ನಾಗಮಂಗಲ ಕೋಮು ಗಲಭೆ ಹಿನ್ನೆಲೆ
- ನಾಗಮಂಗಲ: ನಾಗಮಂಗಲ ಪಟ್ಟಣದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆಗೆ ಸಂದರ್ಭ ನಡೆದ ಕೋಮುಗಲಭೆಗೆ ಸಂಬಂಧಿಸಿದಂತೆ ಪೊಲೀಸರು ಬಂಧಿಸುತ್ತಾರೆ ಎಂಬ ಭಯದಿಂದ ಊರು ಬಿಟ್ಟಿದ್ದ ಭದ್ರಿಕೊಪ್ಪಲಿನ ಯುವಕನೊಬ್ಬ ಶನಿವಾರ ಬ್ರೈನ್‌ಸ್ಟ್ರೋಕ್‌ನಿಂದ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾನೆ.
ಭದ್ರಿಕೊಪ್ಪಲು ಕಿರಣ್(28) ಮೃತ. ಗ್ರಾಮದಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭ ನಡೆದ ಗಲಭೆಗೆ ಸಂಬಂಧಿಸಿದಂತೆ 13 ಜನರನ್ನು ಪೊಲೀಸರು ಬಂಧಿಸಿದ್ದರು. ಎಲ್ಲರೂ ಸದ್ಯ ನ್ಯಾಯಾಂಗ ಬಂಧನದಲ್ಲಿದ್ದಾರೆ. ಈ ನಡುವೆ ಗ್ರಾಮದ ಹಲವರು ಬಂಧನ ಭೀತಿಯಿಂದ ಊರು ತೊರೆದಿದ್ದರು. ಕಿರಣ್ ಕೂಡ ಊರು ಬಿಟ್ಟು ಬೆಂಗಳೂರಿಗೆ ಹೋಗಿದ್ದ. ಆತನ ತಂದೆಯೂ ಆರೋಪಿಯಾಗಿ ನ್ಯಾಯಾಂಗ ಬಂಧನದಲ್ಲಿದ್ದಾರೆ. ತಂದೆಯ ಬಂಧನದಿಂದ ಮಾನಸಿಕವಾಗಿ ನೊಂದಿದ್ದ ಈತ ತಾನೂ ಸೆರೆಯಾಗಬಹುದು ಎಂಬ ಆತಂಕದಿಂದಲೇ ಬ್ರೈನ್ ಸ್ಟ್ರೋಕ್‌ಗೆ ತುತ್ತಾಗಿದ್ದು, ಬೆಂಗಳೂರಿನ ಆಸ್ಪತ್ರೆಯಲ್ಲಿ ಶನಿವಾರ ಮೃತಪಟ್ಟಿದ್ದಾನೆ. ಮೃತದೇಹವನ್ನು ಶನಿವಾರ ಸ್ವಗ್ರಾಮಕ್ಕೆ ತರಲಾಗಿದೆ. ಈ ಸಂದರ್ಭ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲುಮುಟ್ಟುವಂತಿತ್ತು.
ಅಂತ್ಯಕ್ರಿಯೆಗೆ ಅನುಮತಿ: ಕುಟುಂಬಕ್ಕೆ ಕಿರಣ್ ಮತ್ತು ಅವರ ತಂದೆ ಇಬ್ಬರೂ ಆಧಾರವಾಗಿದ್ದರು. ಗಲಭೆ ಪ್ರಕರಣದಿಂದ ತಂದೆ ಜೈಲು ಸೇರಿದ್ದರೆ, ಇತ್ತ ಕಿರಣ್ ಊರು ಬಿಟ್ಟಿದ್ದ. ಇಬ್ಬರೂ ಇಲ್ಲದೆ ಕುಟುಂಬ ವಾರದಿಂದ ಸೊರಗಿತ್ತು. ಇದ್ದ ಒಬ್ಬನೇ ಮಗನನ್ನು ಕಳೆದುಕೊಂಡಿರುವ ಕುಮಾರ್, ಮಗನ ಅಂತಿಮ ದರ್ಶನಕ್ಕಾಗಿ ನ್ಯಾಯಾಲಯದ ಅನುಮತಿ ಪಡೆದಿದ್ದಾರೆ. ಭಾನುವಾರ ನಡೆಯಲಿರುವ ಅಂತ್ಯಕ್ರಿಯೆಯಲ್ಲಿ ಅವರು ಪಾಲ್ಗೊಳ್ಳಲಿದ್ದಾರೆ.
ಗ್ರಾಮದಲ್ಲಿ ಬಿಗಿ ಪೊಲೀಸ್ ಪಹರೆ: ಕಿರಣ್ ಮೃತಪಟ್ಟ ವಿಚಾರ ತಿಳಿದ ಕೂಡಲೇ ಪೊಲೀಸರು ಅಲರ್ಟ್ ಆಗಿದ್ದಾರೆ. ಭದ್ರಿಕೊಪ್ಪಲು ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಯಾವುದೇ ರೀತಿಯ ಅಹಿತಕರ ಘಟನೆಗೆ ಅವಕಾಶವಾಗದಂತೆ ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸ್ ಪಹರೆ ನಿಯೋಜಿಸಲಾಗಿದೆ.
ನೀರವ ಮೌನ: ಪ್ರಕರಣದ 13 ಜನ ನ್ಯಾಯಾಂಗ ಬಂಧನದಲ್ಲಿರುವುದು ಒಂದೆಡೆಯಾದರೆ, ಗ್ರಾಮದ ಕೆಲವರು ಊರು ತೊರೆದಿದ್ದು, ಅವರ ಕುಟುಂಬದಲ್ಲೂ ಈಗ ಆತಂಕ ಇಮ್ಮಡಿಸಿದೆ. ಕಳೆದ 2 ದಿನಗಳ ಹಿಂದಷ್ಟೇ ಕೇಂದ್ರಸಚಿವ ಎಚ್.ಡಿ.ಕುಮಾರಸ್ವಾಮಿ ಭದ್ರಿಕೊಪ್ಪಲು ಗ್ರಾಮಕ್ಕೆ ಭೇಟಿ ನೀಡಿ ಬಂಧನಕ್ಕೊಳಗಾಗಿರುವವರ ಮನೆಗಳಿಗೆ ಆರ್ಥಿಕ ಸಹಾಯ ನೀಡುವ ಜತೆಗೆ ಧೈರ್ಯ ಹೇಳಿದ್ದರು. ಮತ್ಯಾರನ್ನೂ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಬಾರದೆಂದು ಪೊಲೀಸರಿಗೆ ತಾಕೀತು ಮಾಡಿದ್ದರು. ಇದೆಲ್ಲರ ನಡುವೆಯೂ ಭಯದಿಂದ ಯುವಕ ಸಾವುಕಂಡಿರುವುದು ಗ್ರಾಮಸ್ಥರಲ್ಲಿ ದುಗುಡ ಹೆಚ್ಚಿಸಿದೆ. ಒಟ್ಟಾರೆ ಹಳ್ಳಿಯಲ್ಲಿ ನೀರವ ಮೌನ ಆವರಿಸಿದೆ.