ಬನ್ನೂರಿನಲ್ಲಿ ನಡೆದ ರೈತ ಸ್ವಾಭಿಮಾನಿ ಯಾತ್ರೆಯಲ್ಲಿ ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾತನಾಡಿದರು. ಎಂ.ಅಶ್ವಿನ್‌ಕುಮಾರ್, ಅನ್ನದಾನಿ, ಬಿ.ಎನ್.ಕೃಷ್ಣೇಗೌಡ, ವೈ.ಎಸ್.ರಾಮಸ್ವಾಮಿ, ಜಯರಾಮೇಗೌಡ, ರಮೇಶ್, ದೇವರಾಜು ಇದ್ದರು. 
ಮೈಸೂರು

ಸೂಕ್ತ ಪರಿಹಾರ ಘೋಷಿಸದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಎಚ್ಚರಿಕೆ

ಬನ್ನೂರು: ಮಳೆ ಇಲ್ಲದೆ ರೈತರು ಕಂಗಾಲಾಗಿದ್ದು, ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂ. ಬರಪರಿಹಾರ ನೀಡಬೇಕು ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ಕುಮಾರಸ್ವಾಮಿ ಆಗ್ರಹಿಸಿದರು.

ಪಟ್ಟಣದಲ್ಲಿ ರಾಜ್ಯ ಸರ್ಕಾರದ ರೈತ ವಿರೋಧ ನೀತಿ ಖಂಡಿಸಿ ಜೆಡಿಎಸ್ ಯುವ ಘಟಕದ ವತಿಯಿಂದ ಮಂಗಳವಾರ ರಾತ್ರಿ ಹಮ್ಮಿಕೊಂಡಿದ್ದ ರೈತ ಸ್ವಾಭಿಮಾನಿ ಸಮಾವೇಶದಲ್ಲಿ ಮಾತನಾಡಿ, ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರೈತರ ಪರಿಸ್ಥಿತಿ ಶೋಚನೀಯವಾಗಿದೆ. ರೈತನ ಬದುಕು ಸಂಕಷ್ಟದಲ್ಲಿದ್ದರೂ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳದೆ ನೆರವು ನೀಡುವಲ್ಲಿ ವಿಫಲವಾಗಿದೆ. 3500ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ರಾಜ್ಯ ಸರ್ಕಾರದ ಈ ನೀತಿಯನ್ನು ವಿರೋಧಿಸಿ ರೈತ ಸಮಾವೇಶ ಹಮ್ಮಿಕೊಂಡು ರೈತರ ನೆರವಿಗೆ ನಿಲ್ಲುವ ಕೆಲಸ ಮಾಡುತ್ತಿದ್ದೇವೆ ಎಂದು ತಿಳಿಸಿದರು.

ಎಕರೆಗೆ 2500 ರೂ.ಬರಪರಿಹಾರ ಘೋಷಣೆ ಮಾಡಿರುವುದು ಅವರಿಗೆ ರೈತರ ಮೇಲಿನ ಕಾಳಜಿ ತೋರಿಸುತ್ತದೆ. ರೈತರೊಂದಿಗೆ ನಿಲ್ಲಬೇಕಾದ ಸರ್ಕಾರ ರೈತರನ್ನು ಭಿಕ್ಷುಕನಂತೆ ಕಾಣುವ ಮೂಲಕ ದೇಶದ ಅನ್ನದಾನ ಮೇಲಿನ ಮಾನವೀಯತೆ ಮರೆತಿದೆ. ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತು ಸೂಕ್ತ ಪರಿಹಾರ ನೀಡಬೇಕು ಮತ್ತು ಸಾಲಮನ್ನಾ ಮಾಡಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಾಗುವುದು ಎಂದು ಎಚ್ಚರಿಕೆ ನೀಡಿದರು.

ಮಾಜಿ ಶಾಸಕ ಎಂ.ಅಶ್ವಿನ್‌ಕುಮಾರ್ ಮಾತನಾಡಿ, ಕೆಆರ್‌ಎಸ್‌ನಲ್ಲಿ ನೀರಿದ್ದರು ಬೆಳೆಗಳಿಗೆ ನೀರು ಕೊಡಿಸುವಲ್ಲಿ ಮಾಜಿ ಸಚಿವ ಮತ್ತು ಶಾಸಕ ಡಾ.ಎಚ್.ಸಿ.ಮಹದೇವಪ್ಪ ಮಲತಾಯಿ ಧೋರಣೆ ಮಾಡಿದ್ದಾರೆ. ಮುಂದಿನ ದಿನಗಳಲ್ಲಿ ಜನರು ತಕ್ಕ ಉತ್ತರ ನೀಡಲಿದ್ದಾರೆ ಎಂದರು.

ಬನ್ನೂರಿನ ಕಾವೇರಿ ಸರ್ಕಲ್‌ನಿಂದ ಬಸವೇಶ್ವರ ವೃತ್ತದವರೆಗೆ ಪಾದಯಾತ್ರೆ ಸಾಗಿತು. ಮಾಜಿ ಶಾಸಕ ಅನ್ನದಾನಿ, ವಿಧಾನ ಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ಪುರಸಭೆ ಮಾಜಿ ಅಧ್ಯಕ್ಷ ಬಿ.ಎನ್.ಕೃಷ್ಣೇಗೌಡ, ಒಕ್ಕಲಿಗ ಸಂಘದ ತಾಲೂಕು ಅಧ್ಯಕ್ಷ ವೈ.ಎಸ್.ರಾಮಸ್ವಾಮಿ, ಚಾಮನಹಳ್ಳಿ ಪಿಎಸಿಎಸ್ ಉಪಾಧ್ಯಕ್ಷ ಜಯರಾಮೇಗೌಡ, ತಾಲೂಕು ಮಾಜಿ ಅಧ್ಯಕ್ಷ ನರಸಿಂಹಸ್ವಾಮಿ, ಡಾ.ಮಹೇಂದ್ರಸಿಂಗ್ ಕಾಳಪ್ಪ, ಜೆಡಿಎಸ್ ತಾಲೂಕು ಅಧ್ಯಕ್ಷ ಸಿಬಿಹುಂಡಿ ಚಿನ್ನಸ್ವಾಮಿ, ಹೋಬಳಿ ಅಧ್ಯಕ್ಷ ಕುಮಾರಸ್ವಾಮಿ, ಎಚ್.ಡಿ.ಕೋಟೆ ಕೃಷ್ಣನಾಯಕ್, ತೊಟ್ಟವಾಡಿ ಮಹದೇವಸ್ವಾಮಿ, ರಮೇಶ್, ದೇವರಾಜು ಉಪಸ್ಥಿತರಿದ್ದರು.