ಜಿಲ್ಲೆ

ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿದವರು ನಾ.ಸು.ಹರ್ಡೀಕರ್

ಬೇಲೂರು: ಭಾರತ ನಿರ್ಮಾಣಕ್ಕೆ ಅಡಿಪಾಯ ಹಾಕಿದ ಮಹನೀಯರಲ್ಲಿ ನಾ.ಸು.ಹರ್ಡೀಕರ್ ಪ್ರಮುಖರು ಎಂದು ಪುರಸಭೆ ಮಾಜಿ ಅಧ್ಯಕ್ಷೆ ತೀರ್ಥಕುಮಾರಿ ಬಣ್ಣಿಸಿದರು.


ಭಾರತ ಸೇವಾದಳದ ಸಂಸ್ಥಾಪಕ ಅಧ್ಯಕ್ಷ ನಾ.ಸು.ಹರ್ಡೀಕರ್ ಜನ್ಮದಿನದ ಅಂಗವಾಗಿ ಪಟ್ಟಣದ ಹರ್ಡೀಕರ್ ಅವರ ಪ್ರತಿಮೆಗೆ ಮಂಗಳವಾರ ಪುಷ್ಪ ನಮನ ಸಲ್ಲಿಸಿ ಮಾತನಾಡಿದರು.


ಸ್ವಾತಂತ್ರೃ ಸಂಗ್ರಾಮಕ್ಕಾಗಿ ಯುವಕರನ್ನು ಶಿಸ್ತುಬದ್ಧ ಸಂಘಟನೆ ಮೂಲಕ ಸಜ್ಜುಗೊಳಿಸಲು ನಾ.ಸು.ಹರ್ಡೀಕರ್ ಅವರು ಮಹಾತ್ಮ ಗಾಂಧೀಜಿ ಅವರ ತತ್ವಗಳಡಿ ಹಿಂದುಸ್ತಾನ್ ಸೇವಾದಳವನ್ನು ಸ್ಥಾಪಿಸಿದ್ದರು. ಆದರೆ ಬೇಲೂರು ಪಟ್ಟಣದಲ್ಲಿ ನಡೆದ ಸೇವಾದಳದ ಮಹಾ ಸಮಾವೇಶದಲ್ಲಿ ಹರ್ಡೀಕರ್ ಅವರು ಹಿಂದುಸ್ತಾನ್ ಸೇವಾದಳವನ್ನು ಪಕ್ಷಾತೀತ, ಜಾತ್ಯತೀತವಾಗಿ ರೂಪಿಸಿದರು. ನಂತರದಲ್ಲಿ ಈ ಸೇವಾದಳದ ಮೂಲಕ ಮಕ್ಕಳಲ್ಲಿ ಶಿಸ್ತು, ಸಂಯಮ, ದೇಶಭಕ್ತಿ, ಸೇವಾ ಮನೋಭಾವನೆ ಮೂಡಿಸಲು ರೂಪಿಸಲು ಮುಂದಾದರು. ಆದ್ದರಿಂದ ಸ್ವಾತಂತ್ರೃ ಹೋರಾಟಗಾರ ನಾ.ಸು.ಹರ್ಡೀಕರ್ ಹಾಕಿಕೊಟ್ಟ ಹಾದಿಯಲ್ಲಿ ದೇಶದ ಪ್ರತಿಯೊಬ್ಬ ಪ್ರಜೆಯೂ ಸಾಗಿದಾಗ ಮಾತ್ರವೇ ದೇಶದ ಏಕತೆ ಕಾಪಾಡಲು ಸಾಧ್ಯ. ಈ ಹಿನ್ನೆಲೆಯಲ್ಲಿ ಪ್ರತಿಯೊಂದು ಶಾಲೆಯಲ್ಲೂ ಸೇವಾದಳ ಘಟಕ ಸ್ಥಾಪಿಸಿ ಮಕ್ಕಳಲ್ಲಿ ದೇಶಪ್ರೇಮ ತುಂಬಬೇಕೆಂದು ತಿಳಿಸಿದರು.


ತಾಲೂಕು ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಹೆಬ್ಬಾಳು ಹಾಲಪ್ಪ ಮಾತನಾಡಿ, ಸ್ವಾತಂತ್ರೃ ಸಂಗ್ರಾಮದ ಸಂದರ್ಭ ಭಾರತ ಸೇವಾದಳ ಎಂಬ ಸಂಸ್ಥೆ ಸ್ಥಾಪಿಸಿ ಯುವಕರಲ್ಲಿ ರಾಷ್ಟ್ರ ಭಕ್ತಿಯನ್ನು ಮೂಡಿಸಿದ ನಾ.ಸು.ಹರ್ಡೀಕರ್ ಅವರು ಬೇಲೂರಿನಲ್ಲಿ ಬೃಹತ್ ಸಮಾವೇಶ ಮಾಡಿದ ಕಾರಣದಿಂದಲೇ ಅವರ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ಈ ಮೂಲಕ ಭಾರತ ಸೇವಾದಳದ ಘಟಕ ಜಿಲ್ಲೆಯಲ್ಲಿ ಸೇವಾದಳದ ಮಹತ್ವ ಸಾರುತ್ತಿರುವುದು ಶ್ಲಾಘನೀಯವಾಗಿದೆ ಎಂದರು.


ಭಾರತ್ ಸೇವಾದಳದ ತಾಲೂಕು ಅಧ್ಯಕ್ಷ ಹಾಗೂ ನಿವೃತ್ತ ಶಿಕ್ಷಕ ಕೇಶವೇಗೌಡ ಮಾತನಾಡಿ, ನಾ.ಸು.ಹರ್ಡಿಕರ್ ಎಂದಿಗೂ ಒಂದು ಜಾತಿ, ಧರ್ಮಕ್ಕೆ ಸೀಮಿತವಾಗದೆ ದೇಶದಲ್ಲಿ ಭಾವೈಕ್ಯತೆ ಮತ್ತು ಸಾಮರಸ್ಯಕ್ಕೆ ಮುನ್ನುಡಿ ಬರೆದವರು. ಆದ್ದರಿಂದ ಕಳೆದ ಮೂರು ದಶಕಗಳಿಂದ ಬೇಲೂರಿನಲ್ಲಿ ಅರ್ಥಪೂರ್ಣವಾಗಿ ಕಾರ್ಯಕ್ರಮ ನಡೆಸುತಿದ್ದೇವೆ ಎಂದರು.


ಭಾರತ ಸೇವಾದಳದ ಹಾಸನ ಜಿಲ್ಲಾ ಸಂಚಾಲಕಿ ರಾಣಿ, ತಾಲೂಕು ಉಪಾಧ್ಯಕ್ಷ ಸಿ.ಎಂ.ನಿಂಗರಾಜ್, ಕಾರ್ಯದರ್ಶಿ ಯುವರಾಜ್, ಮುಖಂಡರಾದ ಗೋಪಿನಾಥ್, ಮಂಜುನಾಥ ಸೇರಿದಂತೆ ಇತರರಿದ್ದರು.