ಬ್ರಹ್ಮಸ್ಥಾನ ಮಹೋತ್ಸವದಲ್ಲಿ ಮಾತನಾಡಿದ ಶ್ರೀ ಮಾತಾ ಅಮೃತಾನಂದಮಯಿ ದೇವಿ A Darshan of the Mother in the Cultural City
ಮೈಸೂರು

ಸಾಂಸ್ಕೃತಿಕ ನಗರಿಯಲ್ಲಿ ಅಮ್ಮನ ದರ್ಶನ

ಭಕ್ತರನ್ನು ಆಲಿಂಗಿಸಿ ವಾತ್ಸಲ್ಯ ಹಂಚಿದ ಶ್ರೀ ಮಾತಾ ಅಮೃತಾನಂದಮಯಿ ದೇವಿ

ಮೈಸೂರು: ಭಕ್ತರಿಂದ ಪ್ರೀತಿಯಿಂದ ‘ಅಮ್ಮ’ ಎಂದೇ ಕರೆಯಲ್ಪಡುವ ಶ್ರೀ ಮಾತಾ ಅಮೃತಾನಂದಮಯಿ ದೇವಿ ಅವರು ನೆರೆದ ಭಕ್ತರನ್ನೂ ಆಲಿಂಗಿಸಿ ದರ್ಶನ ನೀಡಿ, ವಾತ್ಸಲ್ಯ ದಿನವಿಡೀ ಹಂಚಿದರು.

ಏಳು ವರ್ಷದ ಬಳಿಕ ಸಾಂಸ್ಕೃತಿಕ ನಗರಿಗೆ ಭೇಟಿ ನೀಡಿದ ಅವರು, ಬೋಗಾದಿ 2ನೇ ಹಂತದಲ್ಲಿರುವ ಮಾತಾ ಅಮೃತಾನಂದಮಯಿ ಮಠದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಬ್ರಹ್ಮಸ್ಥಾನ ಮಹೋತ್ಸವದಲ್ಲಿ ಭಾಗಿಯಾದರು. ಮಂಗಳವಾರವೂ ವಿವಿಧ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

ಅಮ್ಮನವರ ಸತ್ಸಂಗ, ಭಜನೆ, ಮಾರ್ಗದರ್ಶಿತ ಧ್ಯಾನ, ಆರತಿ ಮತ್ತು ದರ್ಶನ ಸೇರಿದಂತೆ ವಿವಿಧ ಆಧ್ಯಾತ್ಮಿಕ ಕಾರ್ಯಕ್ರಮ ನಡೆದವು. ಬ್ರಹ್ಮಸ್ಥಾನಂ ದೇವಸ್ಥಾನದಲ್ಲಿ ಶನಿ ದೋಷ ನಿವಾರಣ ಪೂಜೆ, ರಾಹು ದೋಷ ನಿವಾರಣ ಪೂಜೆ, ಉದಯಾಸ್ತಮಾನ ಪೂಜೆ, ಗಣಪತಿ ಹೋಮ, ಮೃತ್ಯುಂಜಯ ಹೋಮ, ನವಗ್ರಹ ಹೋಮ, ಸುದರ್ಶನ ಹೋಮ, ದೇವಿ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ವಿಧಿ ವಿಧಾನಗಳೂ ನೆರವೇರಿದವು. ಕಾರ್ಯಕ್ರಮದ ಅಂಗವಾಗಿ ಅನ್ನದಾನ ನಡೆಯಿತು.

ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀ ಮಾತಾ ಅಮೃತಾನಂದಮಯಿ ದೇವಿ, ವಿಶ್ವವ್ಯಾಪಿ ಕರುಣೆ ಮತ್ತು ಸಮಾನ ದೃಷ್ಟಿಕೋನದ ಮೂಲಕ ಸಾಮರಸ್ಯವನ್ನು ಪುನಃ ಸ್ಥಾಪಿಸಿ, ಶಾಂತಿಯುತ ಮತ್ತು ಸಮಾನತೆಯ ಜಗತ್ತನ್ನು ನಿರ್ಮಿಸಬೇಕಾಗಿದೆ. ಜನರು ಮತ್ತು ರಾಷ್ಟ್ರಗಳ ನಡುವಿನ ಸಂಘರ್ಷ ಮಾತುಕತೆ ಮೂಲಕ ಬಗೆಹರಿಸಬಹುದಾದರೂ, ಪ್ರಕೃತಿಯೊಂದಿಗಿನ ಮಾನವನ ಸಂಬಂಧಕ್ಕೆ ವಿನಯ, ಪ್ರೇಮ ಮತ್ತು ಗೌರವ ಅಗತ್ಯ. ಭೂಮಿ ಮತ್ತು ನೈಸರ್ಗಿಕ ಸಂಪನ್ಮೂಲಗಳನ್ನು ಎಲ್ಲ ಜೀವಿಗಳೊಂದಿಗೆ ಜವಾಬ್ದಾರಿಯುತವಾಗಿ ಹಂಚಿಕೊಳ್ಳಬೇಕು ಎಂದರು.

