ನಂಜನಗೂಡು: ತಾಲೂಕಿನ ತುಮ್ಮನೇರಳೆ ಗ್ರಾಮದಲ್ಲಿ ಶ್ರೀ ನಾಗಲಿಂಗೇಶ್ವರ ಸ್ವಾಮಿ ಹಾಗೂ ಶ್ರೀ ಚೊಕ್ಕಮ್ಮ ದೇವಿ ಜಾತ್ರಾ ಮಹೋತ್ಸವ ಮಂಗಳವಾರ ವಿಜೃಂಭಣೆಯಿಂದ ನೆರವೇರಿತು.
ಒಂದು ವಾರಗಳ ಕಾಲ ಜರುಗುವ ಜಾತ್ರಾ ಮಹೋತ್ಸವದಲ್ಲಿ ಸೋಮವಾರ ಶ್ರೀ ನಾಗಲಿಂಗೇಶ್ವರ ಸ್ವಾಮಿ, ಚೊಕ್ಕಮ್ಮ ದೇವಿ ದೇಗುಲದಲ್ಲಿ ವಿವಿಧ ಪೂಜೆ, ಅಭಿಷೇಕ, ಬೋನದ ಮಡಿಕೆ ಇಡುವ ಕೈಂಕರ್ಯ ನೆರವೇರಿತು. ಮಂಗಳವಾರ ಬೆಳಗ್ಗೆ ದೇವರಿಗೆ ವಿಶೇಷ ಪೂಜೆ ನಡೆದವು. ಗ್ರಾಮದಲ್ಲಿ ಹೆಬ್ಬರದ ಮೆರವಣಿಗೆ ನಡೆಯಿತು. ಗ್ರಾಮಸ್ಥರು ಹೆಬ್ಬರಕ್ಕೆ ಪೂಜೆ ಸಲ್ಲಿಸಿದರು. ಮಧ್ಯಾಹ್ನ ಶ್ರೀ ನಾಗಲಿಂಗೇಶ್ವರ, ಚೊಕ್ಕಮ್ಮದೇವಿ ರಥೋತ್ಸವ ನೆರವೇರಿತು. ಭಕ್ತರು ರಥ ಎಳೆದು, ರಥಕ್ಕೆ ಹಣ್ಣು-ಧವನ ಎಸೆದು ಇಷ್ಟಾರ್ಥ ನೆರವೇರಿಸುವಂತೆ ಪ್ರಾರ್ಥಿಸಿದರು.
ಭಕ್ತರಿಗೆ ಮಜ್ಜಿಗೆ, ಪಾನಕ ಹಾಗೂ ಪ್ರಸಾದದ ವ್ಯವಸ್ಥೆ ಮಾಡಲಾಗಿತ್ತು. ಜಾತ್ರಾ ಮಹೋತ್ಸವದ ಪ್ರಯುಕ್ತ ಗ್ರಾಮದ ಶ್ರೀ ನಾಗಲಿಂಗೇಶ್ವರ ಸ್ವಾಮಿ ಕೃಪಾಪೋಷಿತ ನಾಟಕ ಮಂಡಳಿ ವತಿಯಿಂದ ರತ್ನ ಮಾಂಗಲ್ಯ ನಾಟಕ ಪ್ರದರ್ಶನ ನಡೆಯಿತು.