ಹುಣಸೂರು ನಗರದ ರೋಟರಿ ಭವನದಲ್ಲಿ ಆಯೋಜಿಸಿದ್ದ ಸಭೆಯಲ್ಲಿ ಮುಖಂಡ ಲಕ್ಷ್ಮಣ್ ಮಾತನಾಡಿದರು. ಆಯೋಗದ ಸದಸ್ಯ ಸಿ.ಶಂಕರ್, ಬಸವನಗುಡಿ ನಂಜಪ್ಪ, ಸೌಮ್ಯಾ ಇತರರಿದ್ದರು.  
ಮೈಸೂರು

ಹೆಲ್ತ್ ಕಾರ್ಡ್ ಪೌರಕಾರ್ಮಿಕರ ಕುಟುಂಬದವರಿಗಿಲ್ಲ

ಮುಖಂಡ ಪೆರುಮಾಳ್ ದೂರು

ಹುಣಸೂರು: ಪೌರಕಾರ್ಮಿಕರಿಗೆ ನಗರಸಭೆ ವತಿಯಿಂದ ವಿತರಿಸಿರುವ ಹೆಲ್ತ್‌ಕಾರ್ಡ್ ಪೌರಕಾರ್ಮಿಕರಿಗಷ್ಟೇ ಸೀಮಿತವಾಗಿದ್ದು ಅವರ ಕುಟುಂಬದ ಸಹಾಯಕ್ಕೆ ಬಾರದಾಗಿದೆ ಎಂದು ಪೌರಕಾರ್ಮಿಕರ ಮುಖಂಡ ಪೆರುಮಾಳ್ ದೂರಿದರು.

ನಗರದ ರೋಟರಿ ಭವನದಲ್ಲಿ ಗುರುವಾರ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಸಿ.ಶಂಕರ್ ಅಧ್ಯಕ್ಷತೆಯಲ್ಲಿ ಆಯೋಜನೆಗೊಂಡಿದ್ದ ಪೌರಕಾರ್ಮಿಕರದೊಂದಿಗಿನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದರು.

ಪೌರಕಾರ್ಮಿಕರ ಬಗ್ಗೆ ಕಾಳಜಿ ತೋರಿಸುವ ಸರ್ಕಾರ ಈ ಸಮುದಾಯಕ್ಕೆ ಆರೋಗ್ಯ ರಕ್ಷಾಕವಚ ಇಲ್ಲದೆ ಕುಟುಂಬದವರ ಆರೋಗ್ಯ ರಕ್ಷಣೆ ಸವಾಲಾಗಿ ಕಾಡಿದೆ. ನಗರಸಭೆ ನೀಡಿರುವ ಹೆಲ್ತ್ ಕಾರ್ಡ್ ನಮ್ಮ ಕುಟುಂಬದ ಸದಸ್ಯರಿಗೆ ಆರೋಗ್ಯ ಏರುಪೇರಾದಲ್ಲಿ ಉಪಯೋಗಕ್ಕೆ ಬಾರದಾಗಿದೆ. ಆರ್ಥಿಕವಾಗಿ ಸಶಕ್ತರಲ್ಲದ ಈ ಸಮುದಾಯಕ್ಕೆ ಸರ್ಕಾರದ ಆಯುಷ್ಮಾನ್ ಕಾರ್ಡ್ ಸಹಾಯ ಇಲ್ಲವಾಗಿದೆ. ಈ ಸಮಸ್ಯೆ ಬಗೆಹರಿಸುವ ಬಗ್ಗೆ ಆಯೋಗ ಸರ್ಕಾರದ ಮಟ್ಟದಲ್ಲಿ ಕಾರ್ಯ ನಿರ್ವಹಿಸಬೇಕೆಂದು ಕೋರಿದರು.