ಕೋವಿಡ್ ಸಾಂಕ್ರಾಮಿಕದ ಬಳಿಕ ಮಕ್ಕಳೊಂದಿಗೆ ಮತ್ತೆ ಒಂದಾಗಿರುವುದಕ್ಕೆ ಸಂತಸ ವ್ಯಕ್ತಪಡಿಸಿದ ಅವರು, ಈ ಪುನರ್ಮಿಲನವನ್ನು ಪ್ರೀತಿಯಿಂದ ಬೆಸೆದ ಹೃದಯಗಳ ಸಂಗಮ ಎಂದು ಬಣ್ಣಿಸಿದರು.

ಸಾಮರಸ್ಯದ ಬದುಕಿಗೆ ಅಗತ್ಯವಾದ ಮೂರು ತತ್ವ ಪ್ರಸ್ತಾಪಿಸಿದರು. ಸಹ ಮಾನವರೊಂದಿಗೆ ಸಹಕಾರ, ಪ್ರಕೃತಿಯೊಂದಿಗೆ ಸಹಬಾಳ್ವೆ ಮತ್ತು ಭಗವಂತನೊಂದಿಗೆ ಆಧ್ಯಾತ್ಮಿಕ ಅನುಸಂಧಾನ ಎಂಬ ತತ್ವವನ್ನು ಪ್ರತಿಯೊಬ್ಬರೂ ಪಾಲನೆ ಮಾಡಬೇಕು ಎಂದು ಹೇಳಿದರು.

ಬೆಂಗಳೂರು ಗ್ರಾಮಾಂತರ ಸಂಸದ ಡಾ.ಸಿ.ಎನ್.ಮಂಜುನಾಥ ಮಾತನಾಡಿ, ದೇಶಕ್ಕೆ ಸ್ವಾತಂತ್ರೃ ಬಂದಾಗ ಶೇ.30 ಸಾಕ್ಷರತೆವಿದ್ದರೆ, ಸಂಸ್ಕಾರವು ಶೇ.100ರಷ್ಟಿತ್ತು. ಆದರೀಗ ಸಾಕ್ಷರತೆ ಶೇ.80ಕ್ಕೆ ಹೆಚ್ಚಾಗಿದ್ದರೆ, ಸಂಸ್ಕಾರವು ಶೇ.30ಕ್ಕೆ ಕುಸಿದಿದೆ. ಸಾಕ್ಷರತೆಯೊಂದಿಗೆ ಮೌಲ್ಯ-ಸಂಸ್ಕಾರವೂ ಬೆರೆತಾಗ ಮಾತ್ರ ಸಮಗ್ರ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.

ಅಮೃತಾನಂದಮಯಿ ದೇವರ ರಾಯಭಾರಿ. ಸಮಾಜ ಸೇವೆ ಮಾಡಲು ಕಳುಹಿಸಲಾಗಿದೆ. ದೇಶದ ಆಧ್ಯಾತ್ಮಿಕತೆಯ ಸಂಕೇತವೂ ಹೌದು. ಭಾರತದ ಅಧ್ಯಾತ್ಮದ ಧೃವತಾರೆ. ಅವರಲ್ಲಿ ದೈವತ್ವ ಮತ್ತು ಮನುಷ್ಯತ್ವಗಳೆರಡೂ ಇದೆ. ಆರೋಗ್ಯ, ಶಿಕ್ಷಣ, ಸಮಾಜ ಸೇವೆ ಕೆಲಸ ಮಾಡುತ್ತಿದ್ದಾರೆ ಎಂದರು.

