ತಿ.ನರಸೀಪುರ ತಾಲೂಕಿನ ಕಲಿಯೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ತಹಸೀಲ್ದಾರ್ ಟಿ.ಜಿ. ಸುರೇಶಾಚಾರ್ ಮಾತನಾಡಿದರು. ಪಿ.ಶೈಲಜಾ, ರೂಪಾ, ಕೆ.ವಿ.ವೀರೇಶ್ ಇತರರು ಇದ್ದರು.  
ಮೈಸೂರು

ಸೌಲಭ್ಯಗಳು ಜನರಿಗೆ ತಲುಪಲು ಪ್ರಜಾಸೇವೆ ಆಂದೋಲನ ಸಹಕಾರಿ

ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಅಭಿಮತ

ತಿ.ನರಸೀಪುರ: ಸಾರ್ವಜನಿಕರ ಸಮಸ್ಯೆಗಳನ್ನು ಪರಿಹರಿಸಲು, ಸರ್ಕಾರದ ಸೌಲಭ್ಯಗಳನ್ನು ಜನಸಾಮಾನ್ಯರಿಗೆ ತಲುಪಿಸಲು ಪ್ರಜಾಸೇವಾ ಆಂದೋಲನ ಸಹಕಾರಿಯಾಗಿದೆ ಎಂದು ತಹಸೀಲ್ದಾರ್ ಟಿ.ಜಿ.ಸುರೇಶಾಚಾರ್ ಹೇಳಿದರು.

ತಾಲೂಕಿನ ಕಲಿಯೂರು ಗ್ರಾಮ ಪಂಚಾಯಿತಿ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಪ್ರಜಾಸೇವಾ ಆಂದೋಲನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಾರ್ವಜನಿಕರು ತಮ್ಮ ಸಮಸ್ಯೆಗಳನ್ನು ಲಿಖಿತ ರೂಪದಲ್ಲಿ ಅರ್ಜಿಗಳ ಮೂಲಕ ಸಲ್ಲಿಸಿದರೆ, ತಾಲೂಕು ಮಟ್ಟದಲ್ಲಿ ಪರಿಹರಿಸಲು ಸಾಧ್ಯವಿರುವ ಸಮಸ್ಯೆಗಳನ್ನು ಸ್ಥಳದಲ್ಲಿಯೇ ಬಗೆಹರಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ತಾಲೂಕುಮಟ್ಟದಲ್ಲಿ ಪರಿಹರಿಸಲು ಸಾಧ್ಯವಾಗದ ಸಮಸ್ಯೆಗಳನ್ನು ಸಂಬಂಧಪಟ್ಟ ಮೇಲಧಿಕಾರಿಗಳಿಗೆ ಹಾಗೂ ಇಲಾಖೆಯ ಅಧಿಕಾರಿಗಳಿಗೆ ಕಳುಹಿಸಿ, ಸೂಕ್ತ ಪರಿಹಾರ ದೊರಕಿಸಲು ಕ್ರಮ ವಹಿಸಲಾಗುವುದು ಎಂದರು.

ಕಾರ್ಯಕ್ರಮದಲ್ಲಿ ಇದುವರೆಗೆ ಒಟ್ಟು 15 ಅರ್ಜಿಗಳು ಸ್ವೀಕೃತವಾಗಿದ್ದು, ಸಾರ್ವಜನಿಕರಿಂದ ಇನ್ನೂ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ಪ್ರತಿಯೊಂದು ಅರ್ಜಿಯನ್ನೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿ, ಸಮಸ್ಯೆಯ ಸ್ವರೂಪಕ್ಕೆ ಅನುಗುಣವಾಗಿ ಪರಿಹಾರ ಒದಗಿಸಲು ಕ್ರಮ ಕೈಗೊಳ್ಳಲಿದ್ದಾರೆ. ಸಾರ್ವಜನಿಕರು ತಮ್ಮ ಕುಂದು-ಕೊರತೆಗಳನ್ನು ಮುಕ್ತವಾಗಿ ಅಧಿಕಾರಿಗಳ ಗಮನಕ್ಕೆ ತಂದು, ಈ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಬೇಕು ಎಂದು ತಿಳಿಸಿದರು.

