ಹನಗೋಡು: ಗ್ರಾಮಗಳಲ್ಲಿ ಸ್ವಚ್ಛತೆ ಹಾಗೂ ನೈರ್ಮಲ್ಯ ಕಾಪಾಡಿಕೊಳ್ಳುವುದರಿಂದ ಸಾಂಕ್ರಾಮಿಕ ರೋಗಗಳ ಹರಡುವಿಕೆಯನ್ನು ಪರಿಣಾಮಕಾರಿಯಾಗಿ ತಡೆಗಟ್ಟಬಹುದು ಎಂದು ನೇರಳಕುಪ್ಪೆ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಸುನಂದಾ ತಿಳಿಸಿದರು.
ಹನಗೋಡು ಹೋಬಳಿಯ ನೇರಳಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಚುವಿನಹಳ್ಳಿ ಗ್ರಾಮದ ಆಯುಷ್ಮಾನ್ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಿದದ ಜನ ಆರೋಗ್ಯ ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ನೀರು ನಿಲ್ಲುವ ಸ್ಥಳಗಳು, ಚರಂಡಿಗಳು ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಸ ಸಂಗ್ರಹವಾಗದಂತೆ ಗ್ರಾಮಸ್ಥರು ಮುನ್ನೆಚ್ಚರಿಕೆ ವಹಿಸಬೇಕು. ತಮ್ಮ ತಮ್ಮ ಬೀದಿ, ಮನೆ ಸುತ್ತಮುತ್ತ ಹಾಗೂ ಚರಂಡಿಗಳನ್ನು ಸ್ವಚ್ಛವಾಗಿಟ್ಟುಕೊಂಡು ಸೊಳ್ಳೆ ಹಾಗೂ ಇತರ ರೋಗವಾಹಕ ಕೀಟಗಳ ಉತ್ಪತ್ತಿಗೆ ಅವಕಾಶ ನೀಡಬಾರದು ಎಂದು ಸಲಹೆ ನೀಡಿದರು.
ಗ್ರಾಮ್ ಸಂಸ್ಥೆ ಮೈಸೂರು ವತಿಯಿಂದ ನಡೆಯುತ್ತಿರುವ ಸ್ವಾಸ್ಥ್ಯ ಸ್ವರಾಜ್ ಯೋಜನೆಯ ಸಮುದಾಯ ಸುಗಮಕಾರ ಎಂ.ಎಂ. ಮಹದೇವ ಮಾತನಾಡಿ, ಜನ ಆರೋಗ್ಯ ಸಮಿತಿಯ ಉದ್ದೇಶ, ಜವಾಬ್ದಾರಿಗಳು ಹಾಗೂ ಆರೋಗ್ಯ ಕೇಂದ್ರದಲ್ಲಿ ಸಾರ್ವಜನಿಕರಿಗೆ ದೊರೆಯಬೇಕಾದ ಸೇವೆಗಳ ಕುರಿತು ಮಾಹಿತಿ ನೀಡಿದರು.
ಸಭೆಯಲ್ಲಿ ಜನ ಆರೋಗ್ಯ ಸಮಿತಿಯ ಉಪಾಧ್ಯಕ್ಷರು, ಸದಸ್ಯರು, ಆರೋಗ್ಯ ಇಲಾಖೆಯ ಸಿಬ್ಬಂದಿ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ಆಶಾ ಕಾರ್ಯಕರ್ತೆಯರ ಕೊರತೆ: ನೇರಳಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೂರು, ನೆಗತ್ತೂರು, ಕಚುವಿನಹಳ್ಳಿ ಹಾಗೂ ಬಿಲ್ಲೇನಹೊಸಹಳ್ಳಿ ಗ್ರಾಮಗಳಲ್ಲಿ ಆಶಾ ಕಾರ್ಯಕರ್ತೆಯರ ಕೊರತೆ ಇರುವುದನ್ನು ಸಭೆಯಲ್ಲಿ ಸದಸ್ಯರು ಪ್ರಸ್ತಾಪಿಸಿದರು. ಆಶಾ ಕಾರ್ಯಕರ್ತೆಯರ ಕೊರತೆಯಿಂದ ಆರೋಗ್ಯ ಇಲಾಖೆಯ ಮಾಹಿತಿ ಹಾಗೂ ಸೆವೆಗಳನ್ನು ಪ್ರತಿಯೊಂದು ಕುಟುಂಬಕ್ಕೂ ತಲುಪಿಸುವಲ್ಲಿ ತೊಂದರೆಯಾಗುತ್ತಿದೆ. ಆದ್ದರಿಂದ ಅಗತ್ಯ ಸಂಖ್ಯೆಯಲ್ಲಿ ಆಶಾ ಕಾರ್ಯಕರ್ತೆಯರನ್ನು ನೇಮಿಸಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು.
ಅಲ್ಲದೆ, ಗ್ರಾಮೀಣ ಹಾಗೂ ಹಾಡಿ ಪ್ರದೇಶಗಳಲ್ಲಿ ತುರ್ತು ಆರೋಗ್ಯ ಪರಿಸ್ಥಿತಿ ಎದುರಾದಾಗ 108 ಆಂಬುಲೆನ್ಸ್ ಸೇವೆ ತ್ವರಿತವಾಗಿ ದೊರೆಯುವಂತಾಗಬೇಕು. ಉಪಕೇಂದ್ರಗಳಲ್ಲಿ ಲಭ್ಯವಾಗಬೇಕಾದ ಅಗತ್ಯ ಆರೋಗ್ಯ ಸೇವೆಗಳು ಸಾರ್ವಜನಿಕರಿಗೆ ಸಮರ್ಪಕವಾಗಿ ದೊರೆಯುತ್ತಿವೆಯೇ ಎಂಬುದನ್ನು ಪರಿಶೀಲಿಸಿ, ಕೊರತೆಗಳಿದ್ದಲ್ಲಿ ತಕ್ಷಣ ಸರಿಪಡಿಸಲು ಆರೋಗ್ಯ ಇಲಾಖೆ ಕ್ರಮ ಕೈಗೊಳ್ಳಬೇಕು ಎಂದು ಜನ ಆರೋಗ್ಯ ಸಮಿತಿ ಸದಸ್ಯರು ಮನವಿ ಮಾಡಿದರು.
ಆರೋಗ್ಯ ಕೇಂದ್ರದಲ್ಲಿ ಅಗತ್ಯ ಔಷಧ, ಸಿಬ್ಬಂದಿ ಹಾಗೂ ಮೂಲಸೌಕರ್ಯಗಳ ಲಭ್ಯತೆ, ಗರ್ಭಿಣಿಯರು ಮತ್ತು ಮಕ್ಕಳಿಗೆ ನೀಡಲಾಗುತ್ತಿರುವ ಸೇವೆಗಳು, ಸಾಂಕ್ರಾಮಿಕ ರೋಗಗಳ ನಿಯಂತ್ರಣ ಹಾಗೂ ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡುವ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು.