ಜಿಲ್ಲೆ

ನಾ ಡಿಸೋಜರವರ ಸಾಹಿತ್ಯ ಜೈಮಿನ ಭಾರತದ ಅಶ್ವಮೇಧ ಯಜ್ಞದ ಕುದುರೆಯಂತೆ

ಮಡಿಕೇರಿ: ಸಾಹಿತಿ ನಾ ಡಿಸೋಜರವರ ಸಾಹಿತ್ಯ ಜೈಮಿನ ಭಾರತದ ಅಶ್ವಮೇಧ ಯಜ್ಞದ ಕುದುರೆಯಂತೆ. ಕುದುರೆ ಚಲಿಸಿದಂತೆ ಕಥೆಗಳು ನಿಲ್ಲುತ್ತದೆ. ಕುದುರೆ ನಿಂತರೆ ಕಥೆಗಳು ಚಲಿಸಲಾರಂಭಿಸುತ್ತದೆ. ಅದೇ ರೀತಿಯಲ್ಲಿ ನಾ.ಡಿಸೋಜರವರ ಕಾದಂಬರಿಗಳಲ್ಲಿ ಅಣೆಕಟ್ಟು, ಒಡ್ಡುಗಳ ಕಾರಣದಿಂದ ನೀರು ನಿಂತರೆ ಒಂದೊಂದು ಕಥೆಗಳು ಹುಟ್ಟಿಕೊಳ್ಳುತ್ತವೆ ಎಂದು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಉಪನ್ಯಾಸಕ ಡಾ.ಕೆ.ಎಚ್.ಮುಸ್ತಫಾ ಅಭಿಪ್ರಾಯಪಟ್ಟರು.


ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಮತ್ತು ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ಇತ್ತೀಚೆಗೆ ನಡೆದ ಡಾ.ನಾ ಡಿಸೋಜ ಮಕ್ಕಳ ಸಾಹಿತ್ಯ ಪುರಸ್ಕಾರ ದತ್ತಿ ಉಪನ್ಯಾಸ ಮತ್ತು ಕಥಾಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಡಾ.ನಾ ಡಿಸೋಜ ಅವರ ಸಾಹಿತ್ಯದ ಕುರಿತು ದತ್ತಿ ಉಪನ್ಯಾಸ ನೀಡಿದರು.


ಅವರ ಸಾಹಿತ್ಯದಲ್ಲಿ ಕಾಣುವ ದಟ್ಟ ಜೀವನಾನುಭವ, ಪ್ರಕೃತಿಯ ನಿರೂಪಣೆಗೆ ಅವರ ಬಾಲ್ಯಕಾಲದ ಪರಿಸರ ಹೇಗೆ ಕಾರಣವಾಯಿತು ಎಂಬುದನ್ನು ಚರ್ಚಿಸಿದರು. ಅವರ ಕಥನ ಮಾದರಿಗಳಲ್ಲಿ ಕಾಣುವ ಸಮುದಾಯ ವಿಮರ್ಶೆಯ ಮಾದರಿಗಳನ್ನು ಸುಣ್ಣಬಳಿದ ಸಮಾಧಿಗಳು, ನೆಲೆ, ಬಣ್ಣ ಮುಂತಾದ ಕೃತಿಗಳನ್ನು ಆಧಾರವಾಗಿಟ್ಟುಕೊಂಡು ಚರ್ಚಿಸಿದರು. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಅವರ ಸಾಹಿತ್ಯವನ್ನು ಓದಬೇಕು ಎಂದು ಡಾ.ಕೆ.ಎಚ್.ಮುಸ್ತಫಾ ಹೇಳಿದರು.


ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ಕಾಲೇಜಿನ ಪ್ರಭಾರ ಪ್ರಾಂಶುಪಾಲ ಪ್ರೊ.ಎಂ.ಪಿ.ಕೃಷ್ಣರವರು, ಡಾ. ನಾ.ಡಿಸೋಜರವರ ಸಾಹಿತ್ಯ ಸೃಷ್ಟಿಯ ಪರಿಚಯಾತ್ಮಕ ನೆಲೆಯನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.


ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ಎಸ್.ಐ.ಮುನೀರ್ ಅಹ್ಮದ್ ಮಾತನಾಡಿ, ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸಾಹಿತ್ಯ ಪರಿಷತ್ತಿನ ಚಟುವಟಿಕೆಯಲ್ಲಿ ಭಾಗವಹಿಸಬೇಕು. ನಾ. ಡಿಸೋಜ ಅವರ ಮಕ್ಕಳ ಸಾಹಿತ್ಯಕ್ಕೆ ಸಂಬಂಧಿಸಿದ ಕೃತಿಗಳನ್ನು ಹೆಚ್ಚು ಹೆಚ್ಚು ಓದಬೇಕು. ಆ ಮೂಲಕ ಜೀವಪರವಾದ ನಿಲುವುಗಳನ್ನು ಪ್ರತಿಪಾದಿಸುವ ಉತ್ತಮ ಪ್ರಜೆಗಳಾಗಬೇಕು. ಸಾಹಿತ್ಯ, ಸಂಸ್ಕೃತಿಗಳು ಬದುಕಿನ ರಹದಾರಿ ರೂಪಿಸುವ ಮಹತ್ತರವಾದ ಕಾರ್ಯ ಮಾಡುತ್ತದೆ. ಆದ್ದರಿಂದ ಸಾಹಿತ್ಯಕ ಒಲವನ್ನು ನಮ್ಮಲ್ಲಿ ವೃದ್ಧಿಸಿಕೊಳ್ಳದೆ ಮನುಷ್ಯಪರವಾಗಿ, ಜೀವಪರವಾಗಿರಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟರು.


ಕಾರ್ಯಕ್ರಮದಲ್ಲಿ ಕೊಡಗಿನ ಪದವಿ ಪೂರ್ವ ವಿದ್ಯಾರ್ಥಿಗಳಿಗೆ ನಡೆಸಿದ ಕಥಾಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿ ರೇವತಿ ರಮೇಶ್, ಗೌರವ ಕೋಶಾಧಿಕಾರಿ ಎಸ್.ಎಸ್.ಸಂಪತ್ ಕುಮಾರ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಕಡ್ಲೇರ ತುಳಸಿ ಮೋಹನ್, ಕಾಲೇಜಿನ ಉಪನ್ಯಾಸಕರಾದ ಡಾ.ಎನ್.ವಿ.ಕರುಣಾಕರ, ಮುಖೇಶ್, ರಾಜೀವ್ ಉಪಸ್ಥಿತರಿದ್ದರು. ಎನ್‌ಎಸ್‌ಎಸ್, ಎನ್‌ಸಿಸಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.