ಸಭೆಯಲ್ಲಿ ಪಿಂಚಣಿ ಸೌಲಭ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳ ಬಗ್ಗೆಯೂ ಚರ್ಚೆ ನಡೆಸಲಾಯಿತು. ಪಿಂಚಣಿ ಪಡೆಯಲು ಅಗತ್ಯವಿರುವ ವಯೋಮಿತಿ ದೃಢೀಕರಣ ಪತ್ರದ ಕುರಿತು ಸಾರ್ವಜನಿಕರಿಂದ ಬಂದ ವಿಚಾರಗಳನ್ನು ಪರಿಗಣಿಸಿ, ವೈದ್ಯಾಧಿಕಾರಿಗಳನ್ನು ಕರೆಸಿ ಅಗತ್ಯ ವಯಸ್ಸಿನ ದೃಢೀಕರಣ ಪ್ರಮಾಣಪತ್ರ ನೀಡಲು ಸೂಚಿಸಲಾಗಿದೆ. ಇದರಿಂದ ಪಿಂಚಣಿ ಸೌಲಭ್ಯ ಪಡೆಯಲು ಅರ್ಹರಾಗಿರುವ ಫಲಾನುಭವಿಗಳಿಗೆ ಅನುಕೂಲವಾಗಲಿದೆ. ಸರ್ಕಾರದ ಜನಪರ ಯೋಜನೆಗಳು ಮತ್ತು ಇಲಾಖಾವಾರು ಸೌಲಭ್ಯಗಳು ಅರ್ಹ ಫಲಾನುಭವಿಗಳಿಗೆ ತಲುಪುವಂತೆ ಮಾಡುವುದು, ಸಾರ್ವಜನಿಕರ ಅಹವಾಲುಗಳಿಗೆ ಸ್ಪಂದಿಸುವುದು ಹಾಗೂ ಆಡಳಿತ ವ್ಯವಸ್ಥೆಯನ್ನು ಜನರ ಮನೆ ಬಾಗಿಲಿಗೆ ತಲುಪಿಸುವ ನಿಟ್ಟಿನಲ್ಲಿ ಪ್ರಜಾಸೇವಾ ಆಂದೋಲನ ಮಹತ್ವದ ವೇದಿಕೆಯಾಗಿದೆ ಎಂದು ಟಿ.ಜಿ.ಸುರೇಶಾಚಾರ್ ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಎಂ.ರಾಜಣ್ಣ, ಸೆಸ್ಕ್ ಎಇಇ ಕೆ.ವಿ.ವೀರೇಶ್, ಸಿಡಿಪಿಒ ಗೋವಿಂದರಾಜು, ಲೋಕೋಪಯೋಗಿ ಎಇಇ ಸತೀಶ್ ಚಂದ್ರನ್, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಸಿ.ಶಿವಮೂರ್ತಿ, ಬಿಆರ್‌ಸಿ ನಾಗೇಶ್ ಗಂಗವಾಡಿ, ಮೀನುಗಾರಿಕೆ ಅಧಿಕಾರಿ ಶ್ವೇತಾ, ಕೃಷಿ ಅಧಿಕಾರಿ ರೂಪಾ, ಅಬಕಾರಿ ಇಲಾಖೆಯ ಎಸ್‌ಐ ನಾಗರಾಜು, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಪಿ.ಶೈಲಜಾ, ಎಡಿಎಂ ಮಂಜುಳಾ, ಆರ್‌ಐ ನಾಗೇಂದ್ರ, ಕೃಷಿ ಇಲಾಖೆಯ ಕಾವ್ಯಾ, ಸಂಜೀವ್, ಮುಖಂಡ ಕಲಿಯೂರು ಶಿವಣ್ಣ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಮತ್ತು ಸಾರ್ವಜನಿಕರು ಇದ್ದರು.