ನಿವೇಶನ ಏಕಿಲ್ಲ?: ನಗರದ ಪೌರಕಾರ್ಮಿಕರಿಗೆ ಇನ್ನೂ ನಿವೇಶನ ಮತ್ತು ವಸತಿ ಸೌಲಭ್ಯ ಕಲ್ಪಿಸಿಲ್ಲವೆಂದು ಪೌರಕಾರ್ಮಿಕರು ದೂರಿದಾಗ, ಮಧ್ಯೆ ಪ್ರವೇಶಿಸಿದ ಆಯೋಗದ ಸದಸ್ಯ ಸಿ.ಶಂಕರ್, ಸಫಾಯಿ ಕರ್ಮಚಾರಿಗಳಿಗೆ ಸೂರು ಕಲ್ಪಿಸುವ ಸಂಬಂಧ ನಗರ, ಪಟ್ಟಣ ಪ್ರದೇಶದಲ್ಲಿ 5 ಎಕರೆ ಕಾದಿಡಬೇಕು, ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಅಗತ್ಯಕ್ಕೆ ತಕ್ಕಂತೆ ನಿವೇಶನ ಕಾದಿಡಬೇಕು ಎಂಬ ನಿರ್ದೇಶನವಿದ್ದು ಹುಣಸೂರು ನಗರಸಭೆ ಈ ಹಿಂದೆ ಕಾದಿಟ್ಟ ನಿವೇಶನ ಏಕೆ ವಿತರಣೆ ಮಾಡಿಲ್ಲವೆಂದು ಪ್ರಭಾರ ಆಯುಕ್ತೆ ಸೌಮ್ಯಾರನ್ನು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಅವರು, ನಗರಸಭೆ ಕಾಯಂ ಸದಸ್ಯರಿಗೆ 2 ಎಕರೆ ನಿವೇಶನ ಕಾಯ್ದಿರಿಸಿದ್ದು ನವೆಂಬರ್ ಅಂತ್ಯದಲ್ಲಿ ನಿವೇಶನ ವಿತರಣೆಗೆ ಕ್ರಮವಹಿಸುವುದಾಗಿ ಶಾಸಕರು ಭರವಸೆ ನೀಡಿದ್ದಾರೆ ಎಂದರು.

ನಗರಸಭೆಯಲ್ಲಿ ನೇರ ಪಾವತಿ ಸಿಬ್ಬಂದಿಗಷ್ಟೇ ಕೆಲವು ಸವಲತ್ತುಗಳು ಸೀಮಿತವಾಗಿದ್ದು ನಗರಸಭೆ ಇತರ ವರ್ಗದ ಸಿಬ್ಬಂದಿಗೆ ಯಾವುದೇ ಸೌಲಭ್ಯ ಇಲ್ಲವಾಗಿದೆ. ಅರ್ಜಿ ಹಾಕಲು ಅವಕಾಶವಿಲ್ಲ ಎಂದು ಸ್ಥಳಿಯ ಅಧಿಕಾರಿಗಳು ಅರ್ಜಿ ತಿರಸ್ಕರಿಸುತ್ತಿದ್ದಾರೆ. ಮ್ಯಾನ್ಯುವೆಲ್ ಸ್ಕಾೃವೆಂಜರ್ ಸಿಬ್ಬಂದಿ ಕುಟುಂಬದವರಿಗೆ ಉದ್ಯೋಗ ನೀಡಬೇಕು ಎಂದು ಸರ್ಕಾರದ ಆದೇಶವಿದ್ದರೂ ಉದ್ಯೋಗ ನೀಡಿಲ್ಲ ಎಂದು ಪೌರಕಾರ್ಮಿಕ ಮಾದ ದೂರಿದರು.

ಪ್ರಭಾರ ಆಯುಕ್ತೆ ಸೌಮ್ಯಾ ಉತ್ತರಿಸಿ ಗುತ್ತಿಗೆ ಆಧಾರದಲ್ಲಿ ಕೆಲಸ ನಿರ್ವಹಿಸುತ್ತಿರುವ ವ್ಯಕ್ತಿ 1 ವರ್ಷ ಸೇವೆ ಸಲ್ಲಿಸಿದಲ್ಲಿ ನೇರ ನೇಮಕಾತಿಗೆ ಅರ್ಜಿ ಹಾಕಲು ಅವಕಾಶವಿದೆ, ಅದೇ ರೀತಿ ನೇರ ಪಾವತಿಯಲ್ಲಿರುವ ಸಿಬ್ಬಂದಿ ಕಾಯಂ ಹುದ್ದೆಗೆ ಅರ್ಜಿ ಹಾಕಲು ಕನಿಷ್ಠ 2 ವರ್ಷ ಸೇವೆ ಸಲ್ಲಿಸಿರಬೇಕು. ಈ ರೀತಿಯ ಹಲವರು ಅರ್ಜಿ ಸಲ್ಲಿಸಿದ್ದು ಪರಿಶೀಲನೆ ಹಂತದಲ್ಲಿದೆ ಎಂದು ತಿಳಿಸಿದರು.

ಸಭೆಯಲ್ಲಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಭರತ್‌ಕುಮಾರ್, ನಗರಸಭೆ ಕಂದಾಯ ಇಲಾಖೆ ಸಿದ್ದರಾಜು, ಚಂದ್ರು, ಬಸವನಗುಡಿ ನಂಜಪ್ಪ ಇತರ ಅಧಿಕಾರಿಗಳು ಮತ್ತು ಪೌರಕಾರ್ಮಿಕರು ಹಾಜರಿದ್ದರು.