ಕೋಲಾರ: ಜಾತಿ, ಧರ್ಮಗಳ ಹೆಸರಿನಲ್ಲಿ ರಾಜಕಾರಣ ಮಾಡುವುದು ಬಿಟ್ಟು ಜಿಲ್ಲೆಯ ಅಭಿವೃದ್ಧಿಗೆ ಎಲ್ಲ ಜಾತಿ, ಧರ್ಮಗಳನ್ನು ಒಗ್ಗೂಡಿಸಿಕೊಂಡು ಹೋಗಬೇಕಿದೆ ಎಂದು ಸಂಸದ ಎಸ್ ಮುನಿಸ್ವಾಮಿ ಹೇಳಿದರು.
ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಡಳಿತ ಹಾಗೂ ಕನ್ನಡ ಮತ್ತು ಸಂಸ್ಕೃತ ಇಲಾಖೆಯಿಂದ ಶನಿವಾರ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡರ 511ನೇ ಜಯಂತಿಯನ್ನು ಉದ್ದೇಶಿಸಿ ಮಾತನಾಡಿ, ಬೆಂಗಳೂರು ನಗರ ನಿರ್ಮಾಣದಲ್ಲಿ ಕೆಂಪೇಗೌಡರ ಪಾತ್ರ ಅಪಾರ. ಅವರು ಒಂದು ಸಮಾಜಕ್ಕೆ ಸೀಮಿತವಾಗದೇ ಎಲ್ಲ ಸಮಾಜಗಳನ್ನು ಮುಖ್ಯವಾಹಿನಿಗೆ ತರಲು ಶ್ರಮಿಸಿದರು. ಅವರ ಆಡಳಿತ ವೈಖರಿ ನಮಗೆ ಮಾದರಿಯಾಗಿದೆ ಎಂದರು.
ಸಮಾಜದಲ್ಲಿ ಒಗ್ಗಟ್ಟು ಇದ್ದರೆ ಏನು ಬೇಕಾದರೂ ಸಾಧಿಸಬಹುದು. ಈ ನಿಟ್ಟಿನಲ್ಲಿ ಎಲ್ಲರೂ ಭಿನ್ನಾಭಿಪ್ರಾಯಗಳನ್ನು ಬಿಟ್ಟು ಒಂದೇ ರೀತಿಯಲ್ಲಿ ಹೋಗಬೇಕಾಗುತ್ತದೆ. ಜಿಲ್ಲೆಯಲ್ಲಿರುವ ವಿವಿಧ ಕ್ಷೇತ್ರದಲ್ಲಿ ಕೆಲಸ ಮಾಡುವರು ಎಲ್ಲರೂ ಜವಾಬ್ದಾರಿಯಿಂದ ವರ್ತಿಸಿ ಕರೊನಾದಿಂದ ಮುಕ್ತಗೊಳಿಸಬೇಕೆಂದು ನುಡಿದರು.
ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಕೆ.ವಿ ಶಂಕರಪ್ಪ ಮಾತನಾಡಿ, 500 ವರ್ಷಗಳ ಹಿಂದೆಯೇ ಕಾನೂನು ಸಂವಿಧಾನವಿಲ್ಲದ ಸಂದರ್ಭದಲ್ಲಿ ಜಾತ್ಯತೀತ ಮೌಲ್ಯಗಳೊಂದಿಗೆ ಸಮಾಜದ ಎಲ್ಲ ವರ್ಗಗಳ ಬಗ್ಗೆ ದೂರದೃಷ್ಟಿಯಾಗಿ ಮಾದರಿಯ ನಾಯಕರಾಗಿ ನಾಡಪ್ರಭು ಕೆಂಪೇಗೌಡರನ್ನು ಕಾಣಬಹುದಾಗಿದೆ. ಬಿಬಿಎಂಪಿಗೆ ಸೀಮಿತವಾದ ಕೆಂಪೇಗೌಡ ಜಯಂತಿಯನ್ನು ರಾಜ್ಯಾದ್ಯಂತ ಆಚರಣೆ ಮಾಡುವಂತಾಗಿರುವುದು ಹೆಮ್ಮೆಯ ಸಂಗತಿ ಎಂದರು.
ಕಸಾಪ ಅಧ್ಯಕ್ಷ ನಾಗಾನಂದ್ ಕೆಂಪರಾಜ್ ಮಾತನಾಡಿ, ಕೆಂಪೇಗೌಡರು ಸಮಾಜಕ್ಕೆ ತಮ್ಮದೇ ರೀತಿಯಲ್ಲಿ ನೀಡಿರುವ ವಿಶೇಷ ಕೊಡುಗೆಯನ್ನು ಸ್ಮರಿಸುವ ಕೆಲಸ ಆಗಬೇಕೆಂದು ನುಡಿದರು.
ಅಪರ ಜಿಲ್ಲಾಧಿಕಾರಿ ಬಿ.ಶಿವಸ್ವಾಮಿ ಮಾತನಾಡಿ, ಸಮಾಜ ಸುಧಾರಕರನ್ನು ಕೇವಲ ಜಯಂತಿಗಳಿಗೆ ಸೀಮಿತವಾಗಿಸಬಾರದು. ಮಾನವ ಜಾತಿ ಒಂದೇ ಎನ್ನುವ ನಿಟ್ಟಿನಲ್ಲಿ ದೇಶವನ್ನು ನಾಡನ್ನು ಕಟ್ಟಲು ಕೈಜೋಡಿಸಬೇಕು ಎಂದರು.
ಎಂಎಸ್‌ಐಎಲ್ ಮಾಜಿ ಅಧ್ಯಕ್ಷ ಎಂ.ಎಲ್ ಅನಿಲ್ ಕುಮಾರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ.ರವಿಕುಮಾರ್, ನಗರಸಭೆ ಸದಸ್ಯರಾದ ಎಸ್.ಆರ್.ಮುರಳಿಗೌಡ, ರಾಕೇಶ್, ಪ್ರವೀಣ್ ಗೌಡ, ಗುಣಶೇಖರನ್, ಮುಖಂಡರಾದ ಬಿಸಪ್ಪಗೌಡ, ಮಾಗೇರಿ ನಾರಾಯಣಸ್ವಾಮಿ, ಕೃಷ್ಣೇಗೌಡ, ಮದ್ದೇರಿ ಮನಿರೆಡ್ಡಿ, ರಾಮಚಂದ್ರೇಗೌಡ ಇತರರಿದ್ದರು.