ಸರಗೂರು: ತಾಲೂಕಿನ ಹೆಗ್ಗನೂರು ಗ್ರಾಮದ ಜಮೀನಿನಲ್ಲಿ ಮೇಯಿಸಲು ಕಟ್ಟಿ ಹಾಕಿದ್ದ ಹಸುವಿನ ಮೇಲೆ ಹುಲಿ ದಾಳಿ ನಡೆಸಿದ್ದು, ನಾಗರಾಜೇಗೌಡ ಎಂಬ ರೈತರಿಗೆ ಸೇರಿದ ಹಸು ಬಲಿಯಾಗಿದೆ. ಹುಲಿ ದಾಳಿಯಿಂದ ಗ್ರಾಮಸ್ಥರು ಹಾಗೂ ಸುತ್ತಮುತ್ತಲಿನ ರೈತರಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.
ಮಂಗಳವಾರ ರಾತ್ರಿ ಕಾಡಿನಿಂದ ಗ್ರಾಮ ವ್ಯಾಪ್ತಿಗೆ ಬಂದ ಹುಲಿ, ಜಮೀನಿನಲ್ಲಿ ಕಟ್ಟಿ ಹಾಕಿದ್ದ ಹಸುವಿನ ಮೇಲೆ ಏಕಾಏಕಿ ದಾಳಿ ನಡೆಸಿದೆ. ಹುಲಿ ದಾಳಿಯಿಂದ ಹಸು ಸ್ಥಳದಲ್ಲೇ ಮೃತಪಟ್ಟಿದ್ದು, ರೈತರಿಗೆ ಆರ್ಥಿಕ ನಷ್ಟ ಉಂಟಾಗಿದೆ.
ಹುಲಿ ದಾಳಿ ಹಾಗೂ ಜಾನುವಾರು ಬಲಿಯಾಗಿರುವ ವಿಷಯವನ್ನು ಸರಗೂರು ಹಾಗೂ ಎನ್. ಬೇಗೂರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೂ ತಂದಿದ್ದರೂ, ಹುಲಿಯ ಹಾವಳಿಗೆ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ರೈತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಹುಲಿ ಸಂಚಾರದ ಬಗ್ಗೆ ಪರಿಶೀಲನೆ ನಡೆಸಬೇಕು. ಹುಲಿಯ ಚಲನವಲನ ಪತ್ತೆ ಹಚ್ಚಲು ಸಿಸಿಟಿವಿ ಕ್ಯಾಮರಾ ಅಳವಡಿಸುವುದು, ಅಗತ್ಯವಿದ್ದಲ್ಲಿ ಬೋನು ಇರಿಸುವುದು ಸೇರಿದಂತೆ ಸೂಕ್ತ ಕ್ರಮ ಕೈಗೊಂಡು, ಹುಲಿಯನ್ನು ಸೆರೆಹಿಡಿಯಲು ಮುಂದಾಗಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಹುಲಿ ದಾಳಿಯಿಂದ ಮೃತಪಟ್ಟ ಹಸುವಿಗೆ ಸರ್ಕಾರದ ನಿಯಮಾನುಸಾರ ಸೂಕ್ತ ಪರಿಹಾರವನ್ನು ನೀಡಬೇಕು. ಮುಂದಿನ ದಿನಗಳಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಅರಣ್ಯ ಇಲಾಖೆ ಮತ್ತು ಸಂಬಂಧಪಟ್ಟ ಅಧಿಕಾರಿಗಳು ರೈತರ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಸರಗೂರು ತಾಲೂಕಿನ ಹೆಗ್ಗನೂರು ಗ್ರಾಮದಲ್ಲಿ ನಾಗರಾಜೇಗೌಡ ಎಂಬವರ ಜಮೀನಿನಲ್ಲಿ ಮೇಯಿಸುತ್ತಿದ್ದ ವೇಳೆಯಲ್ಲಿ ಹುಲಿ ಏಕಾಏಕಿ ದಾಳಿ ನಡೆಸಿ ಹಸು ಬಲಿಯಾಗಿದೆ.