ಜಿಲ್ಲೆ

ನಾಡ ಪೆದ ಆಶಾಗೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ಪ್ರಶಸ್ತಿಯ ಕಿರೀಟ

ಮಡಿಕೇರಿ: ಇತ್ತೀಚೆಗೆ ಹುಬ್ಬಳ್ಳಿಯ ಸವಾಯಿ ಗಂಧರ್ವ ಕಲಾ ಮಂದಿರದಲ್ಲಿ ನಡೆದ ೨ನೇ ಅಂತರರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಬೆಸ್ಟ್ ಡೈರೆಕ್ಟರ್ ಅವಾರ್ಡ ಪಡೆದಿದ್ದ ನಾಡ ಪೆದ ಆಶಾ ಕೊಡವ ಚಲನಚಿತ್ರ ಇದೀಗ ಮತ್ತೊಂದು ಪ್ರಶಸ್ತಿಯ ಗರಿಯನ್ನು ಮುಡಿಗೇರಿಸಿಕೊಂಡಿದೆ. ಬೆಂಗಳೂರಿನಲ್ಲಿ ನಡೆದ ೩ನೇ ಅಂತರರಾಷ್ಟ್ರೀಯ ಪನೋರಮ ಚಿತ್ರೋತ್ಸವದಲ್ಲಿ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಎನ್ನುವ ಕಿರೀಟವನ್ನು ತನ್ನದಾಗಿಸಿಕೊಂಡಿದೆ.


ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ನಿರ್ದೇಶನದ, ವಿಕೆ೩ ಪಿಕ್ಚರ್ಸ್ ಬ್ಯಾನರಿನಡಿ ಈರಮಂಡ ಹರಿಣಿ ವಿಜಯ್ ಹಾಗೂ ಕೊಟ್ಟುಕತ್ತೀರ ಯಶೋಧ ಪ್ರಕಾಶ್ ನಿರ್ಮಾಣದ ಕೊಡವ ಚಿತ್ರ ಇದಾಗಿದೆ. ಹಿರಿಯ ಸಾಹಿತಿ ನಾಗೇಶ್ ಕಾಲೂರುರವರ ಕಾದಂಬರಿಯನ್ನು ಆಧರಿಸಿ ಚಿತ್ರಿಸಲಾಗಿದೆ. ಚಲನಚಿತ್ರೋತ್ಸವಕ್ಕೆ ಬಂದಿದ್ದ ೧೦೦ ಕ್ಕೂ ಅಧಿಕ ಚಿತ್ರಗಳಲ್ಲಿ ೮ ಚಿತ್ರಗಳು ಅತ್ಯುತ್ತಮ ಚಿತ್ರ ಪ್ರಶಸ್ತಿಗೆ ಆಯ್ಕೆಗೊಂಡಿತ್ತು. ಇವುಗಳಲ್ಲಿ ನಾಡ ಪೆದ ಆಶಾ ಚಿತ್ರ ಕೂಡ ಒಂದಾಗಿದೆ.


ಬೆಂಗಳೂರಿನ ಸ್ಕೌಟ್ಸ್ ಮತ್ತು ಗೈಡ್ಸ್ ಸಭಾಂಗಣದಲ್ಲಿ ಫಿಲಂಹೋಲಿಕ್ ಫೌಂಡೇಶನ್‌ನ ಸಹಯೋಗದಲ್ಲಿ ನಡೆದ ೩ನೇ ಅಂತರರಾಷ್ಟ್ರೀಯ ಪನೋರಮ ಚಿತ್ರೋತ್ಸವದಲ್ಲಿ ಪದ್ಮಶ್ರೀ ಪುರಸ್ಕೃತ ಸಾಹಿತಿ ಡಾ.ದೊಡ್ಡರಂಗೇಗೌಡ, ಖ್ಯಾತ ನಿರ್ಮಾಪಕ ಹಾಗೂ ಛಾಯಾಗ್ರಾಹಕ ಜೆ.ಜೆ.ಕೃಷ್ಣ, ಖ್ಯಾತ ನಟಿಯರಾದ ರೇಖಾ ದಾಸ್, ನೀತು ಶೆಟ್ಟಿ, ನಿಶ್ವಿಕಾ ನಾಯ್ಡು, ಫಿಲಂಹೋಲಿಕ್ ಫೌಂಡೇಶನ್ ಅಧ್ಯಕ್ಷ ಹಾಗೂ ಚಿತ್ರೋತ್ಸವದ ನಿರ್ದೇಶಕ ಆದಿತ್ಯ ಅವರುಗಳ ಉಪಸ್ಥಿತಿಯಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಭಾ.ಮಾ.ಹರೀಶ್ ಅವರಿಂದ ನಾಡ ಪೆದ ಆಶಾ ಚಿತ್ರದ ನಿರ್ಮಾಪಕಿ ಈರಮಂಡ ಹರಿಣಿ ವಿಜಯ್ ಅತ್ಯುತ್ತಮ ಪ್ರಾದೇಶಿಕ ಚಲನಚಿತ್ರ ಪ್ರಶಸ್ತಿಯನ್ನು ಸ್ವೀಕರಿಸಿದರು.


ನಂತರ ವೇದಿಕೆಯಲ್ಲಿ ಮಾತನಾಡಿ, ಪ್ರಶಸ್ತಿಯನ್ನು ನಿರ್ದೇಶಕರು ಹಾಗೂ ಇಡೀ ಚಿತ್ರತಂಡಕ್ಕೆ ಸಮರ್ಪಿಸುವುದಾಗಿ ತಿಳಿಸಿದ ಅವರು, ಚಿತ್ರದ ಯಶಸ್ಸಿಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಕೃತಜ್ಞತೆ ಸಲ್ಲಿಸುವುದಾಗಿ ಹೇಳಿದರು.


ಚಿತ್ರಕ್ಕೆ ಪ್ರಶಸ್ತಿಗಳು ದೊರೆಯುತ್ತಿರುವ ಬಗ್ಗೆ ನಿರ್ದೇಶಕ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪ ಹರ್ಷ ವ್ಯಕ್ತಪಡಿಸಿದ್ದು, ಈ ಪ್ರಶಸ್ತಿ ಮತ್ತಷ್ಟು ಚಿತ್ರಗಳ ನಿರ್ದೇಶನಕ್ಕೆ ಪ್ರೇರಣೆ ನೀಡಿದೆ ಎಂದಿದ್ದಾರೆ.