ಜಿಲ್ಲೆ

ಗ್ಯಾರಂಟಿ ಪರಿಣಾಮ ಆರು ತಿಂಗಳಲ್ಲಿ ತಿಳಿಯುತ್ತೆ: ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿಕೆ

ಕೆ.ಎನ್.ರಾಘವೇಂದ್ರ

ಮಂಡ್ಯ: ರಾಜ್ಯ ಸರ್ಕಾರ ನೀಡಿರುವ ಫ್ರೀ ಗ್ಯಾರಂಟಿ ಯೋಜನೆಯ ಪರಿಣಾಮ ಆರು ತಿಂಗಳಲ್ಲಿ ತಿಳಿಯುತ್ತದೆ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗ್ಡೆ ಹೇಳಿದರು.

ನಗರ ಗಾಂಧಿಭವನದಲ್ಲಿ ಕನ್ನಡ ಸೇನೆ ಕರ್ನಾಟಕ ವತಿಯಿಂದ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಮಹಿಳೆಯರು ಫ್ರೀ ಬಸ್‌ನಲ್ಲಿ ಹೊರಟರೇ ಗಂಡಸರು ಮತ್ತೊಂದು ಬಸ್‌ನಲ್ಲಿ ಹೊರಡಬಹುದು ಎನ್ನಿಸುತ್ತದೆ. ಅತ್ತೆ ಮತ್ತು ಸೊಸೆ ನಡುವೆ ಜಗಳ ಕೂಡ ಆಗಬಹುದು. ಆರ್ಥಿಕ ಪರಿಸ್ಥಿತಿ ಬಹಳ ಗಂಭೀರವಾಗಬಹುದು. ಈಗಾಗಲೇ ವಿದ್ಯುತ್ ಬಿಲ್ ಜಾಸ್ತಿ ಮಾಡಿದ್ದಾರೆ. ವಿದ್ಯುತ್ ಉತ್ಪಾದನೆ ಕಡಿಮೆ ಇದೆ. ಫ್ರೀ ಯೋಜನೆ, ಗ್‌ಟಿ ಕೊಡುವುದು ನನ್ನ ಪ್ರಕಾರ ಲಂಚ ಎಂದರು.

ಹೊಸ ಸರ್ಕಾರಗಳು ಬಂದಾಗ ಹಳೆ ಸರ್ಕಾರದ ಭ್ರಷ್ಟಾಚಾರ ತನಿಖೆ ಮಾಡುತ್ತೇವೆ. ಬಳಿಕ ತನಿಖೆಯು ಇಲ್ಲ, ವರದಿ ಮೇಲೆ ಕ್ರಮವು ಇಲ್ಲ ಎಂಬ ಆರೋಪಕ್ಕೆ ಪ್ರತಿಕ್ರಿಯಿಸಿ, ಇದು ಮತದಾರರನ್ನ ಮಂಕುಗೊಳಿಸುವ ಪ್ರಯತ್ನ. ಅಂತಹ ಮಾತುಗಳ ಬದಲು ಅದನ್ನ ಪೂರೈಸಬೇಕು. ಯಾರು ರಾಜ್ಯಕ್ಕೆ, ರಾಷ್ಟ್ರಕ್ಕೆ ಮೋಸ ಮಾಡಿದ್ದಾರೆ. ಅವರನ್ನ ನ್ಯಾಯಾಲಯದ ಮೆಟ್ಟಿಲನ್ನು ಏರಿಸಲೇಬೇಕು. ವಿರೋಧ ಪಕ್ಷವೆಂದು ಸುಮ್ಮನೆ ಆರೋಪ ಮಾಡುತ್ತಾರೆ ಎನ್ನುವುದು ಸರಿಯಲ್ಲ ಎಂದು ಹೇಳಿದರು.

