ಮೈಸೂರು: ಖಾತಾ ತಿದ್ದುಪಡಿಗಾಗಿ ಒಂದು ವರ್ಷ ಅಲೆದಾಡಿದವರಿಗೆ ಇ-ಖಾತಾ ಕೇವಲ 10 ನಿಮಿಷದಲ್ಲೇ ದೊರೆಯಿತು...!
ಮೈಸೂರು ಮಹಾನಗರ ಪಾಲಿಕೆ ಆಡಳಿತಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ಅಧ್ಯಕ್ಷತೆಯಲ್ಲಿ ಎಂಸಿಸಿ ಕಚೇರಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸಾರ್ವಜನಿಕ ಕುಂದುಕೊರತೆ ನಿವಾರಣಾ ಸಭೆ ಇಂತಹವೊಂದು ಕ್ಷಣಕ್ಕೆ ಸಾಕ್ಷಿಯಾಯಿತು.
ಇಷ್ಟು ದಿನ ಅಲೆಸಿದ ಅಧಿಕಾರಿಗಳೇ ಕೆಲ ನಿಮಿಷದಲ್ಲಿ ಕೆಲಸ ಮಾಡಿಕೊಟ್ಟರಷ್ಟೇ ಅಲ್ಲದೆ, ಅರ್ಜಿದಾರರನ್ನು ಹುಡುಕಿಕೊಂಡು ಬಂದು ಭೂದಾಖಲೆ ಕೊಟ್ಟರು.
ಮಮತಾ ಬಿ.ರಮೇಶ್ ಹೆಸರಿನಲ್ಲಿದ್ದ ಖಾತೆಯ ತಿದ್ದುಪಡಿಗಾಗಿ ಒಂದು ವರ್ಷದ ಹಿಂದೆ ಅರ್ಜಿ ಕೊಟ್ಟಿದ್ದರು. ಆದರೆ, ಕೆಲಸ ಆಗಿರಲಿಲ್ಲ. ಈ ಸಭೆಯಲ್ಲೂ ಅರ್ಜಿದಾರರ ಎದುರೇ ‘ಕಂದಾಯ ಪಾವತಿ ಮಾಡಿಲ್ಲ’ ಎಂದು ಹಾರಿಕೆ ಉತ್ತರ ಕೊಟ್ಟರು. ಇದಕ್ಕೆ ಸಮಾಧಾನವಾಗದ ನಿತೇಶ್ ಪಾಟೀಲ್, ಆನ್‌ಲೈನ್‌ನಲ್ಲೇ ಪರಿಶೀಲನೆ ಮಾಡಿ ಎಂದು ಸೂಚಿಸಿದರು.
ಬೃಹತ್ ಪರದೆಯಲ್ಲಿ ಅರ್ಜಿದಾರರು ಪ್ರತಿವರ್ಷ ಕಂದಾಯ ಪಾವತಿಸಿರುವುದು ಗೋಚರವಾಯಿತು. ಆಗ ಪೇಚಿಗೆ ಸಿಲುಕಿದ ಅಧಿಕಾರಿ ಇಂಗು ತಿಂದ ಮಂಗನಂತಾದರು. ಬಳಿಕ 10 ನಿಮಿಷದಲ್ಲೇ ಅರ್ಜಿದಾರರಿಗೆ ಇ-ಖಾತಾ ಕೊಟ್ಟರು. ಇದರಿಂದ ಸಂತಸಗೊಂಡ ಅರ್ಜಿದಾರರು, ಏನೋ ಸಾಧಿಸಿದಂತೆ ಹರ್ಷಗೊಂಡರು. ಇದೇ ರೀತಿ ಶಿಕ್ಷಕರ ಬಡಾವಣೆಯ ಸಿ.ಕಾಮೇಗೌಡರಿಗೂ ಅನುಭವವಾಯಿತು.
ಇ-ಖಾತಾ, ಯುಎಲ್‌ಎಂಎಸ್ ಪೋರ್ಟಲ್‌ನಲ್ಲಿ ಕಟ್ಟಡ ನಕ್ಷೆ, ಕಟ್ಟಡ ಪೂರ್ಣಗೊಂಡ ವರದಿ(ಸಿಆರ್) ಪಡೆಯಲು ಈಗಾಗಲೇ ಪಾಲಿಕೆಯ ಕೇಂದ್ರ ಕಚೇರಿ, ಎಲ್ಲ 9 ವಲಯ ಕಚೇರಿಗಳಿಗೆ ಅರ್ಜಿ ಸಲ್ಲಿಸಿ ವಿಳಂಬ ಆಗಿರುವ ಪ್ರಕರಣಗಳನ್ನು ಮಾತ್ರ ಈ ಸಭೆಯಲ್ಲಿ ಪರಿಶೀಲಿಸಲಾಯಿತು. ಸಾರ್ವಜನಿಕರು ಈಗಾಗಲೇ ಅಗತ್ಯ ಪೂರಕ ದಾಖಲೆಗಳೊಂದಿಗೆ ಸಲ್ಲಿಸಲಾಗಿರುವ ಅರ್ಜಿಗಳನ್ನೂ ಪರಿಶೀಲಿಸಲಾಯಿತು. ಆದರೆ, ಸಭೆಯಲ್ಲಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಇರಲಿಲ್ಲ.
