ವಿಜಯವಾಣಿ ಸುದ್ದಿಜಾಲ ಉಡುಪಿ
ವ್ಯಾಸ ಮಹರ್ಷಿಗಳು ಲಕ್ಷಾಂತರ ಸಂಖ್ಯೆಯ ಶ್ಲೋಕಗಳುಳ್ಳ ಮಹಾಭಾರತ ಗ್ರಂಥ ರಚಿಸಿದ್ದು ಅದನ್ನು ಕೇವಲ 1,600 ಶ್ಲೋಕಗಳಲ್ಲಿ ಪಂಪ ಕವಿಯು ಪಂಪ ಭಾರತ ಎಂಬ ಚಂಪೂ ಕಾವ್ಯ ರಚಿಸಿದ್ದಾನೆ. ಪಂಪನ ಆ ಮಹಾಕಾವ್ಯವನ್ನು ಇಂಗ್ಲಿಷ್ಗೆ ಭಾಷಾಂತರಿಸಿ ಕನ್ನಡೇತರ ಭಾಷೆಗೆ ತಲುಪಿಸಿದ ಕೀರ್ತಿ ತಿರುಮಲೇಶ್ವರ ಭಟ್ಟರಿಗೆ ತಲುಪುತ್ತದೆ. ಅವರೊಬ್ಬ ಅಭಿನವ ಪಂಪ. ಅವರ ಸಾಧನೆ, ಕನ್ನಡಕ್ಕೆ ಮಾಡಿದ ಮಹದುಪಕಾರ ಮರೆಯಲಾಗದು. ಅವರಿಗೆ ಶಿರಬಾಗಿ ಕೈ ಮುಗಿಯುತ್ತೇನೆ ಎಂದು ಹಿರಿಯ ಸಾಹಿತಿ, ನಾಡೋಜ ಹಂ.ಪ. ನಾಗರಾಜಯ್ಯ ಹೇಳಿದರು.
ಖ್ಯಾತ ಅರ್ಥಧಾರಿ ಡಾ. ಎಂ.ಪ್ರಭಾಕರ ಜೋಶಿ ಮಾತನಾಡಿ, ಇದೀಗ ಪುಸ್ತಕಗಳ ಸಂಖ್ಯೆ ಹೆಚ್ಚಾಗಿದ್ದು ಓದುಗರ ಸಂಖ್ಯೆ ಕಡಿಮೆಯಾಗಿದೆ. ಪತ್ರಿಕೆಗಳಲ್ಲೂ ಸಹ ಸಾಹಿತ್ಯ ಮಾಯವಾಗಿದೆ. ಈ ಮೊದಲಿನಂತೆ ಕಥೆ, ಕವನ, ವಿಮರ್ಶೆ ವಿಭಾಗ ಬರುತ್ತಿಲ್ಲ. ಅದಕ್ಕೆಲ್ಲ ಅನೇಕ ಕಾರಣ ಇರಬಹುದು. 26 ವರ್ಷದ ಹಿಂದೆಯೇ ಅಕಲಂಕ ಪ್ರಶಸ್ತಿ ಆರಂಭಿಸಿದ ದಿ.ರಾಮ ಭಟ್ಟರಿಗೆ ಅಭಿನಂದನೆ. ಹಾಯಾಗಿ ವಿಶ್ರಾಂತ ಜೀವನ ಕಳೆಯಬೇಕಿದ್ದ ಜರ್ಮನ್ ತಿಮ್ಮಪ್ಪಣ್ಣ (ಎನ್.ತಿರುಮಲೇಶ್ವರ ಭಟ್) ಭಾಷಾಂತರದ ಮೂಲಕ ತನ್ನ ಬದುಕನ್ನು ಅರ್ಥಪೂರ್ಣವಾಗಿಸಿಕೊಂಡಿದ್ದಾರೆ. ಅವರ ಸಾಧನೆ ಅನನ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಕಸಾಪ ಜಿಲ್ಲಾಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಮಾತನಾಡಿ, ಕಸಾಪದಲ್ಲಿರುವ ವಿವಿಧ ದತ್ತಿ ಪುರಸ್ಕಾರಗಳ ಮಾಹಿತಿ ನೀಡಿದರು. ಅಲ್ಲದೆ, ದತ್ತಿ ಪುರಸ್ಕಾರ ಸ್ಥಾಪನೆಯಾದ ವಿಧಾನಗಳನ್ನು ಒಂದೆರಡು ಉದಾಹರಣೆ ಮೂಲಕ ವಿವರಿಸಿದರು.
ಕಾಲೇಜಿನ ಪ್ರಾಂಶುಪಾಲ ಲಕ್ಷ್ಮೀನಾರಾಯಣ ಕಾರಂತ, ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮಾತನಾಡಿದರು. ಶಂಕರಿ ಆರ್. ಭಟ್ಟ, ರಾಜೇಶ ಯು. ಉಪಸ್ಥಿತರಿದ್ದರು.
ವಿದುಷಿ ಉಮಾಶಂಕರಿ ಪ್ರಾರ್ಥಿಸಿದರು. ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮನೋಹರ ಭಟ್ಟ ವಂದಿಸಿದರು. ಡಾ. ರಘು ನಾಯ್ಕ ಕಾರ್ಯಕ್ರಮ ನಿರೂಪಿಸಿದರು.
ಸಭಾ ಕಾರ್ಯಕ್ರಮಕ್ಕೂ ಮೊದಲು 6ನೇ ತರಗತಿಯ ವಿದ್ಯಾರ್ಥಿನಿ ಸ್ವಸ್ತಿ ಎಂ. ಭಟ್ ನಡೆಸಿಕೊಟ್ಟ ಗೀತಗಾಯನ ಕಾರ್ಯಕ್ರಮ ಗಮನ ಸೆಳೆಯಿತು.
ಶಂಕರಿ ಆರ್. ಭಟ್ಟ ಮಾತನಾಡಿ, ಭಟ್ಟರು ಸಾಮಾನ್ಯರಲ್ಲ. 63 ವರ್ಷಗಳ ದಾಂಪತ್ಯ ಜೀವನ ನಡೆಸಿರುವ ಅವರ ಸರಳ ಸಜ್ಜನಿಕೆ ಮಾದರಿ. ರಥದ ಎರಡೂ ಗಾಲಿ ಸರಿಯಿದ್ದರೆ ಮಾತ್ರ ರಥ ಮುನ್ನಡೆಯುತ್ತದೆ ಎಂಬ ಮಾತಿನಂತೆ ಅವರ ಪತ್ನಿ ನಳಿನಿ ಅವರ ಸಾಥ್ ವಿಶೇಷವಾಗಿದೆ. ಸಾಹಿತ್ಯದಲ್ಲೂ ಅವರ ಶ್ರೇಷ್ಠತೆ ಹಾಗೂ ಅವರ ತಪಸ್ಸಿನ ಜೀವನಕ್ಕಾಗಿ ಈ ಅಕಲಂಕ ಪ್ರಶಸ್ತಿ ನೀಡಿ ಗೌರವಿಸಲಾಗುತ್ತಿದೆ ಎಂದರು.