ಜಿಲ್ಲೆ

ವ್ಯಕ್ತಿ ಜೀವನದಲ್ಲಿ ಹೆಣ್ಣಿನ ಪಾತ್ರ ಮಹತ್ವದ್ದು

ಜಗಳೂರು: ಒಬ್ಬ ವ್ಯಕ್ತಿಯ ಜೀವನದಲ್ಲಿ ಮಹಿಳೆಯ ಪಾತ್ರ ಮಹತ್ವದ್ದಾಗಿರುತ್ತದೆ. ಆಕೆ ತಾಯಿಯಾಗಿ, ಸೋದರಿಯಾಗಿ, ಪತ್ನಿಯಾಗಿ ಬಾಳಿಗೆ ಬೆಳಕಾಗುತ್ತಾಳೆ ಎಂದು ನಬಾರ್ಡ್ ಸಂಸ್ಥೆಯ ಡಿಎಂಡಿ ರಶ್ಮಿರೇಖಾ ಹೇಳಿದರು.

ಪಟ್ಟಣದ ಸಂಕಲ್ಪ ಅಭಿವೃದ್ಧಿ ಸಂಸ್ಥೆ ಕಚೇರಿಯ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಸಮಾನತೆ ಜತೆಗೆ ಒಗ್ಗಟ್ಟಿನಲ್ಲಿ ಮಹಿಳೆಯರು ಸದಾ ಮುಂದಿರುವುದು ದೇಶದ ಆರ್ಥಿಕ ಅಭಿವೃದ್ಧಿಗೆ ಸಾಕಷ್ಟು ಅನುಕೂಲವಾಗಲಿದೆ. ಮಹಿಳೆಯರ ಸಾಧನೆಗೆ ಮನಃಪೂರ್ವಕ ಗೌರವ ಸೂಚಿಸಲು ಮಹಿಳಾ ದಿನವನ್ನು ಆಚರಿಸಲಾಗುತ್ತದೆ. ಹೆಣ್ಣು ತಾಂತ್ರಿಕ, ಸಂಶೋಧನಾ ಹಾಗೂ ಉತ್ಪಾದನಾ ಕ್ಷೇತ್ರಗಳಲ್ಲಿ ತನ್ನದೇ ಆದ ಕೊಡುಗೆಗಳನ್ನು ನೀಡಿದ್ದಾಳೆ ಎಂದರು.

ಸಂಕಲ್ಪ ಅಭಿವೃದ್ಧಿ ಸಂಸ್ಥೆ ಅಧ್ಯಕ್ಷ ಕೆ. ಸೋಮಶೇಖರ್ ಮಾತನಾಡಿ, ಮಹಿಳೆಯರ ಸಬಲೀಕರಣಕ್ಕೆ ಸಂಕಲ್ಪ ಸಂಸ್ಥೆ ಪಣತೊಟ್ಟಿದೆ. ಸಾವಿರಾರು ಮಹಿಳೆಯರಿಗೆ ತರಬೇತಿ, ಜತೆಗೆ ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಯಂತ್ರೋಪಕರಣ ನೀಡಿದೆ. ಇದರ ಸದುಪಯೋಗ ಪಡೆದ ಸಾಕಷ್ಟು ಮಹಿಳೆಯರು ಆರ್ಥಿಕವಾಗಿ ಪ್ರಗತಿ ಸಾಧಿಸಿದ್ದಾರೆ ಎಂದು ಮಾಹಿತಿ ನೀಡಿದರು.

ವಕೀಲ ರಂಗನಾಥ್ ಮಾತನಾಡಿ, ಹೆಣ್ಣು ಹಕ್ಕು ಮತ್ತು ಲಿಂಗ ಸಮಾನತೆಯ ಬಗ್ಗೆ ತಿಳಿದುಕೊಳ್ಳಬೇಕಾಗಿದೆ. ಸಮಾಜದ ಕಟ್ಟುಪಾಡುಗಳ ಹೊರತಾಗಿಯೂ ಅವಳು ಸಾಧನೆಯ ಶಿಖರವನ್ನು ಮುಟ್ಟುತ್ತಿದ್ದಾಳೆ. ಹಾಗಾಗಿ ದೇಶದಲ್ಲಿ ಹೆಣ್ಣಿನ ಭ್ರೂಣಹತ್ಯೆ ನಿಷೇಧವಾಗಬೇಕು. ಇಲ್ಲವಾದಲ್ಲಿ ಭವಿಷ್ಯದಲ್ಲಿ ಸಾಕಷ್ಟು ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ ಎಂದು ಹೇಳಿದರು.

ಟಿಡಿಎಸ್ ಸಮಿತಿ ಅಧ್ಯಕ್ಷೆ ಸುಜಾತಾ, ಸಂಕಲ್ಪ ಅಭಿವೃದ್ಧಿ ಸಂಸ್ಥೆ ಕಾರ್ಯದರ್ಶಿ ಸೌಭಾಗ್ಯಲಕ್ಷ್ಮೀ, ಚಳ್ಳಕೆರೆ ಸಂಪನ್ಮೂಲ ವ್ಯಕ್ತಿ ಸುಮತಿ, ಮರೇನಹಳ್ಳಿ ಚಂದ್ರಮ್ಮ, ಜಿ.ಸಿ. ಬಾಲರಾಜ್, ಮಂಗಳಮ್ಮ, ರಾಜಮ್ಮ ಸೇರಿ ಮತ್ತಿತರರಿದ್ದರು.