ನವಲಗುಂದ: ಜಗದ್ಗುರು ಅಜಾತ ನಾಗಲಿಂಗ ಮಹಾಸ್ವಾಮಿಗಳ 142 ಆರಾಧನಾ ಮಹೋತ್ಸವ ಅಂಗವಾಗಿ ಎರಡು ದಿನಗಳ ಕಾಲ ಅದ್ದೂರಿಯಾಗಿ ಕಾರ್ಯಕ್ರಮ ಜರುಗಲಿದೆ. ಜೂ. 22 ರಂದು ಬೆಳಗ್ಗೆ 6 ಗಂಟೆ ಕರ್ತೃ ಗದ್ದುಗೆಗೆ ರುದ್ರಾಭಿಷೇಕ ಹಾಗೂ ಅಲಂಕಾರ ಪೂಜೆ ನಡೆಯಲಿದೆ. ಪೀಠಾಧೀಶ ವೀರೇಂದ್ರ ಸ್ವಾಮೀಜಿ ಮಧ್ಯಾಹ್ನ 1 ಗಂಟೆಗೆ ಮಜಾರ ಪೂಜೆ ಹಾಗೂ ಮಹಾಪ್ರಸಾದಕ್ಕೆ ಚಾಲನೆ ನೀಡುವರು.
ಸಂಜೆ 6 ಗಂಟೆಗೆ 344 ನೇ ನಾಗಲಿಂಗಾನುಭವ ಗೋಷ್ಠಿ, ಧರ್ಮ ಸಭೆ ಜರುಗಲಿದ್ದು, ಬೆಳಗಾವಿ ಭೂತರಾಮನಟ್ಟಿಯ ಮುಕ್ತಿ ಮಠ ಶಿವಸಿದ್ಧಸೋಮೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಹಪುರದ ಏಕದಂಡಿಮಠ ಅಜ್ಜೇಂದ್ರ ಸ್ವಾಮೀಜಿ, ಅಣ್ಣಿಗೇರಿಯ ಡಾ.ವಾಲಿ ಮಹಾರಾಜರು ಸಾನ್ನಿಧ್ಯ ವಹಿಸುವರು. ಮುಖ್ಯಅಥಿಗಳಾಗಿ ಶಾಸಕ ಎನ್.ಎಚ್. ಕೋನರಡ್ಡಿ, ಮಾಜಿ ಸಚಿವ ಶಂಕರ ಪಾಟೀಲ ಮುನೇನಕೊಪ್ಪ, ಚಿತ್ರನಟ ಡಾ. ಶ್ರೀಧರ, ಪಾಲ್ಗೊಳ್ಳುವರು. ಇದೇ ಸಂದರ್ಭದಲ್ಲಿ ಅಜಾತ ನಾಗಲಿಂಗ ವಿದ್ಯಾಪೀಠದ ಆಡಳಿತ ಅಧಿಕಾರಿ ಕೆ.ಡಿ. ಬಡಿಗೇರ ಅವರಿಗೆ ಅಜಾತ ನಾಗಲಿಂಗ ಪ್ರಶಸ್ತಿ ವಿತರಿಸಲಾಗುವುದು.
ಜೂ. 23 ರಂದು 11 ಗಂಟೆಗೆ ಹುಬ್ಬಳಿಯ ಪಂ. ಕೃಷ್ಣರಾವ ಇನಾಮದಾರ, ಧಾರವಾಡದ ಡಾ. ವೀಣಾ ಬಡಿಗೇರ, ಹುಬ್ಬಳ್ಳಿಯ ಮಂಜುಶ್ರೀ ಮುಗಳಿ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ. ಪಂ. ಕೇಶವ ಮಾಲವಿ, ನಾರಾಯಣ ಹಿಕೋಳಚಿ, ವಾಮನ ವಾಗುಕರ, ಗುರುನಾಥ ಸುತಾರ ವಾದಕರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ಸಂಜೆ ಪಲ್ಲಕ್ಕಿ ಹಾಗೂ ಮೇಣಿ ಮಹೋತ್ಸವ ಸಕಲ ವಾದ್ಯ ವೈಭವಗಳೊಂದಿಗೆ ವಿಜೃಂಭಣೆಯಿಂದ ಜರುಗಲಿದೆ ಎಂದು ಪ್ರಕಟಣೆ ತಿಳಿಸಿದೆ.