ಒಂದು ಸಣ್ಣ ಹಳ್ಳಿಯಿಂದ ಜಾಗತಿಕ ಆಧ್ಯಾತ್ಮಿಕತೆಯ ಪ್ರತೀಕವಾಗಿ ಬೆಳೆದ ಅವರ ಪಯಣವು ಸೇವೆಯ ಮಹತ್ವ ಸಾರುತ್ತದೆ. ಜೀವನ ಕ್ಷಣಿಕ. ಪ್ರತಿಯೊಬ್ಬರೂ ಬದುಕನ್ನು ಸಮಾಜದ ಒಳಿತಿಗಾಗಿ ಸಮರ್ಪಿಸಿಕೊಳ್ಳಬೇಕು. ಯುವಜನರು ಜವಾಬ್ದಾರಿಯುತವಾಗಿ ಮಾತನಾಡಬೇಕು, ಆರೋಗ್ಯಕರ ಸಂಬಂಧ ಬೆಳೆಸಿಕೊಳ್ಳಬೇಕು, ಯೋಗ ಮತ್ತು ವ್ಯಾಯಾಮ ಅಭ್ಯಾಸ ಮಾಡಬೇಕು ಎಂದು ಸಲಹೆ ನೀಡಿದರು

ಶಾಸಕ ಜಿ.ಟಿ.ದೇವೇಗೌಡ ಮಾತನಾಡಿ, ಬಡವರಿಗೆ ವಸತಿ ಒದಗಿಸುವುದು ಹಾಗೂ ಕಾರಾಗೃಹದ ಕೈದಿಗಳು ಸೇರಿದಂತೆ ಸಮಾಜದ ಎಲ್ಲ ವರ್ಗದವರಿಗೆ ಯೋಗ, ಆಧ್ಯಾತ್ಮಿಕ ಬೋಧನೆ ಪರಿಚಯಿಸುವುದು ಸೇರಿದಂತೆ ಮಾನವೀಯ ಸೇವಾ ಕಾರ್ಯ ಶ್ಲಾಘನೀಯ ಎಂದರು.

ಶಾಸಕ ಟಿ.ಎಸ್.ಶ್ರೀವತ್ಸ, ಅರುಬಾದ ಕ್ಸೇವಿಯರ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ಹೃದ್ರೋಗ ಅರಿವಳಿಕೆ ತಜ್ಞ ಡಾ.ಪಿ.ಕೆ.ಪ್ರಹ್ಲಾದ್, ಬ್ಯಾಂಕ್ ನೋಟ್ ಪೇಪರ್ ಮಿಲ್ ಇಂಡಿಯಾ ಪ್ರೈವೇಟ್ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಅನಂತ್ ಹೆಗ್ಡೆ, ಆಟೋಮೋಟಿವ್ ಆಕ್ಸಲ್ಸ್ ಲಿಮಿಟೆಡ್ ಅಧ್ಯಕ್ಷ ನಾಗರಾಜ್ ಗಾರ್ಗೇಶ್ವರಿ, ಕೊಚ್ಚಿಯ ಅಮೃತ ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ. ಕೆ.ಎಸ್.ಗಿರೀಶ್ ಕುಮಾರ್, ಮಾಜಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಹಿರಿಯ ನಗರ ವಕೀಲ ಓ.ಶ್ಯಾಮ ಭಟ್ ಉಪಸ್ಥಿತರಿದ್ದರು.

ಆಸ್ಪತ್ರೆಯ ಕಟ್ಟಡ ಉದ್ಘಾಟನೆ

ರೂಪಾನಗರದಲ್ಲಿ ನಿರ್ಮಾಣಗೊಂಡಿರುವ ಅಮೃತ ಕೃಪಾ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ 100 ಹಾಸಿಗೆಯ ನೂತನ ಕಟ್ಟಡವನ್ನು ಉದ್ಘಾಟಿಸಲಾಯಿತು. ಗ್ರಾಮೀಣ ಮಹಿಳಾ ಸಬಲೀಕರಣ ಕಾರ್ಯಕ್ರಮದಡಿ 50 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ಅಮೃತ ಶ್ರೀ(ಅಮೃತ ಸ್ವಾವಲಂಬನೆ ಮತ್ತು ಸಬಲೀಕರಣ) ಯೋಜನೆ, ಅಮೃತ ಸಹಾಯ ನಿಧಿ ಕಾರ್ಯಕ್ರಮದಡಿ 250 ಮಹಿಳೆಯರಿಗೆ ಸೀರೆ, ಆರ್ಥಿಕ ನೆರವು ವಿತರಿಸಲಾಯಿತು.