ಜಿಲ್ಲೆ

ವಿಜೃಂಭಣೆಯಿಂದ ನಡೆದ ನೇರಲಕೆರಮ್ಮನ ರಥೋತ್ಸವ

ಎ. ಆರ್. ರಘುರಾಮ

ನಾಗಮಂಗಲ : ತಾಲೂಕಿನ ಶಕ್ತಿ ದೇವತೆಗಳಲ್ಲಿ ಒಂದಾದ ನೇರಲಕೆ ಗ್ರಾಮದ ಪಿ.ನೇರಲಕೆರೆಯಮ್ಮ ದೇವಿ ರಥೋತ್ಸವ ಶನಿವಾರ ಸಾವಿರಾರು ಭಕ್ತರ ಸಮ್ಮುಖ ವಿಜೃಂಭಣೆಯಿಂದ ನೆರವೇರಿತು. ಗ್ರಾಮದ ಹೊರವಲಯದಲ್ಲಿರುವ ಸನ್ನಿಧಿಯಲ್ಲಿ ಪೂಜೆ ಸಲ್ಲಿಸಿದ ನಂತರ ಸರ್ವಾಲಂಕೃತವಾದ ರಥದಲ್ಲಿ ಅಮ್ಮನವರ ಮೂರ್ತಿಯನ್ನು ಪ್ರತಿಷ್ಠಾಪಿಸಲಾಯಿತು.
ರಥ ಬೀದಿಯಲ್ಲಿ ಸಾವಿರಾರು ಭಕ್ತರು ರಥ ಎಳೆದರು. ಈ ಸಂದರ್ಭ ಬಾಳೆಹಣ್ಣು ಮತ್ತು ದವನವನ್ನು ರಥದ ಮೇಲೆ ಎಸೆಯುವ ಮೂಲಕ ಭಕ್ತರು ತಮ್ಮ ಭಕ್ತಿಯನ್ನು ಸಮರ್ಪಿಸಿದರು. ರಥ ಸಾಗುತ್ತಿದ್ದಾಗ ಗ್ರಾಮದ ಮಹಿಳೆಯರು ತಂಬಿಟ್ಟಿನ ಆರತಿಯನ್ನು ಹೊತ್ತು ಸಾಗಿದ್ದು ವಿಶೇವಾಗಿತ್ತು.
ರಥೋತ್ಸವ ಮಾರ್ಗದಲ್ಲಿ ವಿವಿಧ ಜಾನಪದ ಕಲಾ ತಂಡಗಳು, ಸೋಮನ ಕುಣಿತ, ಪೂಜಾ ಕುಣಿತ ಮುಂತಾದ ಕಲಾಪ್ರದರ್ಶನಗಳು ಗಮನ ಸೆಳೆದವು. ರಥೋತ್ಸವದ ಹಿನ್ನೆಲೆಯಲ್ಲಿ ಭಕ್ತರು ಬಾಯಿಬೀಗ ಹರಕೆಯನ್ನು ಸಮರ್ಪಿಸಿದರು. ರಥ ಗ್ರಾಮದೊಳಗಿನಿಂದ ದೇವಾಲಯ ಆವರಣ ತಲುಪುತ್ತಿದ್ದಂತೆ ದೇವಾಲಯದ ಅರ್ಚಕರು, ಬಾಯಿ ಬೀಗ ಹಾಕಿಕೊಂಡಿದ್ದ ಭಕ್ತರು, ಹಾಗೂ ಮಹಿಳೆಯರು ಸೇರಿದಂತೆ ನೂರಾರು ಜನ ಕೊಂಡೋತ್ಸವದಲ್ಲಿ ಪಾಲ್ಗೊಂಡರು. ಮಂಡ್ಯ, ತುಮಕೂರು, ರಾಮನಗರ, ಶಿವಮೊಗ್ಗ, ಮೈಸೂರು, ಮಡಿಕೇರಿ, ಹಾಸನ, ಬೆಂಗಳೂರು ಸೇರಿದಂತೆ ವಿವಿಧ ಜಿಲ್ಲೆಗಳಿಂದ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.