ನಾಲತವಾಡ: ಈ ಹಿಂದೆ ಸಾಕಷ್ಟು ಗ್ರಾಮ ಸಭೆ, ವಾರ್ಡ್ ಸಭೆ ಮಾಡಿದ್ದು, ಸಾರ್ವಜನಿಕರ ನೂರಾರು ಸಮಸ್ಯೆಗಳನ್ನು ಬರೆದುಕೊಂಡು ಹೋಗುವುದೇ ಆಗಿದೆ. ಆದರೆ ಅವುಗಳ ನಿವಾರಣೆ ಯಾವುದೇ ಕ್ರಮವಾಗಿಲ್ಲ. ಇವತ್ತಿನ ಗ್ರಾಮ ಸಭೆ ಮೊದಲು ರದ್ದುಗೊಳಿಸಿ ಎಂದು ಶುಕ್ರವಾರ ಆಕ್ರೋಶ ವ್ಯಕ್ತಪಡಿಸಿದ ಗ್ರಾಮಸ್ಥರ ಮಾತಿಗೆ ಬಗ್ಗಿದ ಅಧಿಕಾರಿಗಳು ಕೊನೆಗೂ ಸಮೀಪದ ನಾಗಬೇನಾಳ ಗ್ರಾಪಂ ಗ್ರಾಮ ಸಭೆಯನ್ನು ರದ್ದು ಮಾಡಿದರು.
ಹಲವಾರು ವರ್ಷಗಳಿಂದಲೂ ಗ್ರಾಪಂ ವ್ಯಾಪ್ತಿಯ ಹಳ್ಳಿಗಳಲ್ಲಿ ಸಮರ್ಪಕವಾಗಿ ಕುಡಿಯಲು ನೀರು ಒದಗಿಸುತ್ತಿಲ್ಲ, ಬೆಳಕಿನ ವ್ಯವಸ್ಥೆಯೂ ಇಲ್ಲ, ಆಸರೆ ಮನೆಗಳನ್ನು ನಿಯಮಾನುಸಾರ ಹಂಚಿಕೆ ಮಾಡಿಲ್ಲ, ಪಕ್ಕದಲ್ಲೇ ನದಿ ಹರಿಯುತ್ತಿದ್ದರೂ ನಾಗಬೇನಾಳ ತಾಂಡೆಯಲ್ಲಿ ಕುಡಿಯುವ ನೀರಿಲ್ಲ, ಕೋಟಿಗಟ್ಟಲೇ ಹಣ ವ್ಯಯಿಸಿದ ಜೆಜೆಎಂನಿಂದ ಪ್ರತಿ ಮನೆಗೂ ನೀರು ಒದಗಿಸಬೇಕಿದ್ದರೂ ಕಾಮಗಾರಿ ಮುಗಿಯದಿದ್ದರೂ ಹಸ್ತಾಂತರ ಪಡೆಯಲಾಗಿದ್ದು, ಯಾರ ಮನೆಗಾದರೂ ಈವರೆಗೆ ನೀರು ಬಂದಿದೆಯಾ ಎಂದು ಗ್ರಾಮಸ್ಥರು ಪ್ರಶ್ನಿಸಿದರು.
ತೆರಿಗೆ ಮಾತ್ರ ಕಟ್ಟಿಸಿಕೊಳ್ಳುತ್ತಿದ್ದು, ಗ್ರಾಪಂ ಮೂಲಕ ನಮಗೆ ನೀರೇ ಸಿಗುತ್ತಿಲ್ಲ, ಆರೇಶಂಕರ ಗ್ರಾಮದಲ್ಲೂ ಸಹ ಜೆಜೆಎಂ ನೀರು ಸಿಗುತ್ತಿಲ್ಲ ಆದರೂ 40 ಲಕ್ಷ ರೂ. ಪೋಲಾಗಿದೆ ಎಂದು ಆರೋಪಿದರು. ನರೇಗಾದಡಿ ಕಾಮಗಾರಿಗಳೇ ಆಗುತ್ತಿಲ್ಲ, ಹಲವಾರು ವರ್ಷಗಳಿಂದ ಯಾವುದೇ ಅಭಿವೃದ್ಧಿ ಕಂಡಿಲ್ಲ. ಸರ್ಕಾರದ ಅನುದಾನ ಖರ್ಚು ಮಾಡುತ್ತಲೇ ಇದ್ದಾರೆ, ವಾಟರ್‌ಮನ್‌ಗಳ ಕೊರತೆ ಇದ್ದರೂ ಹುದ್ದೆ ತುಂಬುತ್ತಿಲ್ಲ, ಕೋರಂ ಭರ್ತಿಯಾಗದೆ ಸಭೆ ನಡೆಸುತ್ತಾರೆ.
ಈ ಹಿಂದೆ ಸಭೆಯಲ್ಲಿ 120 ಮನೆಗಳನ್ನು ಆಯ್ಕೆ ಮಾಡಿದ್ದರೂ ಮಧ್ಯವರ್ತಿಗಳ ಹಾವಳಿಯಿಂದ ನನೆಗುದಿಗೆ ಬಿದ್ದಿವೆ, ಜಿಪಿಎಸ್ ಮಾಡಲೂ ಹಣ ಕೊಡಬೇಕು, ಒಟ್ಟಾರೆ ನಮ್ಮ ಗ್ರಾಪಂಗೆ ಯಾವ ಮೇಲಧಿಕಾರಿಗಳು ಗಮನ ಹರಿಸುತ್ತಿಲ್ಲ ಎಂದು ಮೌನೇಶ ಮಾದರ, ಮಾನಪತಿ, ಆನಂದ ನಾಯಕ, ಬೈಲಪ್ಪ ಗೌಂಡಿ, ಚನ್ನಬಸಪ್ಪ ಕೋಳೂರ, ಹನಮಂತ ಗೌಂಡಿ, ಸುರೇಶ ಪಾಟೀಲ, ಶಾಂತಪ್ಪ ಪಾಟೀಲ, ಲಕ್ಷ್ಮಣ ರಾಠೋಡ, ಆಕಾಶ ರಾಠೋಡ ಆಕ್ರೋಶ ವ್ಯಕ್ತಪಡಿಸಿದರು.
ತಾ.ಪಂ ಎಡಿ ಪಿ.ಎಸ್.ಕಸನಕ್ಕಿ, ಪಿಡಿಒ ಮುರಿಗೆಮ್ಮ ಪೀರಾಪೂರ, ಗ್ರಾ.ಪಂ ಅಧ್ಯಕ್ಷೆ ಶಕುಂತಲಾ ಕಾಜಗಾರ, ಕೃಷಿ ಇಲಾಖೆ ಅಧಿಕಾರಿ ಬಿ.ಎಸ್.ಸಾವಳಗಿ, ಕಾರ್ಯದರ್ಶಿ ಟಿ.ಎಂ.ಕೋಲಕಾರ ಇತರರಿದ್ದರು.