ಜಿಲ್ಲೆ

ಜಿ.ಶಂಕರ್​ರ ಸಮಾಜಮುಖಿ ಸೇವೆ ಅನನ್ಯ

ಶಾಸಕ ಯಶ್​ಪಾಲ್​ ಸುವರ್ಣ ಶ್ಲಾಘನೆ

ಉಡುಪಿಯಲ್ಲಿ ಅಭಿನಂದನಾ ಸಮಾರಂಭ

ವಿಜಯವಾಣಿ ಸುದ್ದಿಜಾಲ ಉಡುಪಿ

ಶಿಕ್ಷಣ ಹಾಗೂ ಆರೋಗ್ಯವಂತ ಸಮಾಜದ ಮೂಲಕ ದೇಶದ ಭವಿಷ್ಯ ರೂಪಿಸಲು ಸಾಧ್ಯ ಎಂಬ ಚಿಂತನೆಯಿಂದ ಆ ಎರಡೂ ಕ್ಷೇತ್ರಗಳಿಗೂ ಉಡುಪಿಯ ನಾಡೋಜ, ಸಹೃದಯಿ ಡಾ. ಜಿ.ಶಂಕರ್​ ಅನನ್ಯ ಸೇವೆ ಸಲ್ಲಿಸುತ್ತಿದ್ದಾರೆ. ದಾನಿಯಾಗಿ ಅವರು ಮಾಡಿರುವ ಸಮಾಜಮುಖಿ ಸೇವೆಗಳು ಸದಾ ಅನುಕರಣೀಯ ಎಂದು ಉಡುಪಿ ಶಾಸಕ ಯಶ್​ಪಾಲ್​ ಸುವರ್ಣ ಶ್ಲಾಘಿಸಿದರು.

ಉಡುಪಿಯ ಅಜ್ಜರಕಾಡುನಲ್ಲಿರುವ ಡಾ. ಜಿ.ಶಂಕರ್​ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಅಧ್ಯಯನ ಕೇಂದ್ರದಲ್ಲಿ ನಾಡೋಜ ಡಾ. ಜಿ.ಶಂಕರ್​ ಅವರ 70ನೇ ಜನ್ಮದಿನದ ನಿಮಿತ್ತ ಶನಿವಾರ (ಅ.4) ಆಯೋಜಿಸಿದ್ದ ಅಭಿನಂದನಾ ಸಮಾರಂಭ ಉದ್ಘಾಟಿಸಿ, ಅವರನ್ನು ಸನ್ಮಾನಿಸಿ ಮಾತನಾಡಿದರು.

ಜಿಲ್ಲೆಗೆ ಅಪಾರ ಕೊಡುಗೆ

ಉಡುಪಿಯ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಮಹಾಪೋಷಕರಾಗಿ ಕಾಲೇಜಿಗೆ ಮೂಲ ಸೌಕರ್ಯ, ಅಭಿವೃದ್ಧಿ ಕಾರ್ಯಕ್ಕೆ ಸದಾ ಸಹಕಾರ ನೀಡುತ್ತಿದ್ದಾರೆ. ರಾಜ್ಯದ ವಿವಿಧ ಜಿಲ್ಲೆಗಳ ಸಾವಿರಾರು ವಿದ್ಯಾರ್ಥಿನಿಯರು ಗುಣಮಟ್ಟದ ಶಿಕ್ಷಣ ಪಡೆದು ಸಾಧನೆ ಮಾಡಲು ಕಾರಣರಾಗಿದ್ದಾರೆ. ರಕ್ತದಾನ ಶಿಬಿರಗಳ ಮೂಲಕ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಿ ಉಡುಪಿ ಜಿಲ್ಲೆಯು ರಕ್ತದಾನಿಗಳ ಜಿಲ್ಲೆ ಎಂಬ ಗೌರವಕ್ಕೆ ಪಾತ್ರವಾಗುವಲ್ಲಿ ಜಿ.ಶಂಕರ್​ ಕೊಡುಗೆ ಮಹತ್ವದ್ದಾಗಿದೆ ಎಂದರು.

ಉಡುಪಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಶೋಕಕುಮಾರ್​ ಕೊಡವೂರು, ಉಡುಪಿ ಜಿಲ್ಲಾ ಅಥ್ಲೆಟಿಕ್​ ಅಸೋಸಿಯೇಷನ್​ನ ಅಧ್ಯಕ್ಷ ಹರಿಪ್ರಸಾದ್​ ರೈ ಅಭಿನಂದನೆ ಸಲ್ಲಿಸಿದರು.

ಸಮಾರಂಭದಲ್ಲಿ ರೆಡ್​ ಕ್ರಾಸ್​ ಸಂಸ್ಥೆ ಕುಂದಾಪುರದ ಸಭಾಪತಿ ಜಯಕರ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲ ಸೋಜನ್​ ಕೆ.ಜಿ., ವಿದ್ಯಾರ್ಥಿ ಕ್ಷೇಮಪಾಲನಾ ಸಮಿತಿಯ ಸಂಚಾಲಕಿ ಪ್ರೊ. ನಿಕೇತನಾ, ಐಕ್ಯುಎಸಿ ಸಂಚಾಲಕಿ ಪ್ರೊ. ಶ್ರೀಮತಿ ಅಡಿಗ, ವಾಣಿಜ್ಯ ವಿಭಾಗದ ಮುಖ್ಯಸ್ಥ ಪ್ರೊ. ಕೃಷ್ಣ ಭಟ್​ ಇತರರು ಉಪಸ್ಥಿತರಿದ್ದರು.

ಡಾ.ರಾಜೇಂದ್ರ ಕೆ. ಕಾರ್ಯಕ್ರಮ ನಿರೂಪಿಸಿದರು. ಡಾ.ರಾಮಚಂದ್ರ ಪಾಟ್ಕರ್​ ವಂದಿಸಿದರು.

ಉತ್ತಮ ಪ್ರಜೆಯಾಗುವ ಸಂಕಲ್ಪ ಮಾಡಿ

ಅಭಿನಂದನೆ ಸ್ವೀಕರಿಸಿದ ನಾಡೋಜ ಡಾ. ಜಿ.ಶಂಕರ್​ ಮಾತನಾಡಿ, ಕಾಲೇಜಿನ ವಿದ್ಯಾರ್ಥಿನಿಯರು ಪ್ರತಿವರ್ಷವೂ ಶೈಕ್ಷಣಿಕ ಸಾಧನೆಯ ಮೂಲಕ ಕಾಲೇಜಿಗೆ ಕೀರ್ತಿ ತರುತ್ತಿದ್ದಾರೆ. ಎಲ್ಲ ವಿದ್ಯಾರ್ಥಿನಿಯರೂ ಉತ್ತಮ ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಪ್ರಜೆಯಾಗುವ ಸಂಕಲ್ಪ ಮಾಡಬೇಕು. ಕಾಲೇಜಿಗೆ ಅಗತ್ಯವಿರುವ ಇನ್ನಷ್ಟು ಮೂಲ ಸೌಕರ್ಯಗಳ ಅಭಿವೃದ್ಧಿಗೆ ವಿಶೇಷ ಆದ್ಯತೆ ನೀಡುವುದಾಗಿ ಭರವಸೆ ನೀಡಿದರು.