ಶಿರಸಿ: ಸ್ವರ ಸಂವೇದನಾ ಪ್ರತಿಷ್ಠಾನ ಕಳೆದ 11 ವರ್ಷಗಳಿಂದ ತಾಲೂಕಿನ ಗಿಳಗುಂಡಿಯಲ್ಲಿ ನಡೆಸಿಕೊಂಡು ಬರುತ್ತಿರುವ ನಾದಸಿರಿ ಸಂಗೀತ ಕಾರ್ಯಕ್ರಮವನ್ನು ಈ ವರ್ಷ ಮೇ 31ರಂದು ಹಮ್ಮಿಕೊಳ್ಳಲಾಗಿದೆ ಎಂದು ಸಂಘಟಕ ವಿ.ಎನ್. ಹೆಗಡೆ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಂಗಳವಾರ ಮಾತನಾಡಿದ ಅವರು, ಮೇ 31ರಂದು ಬೆಳಗ್ಗೆ 8 ಗಂಟೆಯಿಂದ ಪುಣೆಯ ಪಂ. ಉದಯ್ ಭಾವಲ್ಕರ್ ಅವರಿಂದ, ಪ್ರಾಚೀನ ಸಂಗೀತ ಪ್ರಕಾರವಾದ ದ್ರುಪದ ಶೈಲಿಯ ಶಾಸ್ತ್ರೀಯ ಸಂಗೀತ ಗಾಯನ ನಡೆಯಲಿದೆ. ಪ್ರತಾಪ್ ಅವಧ್ ಅವರು ಪಕ್ಕಾವಾದ್ಯದಲ್ಲಿ ಸಹಕರಿಸುವರು. ನಂತರ ಗುರುಪ್ರಸಾದ ಹೆಗಡೆ ಗಿಳಿಗುಂಡಿ ಅವರಿಂದ ಸಾರಂಗಿ ವಾದನ, ಮುಂಬೈ ಪ್ರಿಯಾ ಪುರುಷೋತ್ತಮನ್ರಿಂದ ಗಾಯನ ಜರುಗಲಿದೆ.
ಮಧ್ಯಾಹ್ನ ಬೆಂಗಳೂರಿನ ಕೌಶಿಕ್ ಐತಾಳ್ ಇವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ. ನಂತರದಲ್ಲಿ ಮುಂಬೈಯ ಹರ್ಷ್ ನಾರಾಯಣ ಅವರಿಂದ ಸಾರಂಗಿ ವಾದನ ಪ್ರಸ್ತುತಗೊಳ್ಳುವುದು. ಸಂಜೆ ಗ್ವಾಲಿಯರ್ ಘರಾಣೆಯ ಹೆಸರಾಂತ ಗಾಯಕರಾದ ಕೋಲ್ಕತ್ತಾದ ಓಂಕಾರ್ ದಾದರ್ ಕರ್ ಇವರಿಂದ ಗಾಯನ ಕಾರ್ಯಕ್ರಮ ನಡೆಯಲಿದೆ ಎಂದರು.
ರಾತ್ರಿ ದೇಶದ ಪ್ರಖ್ಯಾತ ಕೊಳಲು ವಾದಕರಾದ ವಿಶ್ವಪ್ರಸಿದ್ಧ ಪಂ. ರಾಕೇಶ್ ಚೌರಾಸಿಯಾ ಅವರ ಬಾನ್ಸುರಿ ವಾದನ ನಡೆಯಲಿದೆ. ಶ್ರೇಷ್ಠ ತಬಲಾ ವಾದಕ ಪಂ. ಯೋಗೇಶ ಸಂಶಿ ತಬಲಾದಲ್ಲಿ ಸಹಕರಿಸಲಿದ್ದಾರೆ. ನಂತರ ರಾಜ್ಯದ ಹಿರಿಯ ಪ್ರಖ್ಯಾತ ಗಾಯಕರಾದ ಪಂ. ವಿನಾಯಕ ತೊರವಿಯವರ ಗಾಯನದೊಂದಿಗೆ ಸಂಗೀತೋತ್ಸವ ಸಮಾಪ್ತಗೊಳ್ಳಲಿದೆ ಎಂದರು.
ಸಹ ಕಲಾವಿದರಾಗಿ ತಬಲಾದಲ್ಲಿ ಪಂ. ಭರತ್ ಕಾಮತ್ ಪುಣೆ, ಸ್ವಪ್ನಿಲ್ ಭಿಸೆ ಮುಂಬೈ, ಭಾರವೀ ದೇರಾಜೆ ಸುರತ್ಕಲ್, ಮಹೇಶ ಹೆಗಡೆ ಹೊಸಗದ್ದೆ ಸಾಥ್ ನೀಡಲಿದ್ದಾರೆ. ಸಂವಾದಿನಿಯಲ್ಲಿ ಗುರುಪ್ರಸಾದ್ ಹೆಗಡೆ ಧಾರವಾಡ, ಭರತ್ ಹೆಗಡೆ ಹೆಬ್ಬಲಸು ಸಹಕರಿಸಲಿದ್ದಾರೆ ಎಂದರು. ಸುದ್ದಿಗೋಷ್ಠಿಯಲ್ಲಿ ಜಿ.ಕೆ. ಹೆಗಡೆ ಬಿಸಲಕೊಪ್ಪ, ದಿನೇಶ ಹೆಗಡೆ, ಗುರುಪ್ರಸಾದ ಗಿಳಿಗುಂಡಿ, ಬಾಲಸುಬ್ರಹ್ಮಣ್ಯ ಇದ್ದರು.