- ನಾಗಮಂಗಲ : ದುಶ್ಚಟಗಳಿಂದ ದೂರವಿದ್ದರೆ ಕೌಟುಂಬಿಕ ಬದುಕು ಸುಂದರ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ಪಟ್ಟಣದ ಸರ್ಕಾರಿ ಪದವಿ ಪೂರ್ವ ಕಾಲೇಜು ಆವರಣದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜಿಲ್ಲಾ ಜನ ಜಾಗೃತಿ ವೇದಿಕೆ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಆಯೋಜಿಸಿದ್ದ ಗಾಂಧಿ ಸ್ಮತಿ ಮತ್ತು ಮದ್ಯಪಾನ ಮುಕ್ತರ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಜೀವನದಲ್ಲಿ ಎದುರಾಗುವ ಹಲವು ಸಮಸ್ಯೆಗಳಿಗೆ, ಮಾನಸಿಕ ಒತ್ತಡಗಳಿಗೆ ಧೂಮಪಾನ ಅಥವಾ ಮದ್ಯಪಾನವೇ ಪರಿಹಾರ ಅಲ್ಲ. ಇದನ್ನು ಅರಿತು ದುಶ್ಚಟಗಳಿಂದ ದೂರವಿರಬೇಕು. ಸಜ್ಜನರ ಸಹವಾಸವನ್ನೇ ಮಾಡಬೇಕು ಎಂದರು. ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಕಳೆದ ಹಲವು ವರ್ಷಗಳಿಂದ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸುತ್ತಿದೆ. ಮದ್ಯ ವ್ಯಸನಿಗಳನ್ನು ಚಟದಿಂದ ಮುಕ್ತರನ್ನಾಗಿ ಮಾಡಿ ಸುಂದರ ಕುಟುಂಬ ಮತ್ತು ಸಮಾಜಕ್ಕೆ ಅವರನ್ನು ಕೊಡುಗೆಯಾಗಿ ನೀಡುತ್ತಿದೆ. ಈ ಕಾಯಕ ನಿಜಕ್ಕೂ ಶ್ಲಾಘನೀಯ ಎಂದರು.
ಬದುಕಿನುದ್ದಕ್ಕೂ ಉತ್ತಮ ನಡತೆ ಅಳವಡಿಸಿಕೊಂಡು ದುಶ್ಚಟಗಳಿಂದ ಮುಕ್ತರಾಗಿದ್ದು, ಸಕಾರಾತ್ಮಕ ಚಿಂತನೆಗಳನ್ನೇ ರೂಢಿಸಿಕೊಳ್ಳಬೇಕು. ನಮ್ಮ ಬದುಕಿನಲ್ಲಾಗುವ ವ್ಯತ್ಯಯಗಳಿಂದ ಕುಟುಂಬದ, ಸಮಾಜದ ಆರೋಗ್ಯ ಹಾಳಾಗಬಾರದು. ಮದ್ಯಮುಕ್ತ ಜೀವನ ಸುಖಿ ಬದುಕಿಗೆ ಸಹಕಾರಿಯಾಗಲಿದೆ ಎಂದು ಸಚಿವರು ಹೇಳಿದರು. ರಾಷ್ಟ್ರಪಿತ ಗಾಂಧೀಜಿ ರಾಮರಾಜ್ಯದ ಕನಸು ಕಂಡಿದ್ದರು. ಅವರ ಕನಸು ಈಡೇರಬೇಕು ಎಂದರೆ ವ್ಯಸನ ಮುಕ್ತ ಸಮಾಜ ನಮ್ಮದಾಗಬೇಕು. ಸ್ವಚ್ಛ ಭಾರತ ಎಂಬುದು ಪ್ರತಿಯೊಬ್ಬರ ಸಂಕಲ್ಪವಾಗಬೇಕು ಎಂದು ಸಚಿವ ಎನ್.ಚಲುವರಾಯಸ್ವಾಮಿ ಸಲಹೆ ನೀಡಿದರು.
ಗಮನ ಸೆಳೆದ ಜಾಗೃತಿ ಜಾಥಾ: ಇದೇ ಸಂದರ್ಭದಲ್ಲಿ ಮದ್ಯಮುಕ್ತರಾಗಿ ನವ ಜೀವನಕ್ಕೆ ಅಡಿ ಇಟ್ಟ ಶಿಬಿರಾರ್ಥಿಗಳನ್ನು ಗೌರವಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ಮದ್ಯಮುಕ್ತ ನಾಗರಿಕರನ್ನು ಪಟ್ಟಣದ ಶ್ರೀ ಸೌಮ್ಯಕೇಶವಸ್ವಾಮಿ ದೇವಸ್ಥಾನದ ಆವರಣದಿಂದ ಪೂರ್ಣಕುಂಭ, ಪೂಜಾ ಕುಣಿತ ಹಾಗೂ ಡೊಳ್ಳು ಕುಣಿತದಂತಹ ಜಾನಪದ ಕಲಾತಂಡಗಳ ಪ್ರದರ್ಶನದ ಜತೆಗೆ ಜಾಥದೊಂದಿಗೆ ಮುಖ್ಯರಸ್ತೆಯಲ್ಲಿ ಕರೆತರಲಾಯಿತು. ಸ್ಥಳೀಯ ಶಾಲಾ ಮಕ್ಕಳಿಂದ ಭಿತ್ತಿಪತ್ರಗಳ ಪ್ರದರ್ಶನ ಗಮನ ಸೆಳೆಯಿತು. ದುಶ್ಚಟಗಳ ವಿರುದ್ಧ ಜಾಗೃತಿ ಮೂಡಿಸಲಾಯಿತು.
ಬೆಂಗಳೂರಿನ ಗಾಂಧಿ ಭವನದ ನಿರ್ದೇಶಕ ಪ್ರೊ.ಜಿ.ಬಿ.ಶಿವರಾಜು ಮತ್ತು ಬೆಳ್ತಂಗಡಿಯ ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕ ವಿವೇಕ್ ವಿನ್ಸೆಂಟ್ ಪಾಯಸ್ ಮಾತನಾಡಿದರು. ಮಂಡ್ಯ ಜಿಲ್ಲಾ ಜನ ಜಾಗೃತಿ ವೇದಿಕೆಯ ಅಧ್ಯಕ್ಷ ಕೊಣನೂರು ಹನುಮಂತಯ್ಯ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ತಾಲೂಕು ಯೋಜನಾಧಿಕಾರಿ ದಿವಾಕರ್, ಪುರಸಭಾ ಅಧ್ಯಕ್ಷ ಅಲೀ ಅನ್ಸರ್, ಜಾನಪದ ಅಕಾಡೆಮಿ ನಿರ್ದೇಶಕ ಅಣೆಚನ್ನಾಪುರ ಮಂಜೇಶ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನರಸಿಂಹಮೂರ್ತಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎನ್.ಜೆ.ರಾಜೇಶ್, ತಾ.ಪಂ.ಮಾಜಿ ಅಧ್ಯಕ್ಷ ಆರ್.ಕೃಷ್ಣೇಗೌಡ, ಮುಖಂಡ ಕೃಷ್ಣೇಗೌಡ ಹಾಗೂ ಜಿಲ್ಲಾ ಜನ ಜಾಗೃತಿ ವೇದಿಕೆಯ ವಿವಿಧ ತಾಲೂಕು ಅಧ್ಯಕ್ಷರು ಹಾಜರಿದ್ದರು.