ಜಿಲ್ಲೆ

ಯಕ್ಷಗಾನಕ್ಕೆ ಪೌರಾಣಿಕ ಅಂಶಗಳೇ ಜೀವಾಳ

ಶಿರಸಿ: ಇಲ್ಲಿನ ಎಂ. ರಮೇಶ ಪ್ರಶಸ್ತಿ ಸಮಿತಿಯಿಂದ ವಾರ್ಷಿಕವಾಗಿ ನೀಡುವ ಎಂ. ರಮೇಶ ಪ್ರಶಸ್ತಿಯನ್ನು ಹಿರಿಯ ಯಕ್ಷಗಾನ ಕಲಾವಿದ ತ್ರಯಂಬಕ ಹೆಗಡೆ ಇಡವಾಣಿ ಅವರಿಗೆ ಭಾನುವಾರ ಪ್ರದಾನ ಮಾಡಲಾಯಿತು.

ನಗರದ ನಯನ ಸಭಾಂಗಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ನೇತ್ರತಜ್ಞ ಡಾ.ಎಚ್.ಎಸ್. ಮೋಹನ ಹೊಸಬಾಳೆ ಅವರು ಇಡವಾಣಿ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿ, ‘ಯಕ್ಷಗಾನಕ್ಕೆ ಪೌರಾಣಿಕ ಅಂಶಗಳೇ ಜೀವಾಳ. ಹಾಗಾಗಿ ಹಳತನ್ನು ಉಳಿಸಿಕೊಂಡು ಹೊಸತನ ಮೆರೆಯುವ ಅಗತ್ಯತೆಯಿದೆ’ ಎಂದರು.

ಇಂದು ಯಕ್ಷಗಾನ ಹಲವು ಮಜಲು ದಾಟಿ ಬಂದಿದೆ. ಎಲ್ಲವನ್ನೂ ವ್ಯಾವಹಾರಿಕ ನೆಲೆಯಲ್ಲಿ ನೋಡಲಾಗುತ್ತಿದೆ. ಇದು ಪ್ರೇಕ್ಷಕರಲ್ಲಿ ಇಬ್ಬಂದಿತನಕ್ಕೆ ಕಾರಣವಾಗಿದೆ. ಈ ಹಿನ್ನೆಲೆಯಲ್ಲಿ ಯಕ್ಷಗಾನ ಸಂಘಟಕರ ಜವಾಬ್ದಾರಿ ಹೆಚ್ಚಿದೆ’ ಎಂದರು.

ಅಧ್ಯಕ್ಷತೆ ವಹಿಸಿದ್ದ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಸಂಚಾಲಕ ಶಿವಾನಂದ ಹೆಗಡೆ ಕೆರೆಮನೆ ಮಾತನಾಡಿದರು. ಸಮುದ್ಯತಾ ವೆಂಕಟರಾವ್ ಗಮಕ ವಾಚಿಸಿದರು. ಪ್ರಜ್ಞಾ ಮತ್ತಿಹಳ್ಳಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘಟಕಿ ಡಾ. ವಿಜಯನಳಿನಿ ರಮೇಶ ಸ್ವಾಗತಿಸಿದರು. ಶೈಲಜಾ ಗೋರ್ನಮನೆ ಪ್ರಶಸ್ತಿ ಪತ್ರ ವಾಚಿಸಿದರು. ವಿ.ಪಿ. ಹೆಗಡೆ ವೈಶಾಲಿ ಇತರರಿದ್ದರು.