ಜಿಲ್ಲೆ

ಕುಸಿಯುವ ಭೀತಿಯಲ್ಲಿ ನಡಿಮನೆ ಸೇತುವೆ

ಸುಭಾಸ ಹೆಗಡೆ ಧೂಪದಹೊಂಡ

ವಿಜಯವಾಣಿ ಸುದ್ದಿಜಾಲ ಕಾರವಾರ
ಶಿರಸಿ-ಸಿದ್ದಾಪುರ ತಾಲೂಕುಗಳ ಗಡಿಯಲ್ಲಿರುವ ನಡಿಮನೆ ಸೇತುವೆ ಕುಸಿಯುವ ಹಂತದಲ್ಲಿದ್ದು, 400 ಕ್ಕೂ ಅಧಿಕ ಜನರು ಕಾಯಂ ರಸ್ತೆ ಸಂಪರ್ಕ ಕಳೆದುಕೊಳ್ಳುವ ಆತಂಕದಲ್ಲಿದ್ದಾರೆ.
ಸಿದ್ದಾಪುರ ತಾಲೂಕಿನ ಅಣಲೇಬೈಲ್ ಪಂಚಾಯಿತಿ ವ್ಯಾಪ್ತಿಯಲ್ಲಿ ಅಘನಾಶಿನಿಗೆ ಕಟ್ಟಲಾಗಿರುವ ನಡಿಮನೆ ಸಣ್ಣ ಸೇತುವೆಯ ಎರಡು ಕಂಬಗಳು ಮುರಿದಿವೆ. ರಕ್ಷಣಾ ಕಂಬಗಳೂ ಕಳಚಿ ಬಿದ್ದಿವೆ. ವಾಹನ ಓಡಾಟ ಮಾಡಿದರೆ ಸೇತುವೆ ಅದುರುತ್ತಿದೆ. ಹಾಗಾಗಿ ಇದೇ ಸೇತುವೆಯನ್ನು ಸಂಪರ್ಕಕ್ಕೆ ನಂಬಿಕೊಂಡಿರುವ ನಡಿಮನೆ, ನೆಬ್ಬೂರು, ಕ್ಯಾತನಮನೆ, ಅಂಬೆಗಾರ, ಹುಲಜಡ್ಡಿ, ದಾಸನಕಲ್ಲು, ಕೊಂಡಲಗಿ ಭಾಗದ ಜನ ಆತಂಕದಲ್ಲಿದ್ದಾರೆ. ಸೇತುವೆ ಬಿದ್ದರೆ ಬೇಸಿಗೆಯಲ್ಲೇನೋ ಹೊಳೆಯಲ್ಲಿ ಇಳಿದು ವಾಹನ ಓಡಿಸಬಹುದು. ಆದರೆ, ಮಳೆಗಾಲದಲ್ಲಿ ಉಕ್ಕಿ ಹರಿಯುವ ಅಘನಾಶಿನಿಯ ನಡುವೆ ಈ ಎಲ್ಲ ಊರುಗಳು ದ್ವೀಪವಾಗಲಿವೆ.
22 ವರ್ಷದ ಸೇತುವೆ:
2008 ರಲ್ಲಿ ಶಾಸಕರ ಪ್ರದೇಶಾಭಿವೃದ್ಧಿ ಅನುದಾನ ಮತ್ತು ಜಿಲ್ಲಾ ಪಂಚಾಯಿತಿ ಅನುದಾನ ಸೇರಿ ಒಟ್ಟೂ 7 ಲಕ್ಷ ರೂ.ನಲ್ಲಿ ಸಣ್ಣ ಸೇತುವೆ ನಿರ್ಮಿಸಲಾಗಿದೆ. ಬೈಕ್ ರಿಕ್ಷಾ, ಓಮಿನಿ ಮಾತ್ರ ದಾಟುತ್ತದೆ. ಇದಕ್ಕೂ ಮೊದಲು ಇಲ್ಲಿ ಅಡಕೆ ಮುಂಡಿಯ ಸಂಕ, 2005 ರ ಬಳಿಕ ಹಗ್ಗ, ಬಿದಿರು ಬಳಸಿ ತೂಗು ಸೇತುವೆ ಮಾಡಿ ಗ್ರಾಮಸ್ಥರು ಮಳೆಗಾಲದಲ್ಲಿ ಸಾಗುತ್ತಿದ್ದರು. 2015-16 ರಲ್ಲಿ ನೆರೆಯ ಸಂದರ್ಭದಲ್ಲಿ ಕಂಬಗಳಿಗೆ ಹಾನಿಯಾಗಿತ್ತು. 2020 ಗ್ರಾಮ ಪಂಚಾಯಿತಿ ನಿರ್ಮಿಸಿದ ರಕ್ಷಣಾ ಕಂಬ ಒಂದೇ ಮಳೆಗಾಲದಲ್ಲಿ ಕಿತ್ತು ಹೋಗಿತ್ತು.
......
ಇದೇ ಸೇತುವೆಯ ಮೇಲೆ ಪ್ರತಿ ದಿನ 20 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಓಡಾಡುತ್ತಾರೆ. ವಾಹನವನ್ನೂ ಅನಿವಾರ್ಯವಾಗಿ ಓಡಿಸುತ್ತಿದ್ದೇವೆ. ಸೇತುವೆ ಬಿದ್ದರೆ ನಮ್ಮ ಊರು ದ್ವೀಪವಾಗುತ್ತವೆ. ಇದರಿಂದ ಲಾರಿಯೂ ಹೋಗಬಲ್ಲ ದೊಡ್ಡ ಘಟ್ಟಿಯಾದ ಸೇತುವೆ ಕಟ್ಟಿಕೊಡಬೇಕು. ಈ ಬಗ್ಗೆ ಹತ್ತಾರು ಬಾರಿ ಅಽಕಾರಿಗಳು, ಜನಪ್ರತಿನಿಽಗಳಿಗೆ ಮನವಿ ಸಲ್ಲಿಸಿದ್ದೇವೆ.
ಮಂಜುನಾಥ ಹೆಗಡೆ
ಕ್ಯಾತನಮನೆ, ಗ್ರಾಮಸ್ಥ
............
ಈ ಸೇತುವೆ ಮರು ನಿರ್ಮಾಣಕ್ಕೆ ಕನಿಷ್ಠ 10 ಲಕ್ಷ ರೂ. ಬೇಕು. ಗ್ರಾಮ ಪಂಚಾಯಿತಿ ಅನುದಾನದಲ್ಲಿ ನಿರ್ಮಿಸಲಾಗುವುದಿಲ್ಲ. ಹೀಗಾಗಿ, ಸೇತುವೆ ಬೇಡಿಕೆ ಅರ್ಜಿಯನ್ನು ಮೇಲಾಕಾರಿಗಳಿಗೆ ಕಳಿಸಿದ್ದೇವೆ.
 ಸುಬ್ರಹ್ಮಣ್ಯ ಹೆಗಡೆ
ಪಿಡಿಒ ಅಣಲೇಬೈಲ್ ಗ್ರಾಪಂ