ಜಿಲ್ಲೆ

ಕನ್ನಡಕ್ಕೆ ನಾಗ್ ಸೋದರರ ಕೊಡುಗೆ ಸ್ಮರಣೀಯ: ಶಾಸಕ ಎಸ್.ಟಿ.ಸೋಮಶೇಖರ್ ಹೇಳಿಕೆ

ಬೆಂಗಳೂರು: ಕನ್ನಡ ಭಾಷೆ, ಸಂಸ್ಕೃತಿ, ನೆಲ ಹಾಗೂ ಜಲ ವಿಚಾರದಲ್ಲಿ ನಟರಾದ ಶಂಕರನಾಗ್, ಅನಂತನಾಗ್ ಅವರ ಕೊಡುಗೆ ಅವಿಸ್ಮರಣೀಯವಾಗಿದೆ. ಆ ಹಾದಿಯಲ್ಲಿ ಎಲ್ಲ ಕನ್ನಡಪರ ಸಂಘಟನೆಗಳು ಹೋರಾಟದ ಮೂಲಕ ಮಾದರಿಯಾಗಬೇಕಿದೆ ಎಂದು ಶಾಸಕ ಎಸ್.ಟಿ.ಸೋಮಶೇಖರ್ ತಿಳಿಸಿದರು.

ಯಶವಂತಪುರ ಕ್ಷೇತ್ರದ ಹೊಸಹಳ್ಳಿಯಲ್ಲಿ ಕರುನಾಡ ವಿಜಯಸೇನೆ ಆಟೋ ಘಟಕ ವತಿಯಿಂದ ಹಮ್ಮಿಕೊಂಡಿದ್ದ ದಿವಗಂತ ಶಂಕರನಾಗ್ ಅವರ ಪುತ್ಥಳಿ ಅನಾವರಣ ಮಾಡಿ ಅವರು ಮಾತನಾಡಿದರು.

ಆಟೋ ಸಂಘಗಳು ಕನ್ನಡ ಪರವಾಗಿ ನಿರಂತರವಾಗಿ ಕೆಲಸ ಮಾಡುತ್ತಿದೆ. ಪ್ರಯಾಣಿಕರಿಗೆ ಉತ್ತಮ ಸೇವೆ ನೀಡುತ್ತಲೇ ಭಾಷಾಭಿಮಾನವನ್ನು ಮೆರೆಯುತ್ತಿದ್ದಾರೆ. ಇಂತಹ ಕಾರ್ಯದಲ್ಲಿ ತೊಡಗಿಸಿಕೊಂಡವರನ್ನು ಕರುನಾಡ ವಿಜಯಸೇನೆ ಸಂಘಟನೆ ಗುರುತಿಸಿ ಸನ್ಮಾನಿಸುತ್ತಿರುವುದು ಮೆಚ್ಚತಕ್ಕದ್ದು ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಹೋರಾಟಗಾರ ಮೇಲೆ ಕ್ರಿಮಿನಲ್ ಕೇಸ್ ಸಲ್ಲ:

ಕರುನಾಡ ವಿಜಯಸೇನೆ ರಾಜ್ಯ ಘಟಕದ ಅಧ್ಯಕ್ಷ ದೀಪಕ್ ಎಚ್.ಎನ್. ಮಾತನಾಡಿ, ಕನ್ನಡ ಭಾಷೆ, ನೆಲ-ಜಲ ವಿಚಾರ ಬಂದಾಗ ಎಲ್ಲ ಕನ್ನಡಪರ ಸಂಘಟನೆ ಒಂದಾಗಿ ಹೋರಾಟ ಮಾಡುತ್ತಾ ಬಂದಿವೆ. ಅದರಲ್ಲೂ ಭಾಷೆ ವಿಚಾರ ಬಂದಾಗ ದೊಡ್ಡಮಟ್ಟದಲ್ಲಿ ಧ್ವನಿ ಎತ್ತಿದರೆ ಸರ್ಕಾರಗಳು ಕನ್ನಡಪರ ಹೋರಾಟಗಾರ ಮೇಲೆ ಕ್ರಿಮಿನಲ್ ಕೇಸು ಹಾಕುತ್ತಾರೆ. ಭಾಷೆ, ನೆಲ-ಜಲದ ವಿಚಾರದ ಬಗ್ಗೆ ಸಮಸ್ಯೆ ಎದುರಾದಾಗ ತಡರಾತ್ರಿ ನಮ್ಮ ಮನೆಗೆ ಬಂದು ಬಂಧಿಸಿ ಕರೆದೊಯುತ್ತಾರೆ. ಇಂತಹ ಕೆಲಸಕ್ಕೆ ಸರ್ಕಾರ ಕಡಿವಾಣ ಹಾಕಬೇಕು ಎಂದು ಆಗ್ರಹಿಸಿದರು.

