ಹುಣಸೂರು: ಕಳೆದ 15ವರ್ಷಗಳಲ್ಲಿ ಕ್ಷೇತ್ರದ ಅಭಿವೃದ್ಧಿಗಾಗಿ ನಾನು ಏನು ಕೊಡುಗೆ ನೀಡಿದ್ದೇನೆ ಎಂದು ತಾಲೂಕಿನ ಮತದಾರರು ಅರಿತಿದ್ದಾರೆ. ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ನನ್ನ ತೇಜೋವಧೆ ಮಾಡಿದರೆ ಏನೂ ಪ್ರಯೋಜನವಾಗದು ಎಂದು ಮಾಜಿ ಶಾಸಕ ಎಚ್.ಪಿ.ಮಂಜುನಾಥ್ ತಿಳಿಸಿದರು.
ತಾಲೂಕಿನ ಸೋಮನಹಳ್ಳಿ ಕೆರೆಗೆ ಸೋಮವಾರ ಬಾಗಿನ ಅರ್ಪಿಸಿದ ಬಳಿಕ ಸಾರ್ವಜನಿಕ ಸಭೆಯಲ್ಲಿ ಮಾತನಾಡಿದ ಅವರು, 2008ರಲ್ಲಿ ನಾನು ಪ್ರಥಮ ಬಾರಿಗೆ ಶಾಸಕನಾಗಿ ಆಯ್ಕೆಯಾದಾಗ ಸೋಮನಹಳ್ಳಿ ಕೆರೆ ಜೀರ್ಣೋದ್ಧಾರ ಕಾಮಗಾರಿಗೆ 1.50 ಕೋಟಿ ರೂ.ವೆಚ್ಚದಲ್ಲಿ ಚಾಲನೆ ನೀಡಿದ್ದೆ. ನಂತರದಲ್ಲಿ ತಾಂತ್ರಿಕ ಸಮಸ್ಯೆಯಿಂದ ಸ್ಥಗಿತಗೊಂಡಿದ್ದ ಯೋಜನೆ ಮತ್ತೆ ಎರಡನೇ ಬಾರಿಗೆ ಶಾಸಕನಾದ ಅವಧಿಯಲ್ಲಿ ಹೆಚ್ಚುವರಿಯಾಗಿ 56 ಲಕ್ಷ ರೂ.ಗಳ ಅನುದಾನದೊಂದಿಗೆ ಪೂರ್ಣವಾಗಿ ಜಾರಿಗೊಳಿಸಿದ ತೃಪ್ತಿ ನನ್ನದು. ಇದೀಗ ಈ ಕೆರೆಯಿಂದ ಉಯಿಗೊಂಡನಹಳ್ಳಿ ಕೆರೆಗೆ ನೀರು ತಲುಪಿಸುವ ಯೋಚನೆ ಹೊಂದಿದ್ದೇನೆ ಎಂದರು.
ವಿಪಕ್ಷದ ನಾಯಕರು ಸಾಮಾಜಿಕ ಜಾಲತಾಣಗಳನ್ನು ಬಳಸಿಕೊಂಡು ಮನಸೋ ಇಚ್ಛೆ ನನ್ನನ್ನು ಟೀಕಿಸುತ್ತಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವಧಿಯಲ್ಲಿ ಕ್ಷೇತ್ರಕ್ಕೆ ಅಭಿವೃದ್ಧಿ ಹೊಳೆಹರಿದಿದ್ದು ಇತಿಹಾಸ. ದೇವರಾಜ ಅರಸು ನಂತರದಲ್ಲಿ ಅತಿ ಹೆಚ್ಚು ಏತನೀರಾವರಿ ಯೋಜನೆಗಳನ್ನು ತಂದು 150ಕ್ಕೂ ಹೆಚ್ಚು ಕೆರೆಗಳನ್ನು ತುಂಬಿಸಿದ ಹೆಗ್ಗಳಿಕೆ ನನ್ನದು. ಈ ಎಲ್ಲ ವಿಷಯವನ್ನೇ ತಿಳಿಯದೆ ಮನಸಿಗೆ ತೋಚಿದಂತೆ ಮಾತನಾಡಿದರೆ ಅದಕ್ಕೆ ನಾನು ಪ್ರತಿಕ್ರಿಯಿಸುವುದಿಲ್ಲ. ಪಕ್ಷದ ಕಾರ್ಯಕರ್ತರು ಉತ್ತರಿಸುತ್ತಿದ್ದಾರೆ. ಕಾರ್ಯಕರ್ತರು ಮಾತನಾಡುವ ವೇಳೆ ವಿವೇಚನೆ ಕಳೆದುಕೊಳ್ಳದಿರಲಿ ಎಂದರು.
ತಾಲೂಕಿನ ಸಾಕಷ್ಟು ಸೊಸೈಟಿಗಳಲ್ಲಿ ಭ್ರಷ್ಟಾಚಾರ, ಲೂಟಿ ನಡೆದಿದ್ದು ಇದು ಈಗ ನಡೆಯುತ್ತಿರುವುದಲ್ಲ. ಹನಗೋಡು ಸೊಸೈಟಿ ಕರ್ಮಕಾಂಡ ನಾನು 2008ರಲ್ಲಿ ಅಧಿಕಾರಕ್ಕೆ ಬರುವ ಮೊದಲೇ ಇತ್ತು. ಕೇವಲ ಟೀಕೆ ಮಾಡಿದರೆ ಪ್ರಯೋಜನವೇನೂ ಸಿಗುವುದಿಲ್ಲ ಎಂದು ಶಾಸಕ ಜಿ.ಡಿ.ಹರೀಶ್ಗೌಡಗೆ ಟಾಂಗ್ ನೀಡಿದರು.
ಕಾಂಗ್ರೆಸ್ ನಗರಾಧ್ಯಕ್ಷ ರವಿಪ್ರಸನ್ನ, ಚಿಕ್ಕಸ್ವಾಮಿ, ಬಾಬಣ್ಣ, ವೆಂಕಟೇಶ್, ತಿಮ್ಮಯ್ಯ, ಶಿವಮ್ಮ, ಚಂದ್ರಶೇಖರ್, ಫೈಜಲ್ ಅಹಮ್ಮದ್, ದರ್ಶನ್, ಮಹದೇವ್, ಕುಮಾರ್, ಗಣೇಶ್, ನಾರಾಯಣ್, ಕಾರ್ತಿಕ್, ರಾಮಚಂದ್ರ, ರಾಘುಕಲ್ಕುಣಿಕೆ, ಹೊನ್ನಪ್ಪ, ಸುನಿತಾ ಜಯರಾಮೇಗೌಡ ಇದ್ದರು.