ರಾಯಚೂರು ನಗರ ಸೇರಿ ಜಿಲ್ಲಾದ್ಯಂತ ಗುರುವಾರ ನವರಾತ್ರಿ ಉತ್ಸವದ ವಿಜಯದಶಮಿ ಅಂಗವಾಗಿ ದಸರಾ ಹಬ್ಬವನ್ನು ಸಡಗರದಿಂದಆಚರಣೆ ಮಾಡಲಾಯಿತು.
ನಾಡಹಬ್ಬದ ದಸರಾಮಹೋತ್ಸವ ನಿಮಿತ್ತ ಮಹಾನಗರ ವಲಯ ಕಚೇರಿಯಿಂದ ಮಾಣಿಕಪ್ರಭು ದೇವಸ್ಥಾನದ ಬನ್ನಿಮಂಟಪದವರೆಗೆ ನಾಡದೇವಿಯ ಮೆರವಣಿಗೆ ಅದ್ಧೂರಿಯಾಗಿ ನಡೆಯಿತು.
ಮೆರವಣಿಗೆಗೆ ಸ್ತಬ್ಧಚಿತ್ರ ಹಾಗೂ ವಿವಿಧ ಜಾನಪದ ಕಲಾ ತಂಡಗಳು ಆಕರ್ಷಣೆ ಒದಗಿಸಿದವು. ಪಾಲಿಕೆ ಕಚೇರಿಯಲ್ಲಿ ಮೆರವಣಿಗೆಗೆ ಕಿಲ್ಲೇ ಮಠದ ಶ್ರೀ ಶಾಂತಮಲ್ಲ ಶಿವಾಚಾರ್ಯ ಸ್ವಾಮೀಜಿ, ಶಾಸಕ ಡಾ.ಶಿವರಾಜ ಪಾಟೀಲ್,ಪಾಲಿಕೆ ಅಧ್ಯಕ್ಷೆ ನರಸಮ್ಮ ಮಾಡಗಿರಿ ಚಾಲನೆ ನೀಡಿದರು.
ಮೆರವಣಿಗೆಯು ನಗರದ ಏಕಮಿನಾರ್ ತೀನ್ ಕಂದಿಲ್, ಸರಾಫ್ ಬಜಾರ, ಸ್ವಾಮಿ ವಿವೇಕಾನಂದ ವೃತ್ತ, ಹನುಮಾನ್ ಟಾಕೀಜ್, ಎಲ್‌ವಿಡಿ ಕಾಲೇಜು ಮೂಲಕ ಬನ್ನಿ ಮಂಟಪದವರೆಗೆ ಸಾಗಿತು. ಮಹಿಳೆಯರ ಡೊಳ್ಳು ಕುಣಿತ, ಕೋಲಾಟ, ಗೊಂಬೆಗಳ ನೃತ್ಯ ಹಾಗೂ ವಿವಿಧ ಜಾನಪದ ತಂಡಗಳ ಪ್ರದರ್ಶನ ಗಮನ ಸೆಳೆಯಿತು. ಜತೆಗೆ ಪಾಲಿಕೆ ಸಿಬ್ಬಂದಿ ನೃತ್ಯಮಾಡಿ ಗಮನ ಸೆಳೆದರು.
ಈ ಸಂದರ್ಭದಲ್ಲಿ ಪಾಲಿಕೆ ಆಯುಕ್ತ ಜುಬೆನ್ ಮೊಹಪಾತ್ರ, ಉಪಾಆಯುಕ್ತರಾದ ಸಂತೋಷಿ ರಾಣಿ,ಮೇನಾಕ ಪಾಟೀಲ್, ಸದಸ್ಯರಾದ ನಾಗರಾಜ, ಶರಣಬಸಪ್ಪ ಬಲ್ಲಟಗಿ,ಈ.ಶಶಿರಾಜ, ದರೂರು ಬಸವರಾಜ,ತಹಸೀಲ್ದಾರ್ ಸುರೇಶ ವರ್ಮಾ,ಮುಖಂಡರಾದ ರವಿ ಬೋಸರಾಜು, ಮಹ್ಮದ್ ಶಾಲಂ ಸೇರಿ ಅನೇಕರು ಇದ್ದರು.