ಜಿಲ್ಲೆ

ನಾಡಪೆದ ಆಶಾ ಚಿತ್ರಕ್ಕೆ ೬೨ ಪ್ರಶಸ್ತಿಗಳು

reportermys

ವಿಕೆ೩ ಪಿಕ್ಚರ್ಸ್ ಬ್ಯಾನರ್‌ನಲ್ಲಿ ಈರಮಂಡ ಹರಿಣಿ ವಿಜಯ್ ಮತ್ತು ಕೊಟ್ಟುಕತ್ತಿರ ಯಶೋಧ ಪ್ರಕಾಶ್ ನಿರ್ಮಾಣದಲ್ಲಿ ತಯಾರಾದ ಕೊಡವ ಕಾದಂಬರಿ ಆಧಾರಿತ, ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ ‘‘ನಾಡ ಪೆದ ಆಶಾ’’ ಕೊಡವ ಚಲನಚಿತ್ರ ಇಲ್ಲಿಯವರೆಗೆ ಬರೋಬ್ಬರಿ ೬೨ ಅಂತರ ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಈ ಹಿನ್ನೆಲೆಯಲ್ಲಿ ಚಿತ್ರತಂಡ ಸೋಮವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹರ್ಷ ವ್ಯಕ್ತಪಡಿಸಿತು.


ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಮಾತನಾಡಿ ಕೊಡಗಿನ ಸಂಸ್ಕೃತಿ, ಆಚಾರ, ವಿಚಾರ, ಪರಿಸರದ ಮೇಲೆ ಬೆಳಕು ಚೆಲ್ಲಿರುವ ಮತ್ತು ಸ್ವಾವಲಂಬಿ ಮಹಿಳೆಯೊಬ್ಬಳು ಸಮಾಜಮುಖಿಯಾಗಿ ಸೇವೆ ಸಲ್ಲಿಸುವ ಕಥಾಹಂದರದ ‘‘ನಾಡ ಪೆದ ಆಶಾ’’ ಕೊಡವ ಭಾಷೆಯ ಚಲನಚಿತ್ರವಾದರೂ ಎಲ್ಲಾ ಜಾತಿ, ಮತ, ಬೇರೆ ಭಾಷೆಯವರು ಚಿತ್ರ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿ ಪ್ರೋತ್ಸಾಹ ನೀಡಿದ್ದಾರೆ ಎಂದರು.


ನಾಡ ಪೆದ ಆಶಾ ಕೊಡವ ಸಿನಿಮಾ ೨೦೨೧ನೇ ಸಾಲಿನ ಕೊಡವ ಸಾಹಿತ್ಯ ಅಕಾಡಮಿಯ ಪುಸ್ತಕ ಪ್ರಶಸ್ತಿ, ೭ನೇ ಡೆಹ್ರಡೂನ್, ೨ನೇ ಚಂಡಿಗಡ್, ೨೭ನೇ ಕೊಲ್ಕತ್ತಾ, ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ, ಕರ್ನಾಟಕದ ೨ನೇ ಮೈಸೂರು ದಸರಾ ಚಲನಚಿತ್ರೋತ್ಸವ-೨೦೨೨ರಲ್ಲೂ ಅಧಿಕೃತವಾಗಿ ಆಯ್ಕೆಗೊಂಡು ಪ್ರದರ್ಶನ ಕಂಡು ಪ್ರಶಸ್ತಿ ಪಡೆದಿತ್ತು.


ಸಹ ನಿರ್ಮಾಪಕಿ ಕೊಟ್ಟುಕತ್ತಿರ ಯಶೋಧ ಪ್ರಕಾಶ್ ಮಾತನಾಡಿ ಚಿತ್ರಕ್ಕೆ ದೊರೆತ್ತಿರುವ ಪ್ರಶಸ್ತಿಗಳು ಮತ್ತಷ್ಟು ಸಿನಿಮಾಗಳ ನಿರ್ಮಾಣಕ್ಕೆ ಹೊಸ ಸ್ಫೂರ್ತಿಯನ್ನು ತುಂಬಿದೆ. ಕೊಡವ ಸಿನಿಮಾವನ್ನು ಪ್ರತಿಯೊಬ್ಬರು ಕೊಡಗಿನ ಸಿನಿಮಾವೆಂದು ಸ್ವೀಕರಿಸಬೇಕು, ಕೇವಲ ಕೊಡವರಿಗಾಗಿ ಎಂದು ಭಾವಿಸಬಾರದೆಂದು ಮನವಿ ಮಾಡಿದರು. ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಅವರ ‘‘ವಿಧಿರ ಕಳಿಲ್’’ ಕಾದಂಬರಿ ಆಧಾರಿತ "ಪೊಮ್ಮಾಲೆ ಕೊಡಗ್" ಕೊಡವ ಚಲನಚಿತ್ರ ಮಾ.೨೦ ರಿಂದ ೨೭ರ ವರೆಗೆ ಪ್ರದರ್ಶನಗೊಳ್ಳಲಿದೆ ಎಂದು ಇದೇ ವೇಳೆ ತಿಳಿಸಿದರು.


ನಿರ್ದೇಶಕ ಕೊಟ್ಟುಕತ್ತಿರ ಪ್ರಕಾಶ್ ಕಾರ್ಯಪ್ಪ ಮಾತನಾಡಿ ನಾಡ ಪೆದ ಆಶಾ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಕೊಡಗು ಜಿಲ್ಲೆ ಮತ್ತು ಹೊರ ಜಿಲ್ಲೆಯಲ್ಲಿ ಯಶಸ್ವಿ ೧೫೦ ಪ್ರದರ್ಶನಗಳನ್ನು ಕಂಡಿದೆ ಎಂದರು. ಚಿತ್ರದ ನಾಯಕ ನಟ ಬೊಳ್ಳಜಿರ ಬಿ.ಅಯ್ಯಪ್ಪ ಮಾತನಾಡಿದರು.