ಜಿಲ್ಲೆ

ನಾಡಕಚೇರಿಗಿಲ್ಲ ಉದ್ಘಾಟನಾ ಭಾಗ್ಯ! : ಎರಡು ಬಾರಿ ಮುಂದೂಡಿಕೆ : 18.84 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಗುರುಪುರ

ಕಂದಾವರ ಗ್ರಾ.ಪಂ. ವ್ಯಾಪ್ತಿಯ ರೈತ ಸಂಪರ್ಕ ಕೇಂದ್ರದ ಬಳಿ ಕಳೆದ ವರ್ಷ ಜನವರಿಯಲ್ಲಿ ಶಿಲಾನ್ಯಾಸಗೊಂಡು, ಈಗಾಗಲೇ ನಿರ್ಮಾಣಗೊಂಡಿರುವ 18.84 ಲಕ್ಷ ರೂ. ವೆಚ್ಚದ ನೂತನ ನಾಡಕಚೇರಿ ಇನ್ನೂ ಉದ್ಘಾಟನಾ ಭಾಗ್ಯ ಕಂಡಿಲ್ಲ.

ಕಂದಾವರ ಗ್ರಾ.ಪಂ. ಕಚೇರಿ ಪಕ್ಕದಲ್ಲಿರುವ ಹಳೇ ನಾಡಕಚೇರಿ ಸ್ಥಳಾವಕಾಶದ ಕೊರತೆ ಎದುರಿಸುತ್ತಿರುವುದಲ್ಲದೆ ಮಳೆಗಾಲದಲ್ಲಿ ಕಚೇರಿಯೊಳಗೆ ನೀರು ಸೋರುತ್ತಿದೆ. ಈ ಹಿನ್ನೆಲೆ ಹೊಸ ಕಟ್ಟಡ ನಿರ್ಮಿಸಲಾಗಿದೆ. ಹೊಸ ಕಟ್ಟಡ ಕಾಮಗಾರಿ ಕೆಲವು ತಿಂಗಳ ಹಿಂದೆ ಪೂರ್ಣಗೊಂಡಿದ್ದು, ಈಗಾಗಲೇ ಎರಡು ಬಾರಿ ಉದ್ಘಾಟನೆ ಮುಂದೂಡಲ್ಪಟ್ಟಿದೆ.

ಹೊಸ ಕಟ್ಟಡಕ್ಕೆ ಶಾಸಕ ಡಾ.ಭರತ್ ಶೆಟ್ಟಿ ಕಳೆದ ವರ್ಷ ಜ.4ರಂದು ಶಿಲಾನ್ಯಾಸ ನೆರವೇರಿಸಿದ್ದರು. ಈಗ ಸರ್ಕಾರ ಬದಲಾಗಿದೆ. ಶಾಸಕರಿಗೆ ಪುರುಸೊತ್ತಿರುವಾಗ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರಿಗೆ ಪುರುಸೊತ್ತಿಲ್ಲ. ಜನಪ್ರತಿನಿಧಿಗಳಿಗೆ ‘ಪುರುಸೊತ್ತಿಲ್ಲದ’ ಕಾರಣದಿಂದ ಕಟ್ಟಡ ಉದ್ಘಾಟನೆ 2 ಬಾರಿ ಮುಂದೂಡಲ್ಪಟ್ಟಿದೆ ಎನ್ನಲಾಗುತ್ತಿದ್ದರೂ ಎರಡು ರಾಜಕೀಯ ಪಕ್ಷಗಳ ಜನಪ್ರತಿನಿಧಿಗಳ ಹೊಂದಾಣಿಕೆ ಕೊರತೆಯಿಂದ ಪದೇ ಪದೆ ಕಟ್ಟಡ ಉದ್ಘಾಟನೆ ಮುಂದೂಡಲಾಗುತ್ತಿದೆ ಎಂದು ವಿಶ್ವಾಸನೀಯ ಮೂಲವೊಂದು ತಿಳಿಸಿದೆ.

ಕೆಲವು ದಿನಗಳ ಹಿಂದೆ ಪೊಳಲಿ ಸೇತುವೆ ಕಾಮಗಾರಿ ವೀಕ್ಷಣೆಗೆ ಗುರುಪುರ ಪೊಳಲಿ ದ್ವಾರದ ಬಳಿಯಿಂದಲೇ ಹಾದು ಹೋಗಿದ್ದ ದ.ಕ. ಜಿಲ್ಲಾ ಉಸ್ತುವಾರಿ ಸಚಿವರು ಹೆಚ್ಚುವರಿಯಾಗಿ ಒಂದು ಕಿ.ಮೀ. ಅಂತರ ಕ್ರಮಿಸುತ್ತಿದ್ದರೆ ಅಂದು ಹೊಸ ನಾಡಕಚೇರಿ ಉದ್ಘಾಟಿಸಬಹುದಿತ್ತು. ಆದರೆ ಅವರು ಹಾಗೇ ಮಾಡಿಲ್ಲ ಎಂದು ಸ್ಥಳೀಯರು ದೂರಿದ್ದಾರೆ.