ಪ್ರಜಾಸೇವೆಯೇ ಪರದೈವ: ಪ್ರಜಾಸೇವೆ ಕಾರ್ಯಕ್ರಮದಲ್ಲಿ ಸರ್ಕಾರದ ಯೋಜನೆಗಳು ಕಾಗದದ ಮೇಲೆ ಮಾತ್ರವಲ್ಲದೆ, ತಳಮಟ್ಟದಲ್ಲಿ ಅರ್ಹ ಫಲಾನುಭವಿಗಳನ್ನು ತಲುಪಿ, ಆಡಳಿತ ಯಂತ್ರಕ್ಕೆ ಸಾರ್ಥಕತೆ ಸಿಗುತ್ತದೆ ಎಂಬುದಕ್ಕೆ ಸಾಕ್ಷಿಯಾಯಿತು.

ವೃದ್ಧಾಪ್ಯ ಪಿಂಚಣಿ ಸಿಗದೆ ತಿರುಗಾಡಿ ಹೈರಾಣಾಗಿದ್ದ ವಯಸ್ಸಾದ ಅಸಹಾಯಕ ಮಹಿಳೆಯೊಬ್ಬರು, ತಮ್ಮ ಅಳಲನ್ನು ತೋಡಿಕೊಳ್ಳುತ್ತಾ ಕಣ್ಣೀರಿಟ್ಟರು. ಅವರ ನೋವನ್ನು ಕಂಡು ಮರುಗಿದ ತಿ.ನರಸೀಪುರ ತಹಸೀಲ್ದಾರ್ ಶ್ರೀ ಸುರೇಶ್ ಆಚಾರ್ ಅವರು ತಕ್ಷಣವೇ ಸ್ಪಂದಿಸಿದರು. ಕಾಗದ ಪತ್ರಗಳ ವಿಳಂಬಕ್ಕೆ ಅವಕಾಶ ನೀಡದೆ, ಸ್ಥಳದಲ್ಲೇ ಇದ್ದ ವೈದ್ಯಕೀಯ ಅಧಿಕಾರಿಗೆ ವೃದ್ಧೆಯ ವಯಸ್ಸಿನ ದೃಢೀಕರಣ ಪತ್ರವನ್ನು ಕೂಡಲೇ ನೀಡುವಂತೆ ಸೂಚಿಸಿದರು. ಪಿಂಚಣಿ ಆದೇಶ ಶೀಘ್ರವೇ ಮಂಜೂರಾಗುವಂತೆ ಮಾಡಿ, ಆ ವೃದ್ಧೆಯ ಮುಖದಲ್ಲಿ ಮಂದಹಾಸ ಮೂಡಲು ಕಾರಣರಾದರು.

ಕಣ್ಣೀರಿಗೆ ಸ್ಪಂದಿಸಿದ ತಹಸೀಲ್ದಾರ್: ಕಾರ್ಯಕ್ರಮದಲ್ಲಿ ನಿರೀಕ್ಷೆಗಿಂತ ಜನಸಂಖ್ಯೆ ಕಡಿಮೆಯಿದ್ದರೂ, ಅಲ್ಲಿ ನಡೆದ ಕೆಲಸ ಅರ್ಥಪೂರ್ಣವಾಗಿತ್ತು. ಜನಸಂಖ್ಯೆ ಮುಖ್ಯವಲ್ಲ, ಬದಲಿಗೆ ಅಲ್ಲಿ ನೆರೆದಿದ್ದ ಪ್ರತಿಯೊಬ್ಬರ ಸಮಸ್ಯೆಗೆ ದೊರೆತ ಪರಿಹಾರ ಮುಖ್ಯ ಎಂಬ ಸಂದೇಶವನ್ನು ಈ ಕಾರ್ಯಕ್ರಮ ಸಾರಿತು.