ಇದೇ ವೇಳೆ ಕಡುಬಡವರಿಗೆ 20 ಹೊಲಿಗೆಯಂತ್ರ ಹಾಗೂ ಇಬ್ಬರಿಗೆ ಆಟೋ ವಿತರಿಸಲಾಯಿತು. ಜತೆಗೆ ಪೌರಕಾರ್ಮಿಕರನ್ನು ಸನ್ಮಾನಿಸಲಾಯಿತು.

ಮಾಜಿ ಕಾರ್ಪೊರೇಟರ್ ಆರ್ಯ ಶ್ರೀನಿವಾಸ್, ಕಾಂಗ್ರೆಸ್ ಮುಖಂಡರಾದ ಚಿಕ್ಕೇಗೌಡನಪಾಳ್ಯ ಶಿವಮಾದಯ್ಯ, ಅಮೃತ್ ಗೌಡ, ಬಿಜೆಪಿ ಮುಖಂಡ ವಾಜರಹಳ್ಳಿ ಎಸ್. ಶಶಿಕುಮಾರ್, ಪೀಸ್ ಆಟೋ ಘಟಕದ ಅಧ್ಯಕ್ಷ ರಘು, ರಾಜ್ಯ ವಿಜಯಸೇನೆ ಕಾರ್ಮಿಕ ಘಟಕದ ಅಧ್ಯಕ್ಷ ನೆ.ಲ. ರಾಮಪ್ರಸಾದ್ ಗೌಡ, ಮಹಿಳಾ ಅಧ್ಯಕ್ಷೆ ಮಂಜುಳ ಹಾಗೂ ಇನ್ನಿತರರಿದ್ದರು.

ಆಟೋ ಚಾಲಕರು ಸಾಂಸ್ಕೃತಿಕ ರಾಯಭಾರಿಗಳು:

ಕೆಆರ್‌ಐಡಿಎಲ್ ಮಾಜಿ ಅಧ್ಯಕ್ಷ ಎಂ. ರುದ್ರೇಶ್ ಅವರು 500 ಆಟೋಚಾಲಕರಿಗೆ ಸಮವಸ್ತ್ರ, ರಾಜ್ಯೋತ್ಸವ ಪ್ರಶಸ್ತಿ ವಿತರಿಸಿ ಮಾತನಾಡಿ, ಕನ್ನಡ ಭಾಷೆಯ ಸಾಂಸ್ಕೃತಿಕ ರಾಯಭಾರಿಗಳಾಗಿ ಆಟೋ ಚಾಲಕರು ಕಾರ್ಯನಿರ್ವಹಿಸುತ್ತಿದ್ದಾರೆ. ಬಡವರಿಂದ ಮಾತ್ರ ತಂದೆ-ತಾಯಿ, ವೃದ್ಧರನ್ನು ಬೆವರು ಸುರಿಸಿ ದುಡಿದು ಸಾಕುತ್ತಿರುವುದನ್ನು ಕಾಣಬಹುದಾಗಿದೆ. ಇಂತಹವರ ಸೇವೆ ನಿರಂತರವಾಗಿ ಮುಂದುವರಿಯಲಿ ಎಂದು ಹಾರೈಸಿದರು.