ಮಳೆಗಾಲಕ್ಕೆ ಮುಂಚಿತವಾಗಿ ಹೊಸ ನಾಡ ಕಚೇರಿ ಕಾರ್ಯಾರಂಭಗೊಂಡು, ಹಳೇ ನಾಡ ಕಚೇರಿಯಲ್ಲಿರುವ ಕಂದಾಯ ಇಲಾಖೆಯ ದಾಖಲೆಗಳಿಗೆ ಮಳೆ ನೀರಿನಿಂದ ರಕ್ಷಣೆ ಸಿಕ್ಕರೆ ಸಾಕು ಎಂಬುದು ಸಾರ್ವಜನಿಕರ ಆಗ್ರಹವಾಗಿದೆ.

ಹೊಸ ನಾಡಕಚೇರಿ ಕಟ್ಟಡ ಉದ್ಘಾಟನೆ ಎರಡು ಬಾರಿ ಮುಂದೂಡಲ್ಪಟ್ಟಿದೆ. ಶೀಘ್ರ ಮತ್ತೊಂದು ದಿನಾಂಕ ನಿಗದಿಯಾಗುವ ಸಾಧ್ಯತೆ ಇದೆ. ಹೊಸ ಕಟ್ಟಡದಲ್ಲಿ ಕಂದಾಯ ಇಲಾಖೆ ದಾಖಲೆ ಸುರಕ್ಷಿತವಾಗಿಡಲು ಸಾಕಷ್ಟು ಸ್ಥಳಾವಕಾಶವಿದೆ. ಹೊಸ ಕಟ್ಟಡ ಉದ್ಘಾಟನೆಗೊಂಡ ತಕ್ಷಣವೇ ಹಳೇ ಕಟ್ಟಡದಲ್ಲಿರುವ ಕಡತಗಳನ್ನು(ದಾಖಲೆಗಳು) ಹೊಸ ಕಟ್ಟಡಕ್ಕೆ ಸ್ಥಳಾಂತರಗೊಳಿಸಲಾಗುವುದು. ಸ್ಟೀಫನ್, ಗುರುಪುರ ಹೋಬಳಿ ಉಪ ತಹಸೀಲ್ದಾರ್(ಡಿಟಿ) ಗುರುಪುರ ಹೋಬಳಿಯ ಹೊಸ ನಾಡಕಚೇರಿ ಕಟ್ಟಡದಲ್ಲಿ ಸಾಂಪ್ರದಾಯಿಕ ಪೂಜೆ ವಾಡಿ, ಹಳೇ ಕಟ್ಟಡದಿಂದ ಹೊಸ ಕಟ್ಟಡಕ್ಕೆ ಕಡತಗಳನ್ನು ಸ್ಥಳಾಂತರಿಸುವಂತೆ ಮಂಗಳೂರು ತಹಸೀಲ್ದಾರ್‌ಗೆ ಸೂಚಿಸಿದ್ದೇನೆ. ಯಾವುದೇ ಕಾರಣಕ್ಕೂ ಜನರಿಗೆ ತೊಂದರೆಯಾಗಕೂಡದು. ಮುಂದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಸ್ಥಳೀಯ ಜನಪ್ರತಿನಿಧಿಗಳಿದ್ದು ಹೊಸ ನಾಡಕಚೇರಿ ಅಧಿಕೃತ ಉದ್ಘಾಟನೆ ವಾಡಬಹುದು ಎಂದು ಕಳೆದ ತಿಂಗಳ 10ನೇ ತಾರೀಕಿನಂದು ನಡೆದಿದ್ದ ಕಂದಾವರ ಪಂಚಾಯಿತಿ ಕಟ್ಟಡದ ಉದ್ಘಾಟನೆ ಸಂದರ್ಭ ಹೇಳಿದ್ದೇನೆ. ಡಾ.ಭರತ್ ಶೆಟ್ಟಿ, ಶಾಸಕರು https://www.vijayavani.net/matti-jogimatt-jathre https://www.vijayavani.net/rajashekar-asadi-desa-were-once-in-the-limelight-dr-ismail