ಈ ಸಭೆಯ ಪ್ರಯೋಜನ ಪಡೆದುಕೊಳ್ಳಲು ಸಾರ್ವಜನಿಕರು ಮುಂದೆ ಬರಲಿಲ್ಲ. ಆನ್‌ಲೈನ್‌ನಲ್ಲಿ ಈವರೆಗೆ 1,393 ಅರ್ಜಿಗಳು ಸಲ್ಲಿಕೆಯಾಗಿವೆ. ಆದರೆ, ಸಭೆಗೆ ಬಂದವರು ಬೆರಳಣಿಕೆಯಷ್ಟು ಮಾತ್ರ. ಪಾಲಿಕೆಯ ಆಡಳಿತಾಧಿಕಾರಿ, ಆಯುಕ್ತರು, ವಲಯ ಉಪ ಆಯುಕ್ತರು, ಪಾಲಿಕೆ ಮುಖ್ಯ ಕಚೇರಿ ಸಿಬ್ಬಂದಿ, 9 ವಲಯ ಕಚೇರಿ ಪ್ರಮುಖ ಅಧಿಕಾರಿಗಳೆಲ್ಲ ಸಭೆಯಲ್ಲೇ ಇದ್ದು, ಅರ್ಜಿ ವಿಲೇವಾರಿ ಮಾಡಿಕೊಟ್ಟರು. ಆದರೆ, ಅರ್ಜಿ ಸ್ವೀಕೃತವಾಗಿದ್ದು ಬರೀ 28 ಅಷ್ಟೇ. ಸಿಆರ್-4, ಇ-ಖಾತೆ- 12, ಯುಎಲ್‌ಎಂಎಸ್-7, ಇತ್ಯಾದಿ-5 ಸೇರಿದಂತೆ 28 ಅರ್ಜಿಗಳು ಬಂದಿದ್ದವು. ಸ್ಥಳದಲ್ಲೇ ಇ-ಖಾತೆಗೆ ಸಂಬಂಧಿಸಿದ 3 ಅರ್ಜಿಗಳನ್ನು ವಿಲೇವಾರಿ ಮಾಡಲಾಯಿತು. ಪಾಲಿಕೆ ಆಯುಕ್ತೆ ಎಂ.ಕೆ.ಸವಿತಾ ಸೇರಿದಂತೆ ಇನ್ನಿತರರ ಅಧಿಕಾರಿಗಳಿದ್ದರು.
ಪಾಲಿಕೆಯಿಂದ 24 ಗಂಟೆಯಲ್ಲಿ ಇ-ಖಾತಾ ಮಾಡಿಕೊಡಲಾಗುವುದು ಎಂದು ಪಾಲಿಕೆ ಆಡಳಿತಾಧಿಕಾರಿಯೂ ಆಗಿರುವ ಪ್ರಾದೇಶಿಕ ಆಯುಕ್ತ ನಿತೇಶ್ ಪಾಟೀಲ್ ತಿಳಿಸಿದರು.
ಒಂದು ದಿನದಲ್ಲೇ ಖಾತೆ ಮಾಡಿಕೊಡಬಹುದು. ಆದರೆ, ಗರಿಷ್ಠ 7 ದಿನಕ್ಕಿಂತ ಹೆಚ್ಚಿನ ಕಾಲಾವಧಿ ತೆಗೆದುಕೊಳ್ಳುವಂತಿಲ್ಲ. ಕಟ್ಟಡ ನಕ್ಷೆ, ಸಿಆರ್ ಪ್ರಮಾಣಪತ್ರವನ್ನು 30 ದಿನದೊಳಗೆ ನೀಡಲಾಗುವುದು. ಈ ಅವಧಿ ಒಳಗೆ ಅಧಿಕಾರಿಗಳು ಕೆಲಸ ಮಾಡಿಕೊಡದಿದ್ದರೆ ಪಾಲಿಕೆ ಆಯುಕ್ತರು, ವಲಯ ಕಚೇರಿ ಉಪ ಆಯುಕ್ತರನ್ನು ಭೇಟಿ ಮಾಡಿ ಆಕ್ಷೇಪಣೆ ಸಲ್ಲಿಸಬೇಕು ಎಂದು ತಿಳಿಸಿದರು.
ಕಟ್ಟಡ ನಕ್ಷೆಯಲ್ಲಿ ಗರಿಷ್ಠ ಶೇ.15 ವ್ಯತ್ಯಾಸ ಅಥವಾ ಉಲ್ಲಂಘನೆ ಮಾಡಿದವರಿಗೂ ಕಟ್ಟಡ ಪೂರ್ಣಗೊಂಡ ವರದಿ(ಸಿಆರ್) ಕೊಡಲಾಗುವುದು. ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳಬೇಕು ಎಂದು ತಿಳಿಸಿದರು
ಈ ಹಿಂದೆ ಶೇ.7-8ರಷ್ಟು ಉಲ್ಲಂಘನೆಯವರಿಗೆ ಮಾತ್ರ ಸಿಆರ್ ಕೊಡಲಾಗುತ್ತಿತ್ತು. ಇದೀಗ ಈ ಪ್ರಮಾಣವನ್ನು ಶೇ.15ಕ್ಕೆ ಹೆಚ್ಚಿಸಲಾಗಿದೆ. ಇದು ಬಹಳಷ್ಟು ಜನರಿಗೆ ತಿಳಿದಿಲ್ಲ. ನೈಜ ನಕ್ಷೆ, ಅನುಮೋದಿತ ನಕ್ಷೆಯನ್ನು ಸಲ್ಲಿಸಿ 30 ದಿನಗಳಲ್ಲೇ ಸಿಆರ್ ಪಡೆದುಕೊಳ್ಳಬಹುದು ಎಂದು ಹೇಳಿದರು.
ಇನ್ನು ಮುಂದೆ ಪ್ರತಿ ತಿಂಗಳು ಕುಂದುಕೊರತೆ ಸಭೆ ನಡೆಸಲಾಗುವುದು. ಇದಕ್ಕೆ ಅಧಿಕಾರಿಗಳೂ ಸೂಕ್ತವಾಗಿ ಸ್ಪಂದಿಸಬೇಕು ಎಂದು ಹೇಳಿದರು.