ಜಿಲ್ಲೆ

ನಾಡದೋಣಿ ಮೀನುಗಾರರಿಗೆ 24,090 ಕೆ.ಎಲ್. ಸೀಮೆಎಣ್ಣೆ ವಿತರಣೆಗೆ ಆಗ್ರಹ

ಗೋಪಾಲಕೃಷ್ಣ ಪಾದೂರ್

ಉಡುಪಿ: ಕರ್ನಾಟಕ ಕರಾವಳಿಯ 8030 ಯಾಂತ್ರೀಕೃತ ನಾಡದೋಣಿ ಮೀನುಗಾರರಿಗೆ ಎರಡು ತಿಂಗಳ ನಿಷೇಧಿತ ಅವಧಿಯನ್ನು ಹೊರತುಪಡಿಸಿ ವರ್ಷದಲ್ಲಿ 10 ತಿಂಗಳು ಮಾಸಿಕ 300 ಲೀಟರ್‌ನಂತೆ ಸೀಮೆಎಣ್ಣೆ ವಿತರಿಸಲು ರಾಜ್ಯ ಸರ್ಕಾರ ಆದೇಶ ಹೊರಡಿಸಿದ್ದು, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ ಆಗಸ್ಟ್ ಅಂತ್ಯದೊಳಗೆ ಆದೇಶ ಅನುಷ್ಠಾನಗೊಳಿಸಬೇಕು ಎಂದು ಕರ್ನಾಟಕ ರಾಜ್ಯ ಸಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ ರಾಜ್ಯಾಧ್ಯಕ್ಷ ಆನಂದ ಖಾರ್ವಿ ಉಪ್ಪುಂದ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದ್ದಾರೆ.

2013ರಲ್ಲಿ ಮೀನುಗಾರಿಕೆ ಇಲಾಖೆಯ ವ್ಯಾಪ್ತಿಗೆ ಒಳಪಡುವ ನಾಡದೋಣಿ ಮೀನುಗಾರರಿಗೆ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಉತ್ತರ ಕನ್ನಡ 990, ದಕ್ಷಿಣ ಕನ್ನಡ 2610, ಉಡುಪಿ 914 ಸೇರಿ ಒಟ್ಟು 4514 ನಾಡದೋಣಿಗಳಿಗೆ ಪ್ರತಿ ತಿಂಗಳಿಗೆ ತಲಾ 300 ಲೀಟರ್ ಸಬ್ಸಿಡಿಯುಕ್ತ ಸೀಮೆಎಣ್ಣೆ ಪ್ರತಿ ಲೀಟರ್‌ಗೆ 16.50ರೂ. ದರದಲ್ಲಿ ವಿತರಿಸಲು ಆದೇಶ ನೀಡಲಾಗಿತ್ತು. ಪ್ರಸ್ತುತ ದ.ಕ.- 1345, ಉಡುಪಿ 4896, ಉ.ಕ. 1789 ಸೇರಿ ಒಟ್ಟು 8030 ಪರವಾನಿಗೆ ಪಡೆದ ದೋಣಿಗಳಿದ್ದು, ಸೀಮೆಎಣ್ಣೆ ವಿತರಣೆಯಲ್ಲಿ ಯಾವುದೇ ಏರಿಕೆ ಆಗಿರಲಿಲ್ಲ. ಪ್ರಸ್ತುತ ಚಾಲನೆಯಲ್ಲಿರುವ ಮೀನುಗಾರಿಕೆ ನಾಡದೋಣಿಗಳಿಗೆ ಅನುಗುಣವಾಗಿ ಪ್ರತಿ ತಿಂಗಳು ಪ್ರತಿ ದೋಣಿಗೆ 300 ಲೀಟರ್‌ನಂತೆ ವಾರ್ಷಿಕ ಒಟ್ಟು 24090 ಕೆ.ಎಲ್. ಸೀಮೆಎಣ್ಣೆ ಅವಶ್ಯಕವಿದೆ. ಈ ಹಿನ್ನೆಲೆಯಲ್ಲಿ ಸೀಮೆಎಣ್ಣೆ ಏರಿಕೆಗೆ ಸರ್ಕಾರಕ್ಕೆ ಒತ್ತಾಯಿಸಲಾಗಿದ್ದು, ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರ್ಕಾರ ಪರಿಷ್ಕೃತ ಆದೇಶ ಹೊರಡಿಸಿದೆ ಎಂದು ತಿಳಿಸಿದರು. ಈ ಆದೇಶ ಕೇವಲ ಕಾಗದದಲ್ಲಿಯೇ ಉಳಿಯದೆ ಈ ತಿಂಗಳ ಅಂತ್ಯದೊಳಗೆ ಅನುಷ್ಠಾನಕ್ಕೆ ಬರಬೇಕು. ಇದರಿಂದ ಮೀನುಗಾರಿಕಾ ಋತುವಿನಲ್ಲಿ ಮೀನುಗಾರರಿಗೆ ಬಹಳ ಪ್ರಯೋಜನವಾಗಲಿದೆ ಎಂದು ಹೇಳಿದರು.

3 ಕೋಟಿ ರೂ. ನಷ್ಟ
ಭಾರೀ ಮಳೆಯಿಂದಾಗಿ ಉಡುಪಿ ಜಿಲ್ಲೆಯಲ್ಲಿ 64 ನಾಡದೋಣಿಗಳಿಗೆ ಹಾನಿಯಾಗಿದ್ದು, ಇದರಲ್ಲಿ 10 ದೋಣಿಗಳು ಸಂಪೂರ್ಣ ನಾಶವಾಗಿವೆ. ಇದರಿಂದ ಸುಮಾರು 3 ಕೋಟಿ ರೂ. ನಷ್ಟ ಉಂಟಾಗಿದೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋಪಾಲ್ ಆರ್.ಕೆ. ಉಪಸ್ಥಿತರಿದ್ದರು.