವಿಧಾನ ಪರಿಷತ್ ಸದಸ್ಯ ಅಪ್ಪಾಜಿಗೌಡ, ಮಾಜಿ ಸಂಸದ ಶಿವರಾಮೇಗೌಡ, ಎಪಿಎಂಸಿ ಅಧ್ಯಕ್ಷ ಚನ್ನಪ್ಪ ಮುಂತಾದವರಿದ್ದರು.