ಪಡಿತರ ಬದಲು 5 ಕೆ.ಜಿ ಅಕ್ಕಿಗೆ ಹಣ ಕೊಡುವ ವಿಚಾರಕ್ಕೆ ಪ್ರತಿಕ್ರಿಯಿಸಿ, ನನ್ನ ಪ್ರಕಾರ ಅಕ್ಕಿ ಬದಲು ಹಣ ಕೊಡುವ ನಿರ್ಧಾರ ಸಂಪೂರ್ಣ ತಪ್ಪು. ಶ್ರಮದಿಂದ ಹಣ ಪಡೆದುಕೊಳ್ಳಬೇಕು. ದಾನದಿಂದ ಹಣ ಪಡೆಯುವುದು ಸರಿಯಲ್ಲ. ವಿದ್ಯೆ, ಆರೋಗ್ಯ ನೀಡುವುದು ಸರ್ಕಾರದ ಜವಾಬ್ದಾರಿ. ಅದನ್ನ ಸರ್ಕಾರ ನಿಭಾಯಿಸಲಿ. ಸರ್ಕಾರಿ ಶಾಲೆ, ಆಸ್ಪತ್ರೆಯ ಸೌಲಭ್ಯಗಳನ್ನ ಜಾಸ್ತಿ ಮಾಡಲಿ. ಮತದಾರಿಗೆ ಆಮಿಷವೊಡ್ಡುವುದು ಚುನಾವಣಾ ಕಾನೂನು ಪ್ರಕಾರ ತಪ್ಪು ಎಂದು ಅಭಿಪ್ರಾಯಿಸಿದರು.

ದೇಶದಲ್ಲಿ ಹಲವಾರು ಹಗರಣಗಳನ್ನು ಕಂಡಿದ್ದೇವೆ. ಬೋಫರ್ಸ್‌ ಹಗರಣದಲ್ಲಿ 64 ಕೋಟಿ ರೂ, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ 70 ಸಾವಿರ ಕೋಟಿ ರೂ, 2ಜಿ ಹಗರಣದಲ್ಲಿ 1.76 ಲಕ್ಷ ಕೋಟಿ ರೂ, ಕಲ್ಲಿದ್ದಲು ಹಗರಣದಲ್ಲಿ 1.80 ಲಕ್ಷ ಕೋಟಿ ರೂ. ಈ ರೀತಿಯಾದರೆ ದೇಶ ಯಾವ ರೀತಿ ಅಭಿವೃದ್ಧಿಯಾಗಲಿದೆ ಎಂಬುದನ್ನು ಯೋಚಿಸಬೇಕಾಗಿದೆ ಎಂದ ಅವರು, ಭ್ರಷ್ಟ ಅಧಿಕಾರಿಗಳಿಗೆ ಸರ್ಕಾರ ರಕ್ಷಣೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಸರ್ಕಾರಗಳು ಬೇಕಾದ ಅಧಿಕಾರಿಗಳನ್ನ ಇಟ್ಟುಕೊಳ್ಳುವುದು, ರಕ್ಷಣೆ ಮಾಡುವುದು ತಪ್ಪು. ಸರ್ಕಾರಗಳು ತನಿಖೆಗಳನ್ನ ಬಹಿರಂಗಪಡಿಸಬೇಕು. ಎಲ್ಲ ಸರ್ಕಾರವು ತನಿಖಾ ಸಂಸ್ಥೆಗಳನ್ನ ಕಪಿಮುಷ್ಟಿಯಲ್ಲಿ ಇಟ್ಟುಕೊಳ್ಳುವ ಕೆಲಸ ಮಾಡುತ್ತಾರೆ. ಇತ್ತೀಚೆಗೆ ಲೋಕಾಯುಕ್ತ ಸಂಸ್ಥೆ 12 ಅಧಿಕಾರಿಗಳ ಮೇಲೆ ದಾಳಿ ಮಾಡಿದೆ. ಇದು ಒಳ್ಳೆಯ ವಿಚಾರ, ಲೋಕಾಯುಕ್ತಕ್ಕೆ ಅಭಿನಂದನೆ ಸಲ್ಲಿಸುತ್ತೇನೆ. ಆದರೆ ಇದಕ್ಕಿಂತ ದೊಡ್ಡ ಅಧಿಕಾರಿಗಳ ಮೇಲು ದಾಳಿಯಾಗಬೇಕು ಎಂದು ಸಲಹೆ ನೀಡಿದರು.