ಬೆಟ್ಟದಪುರ: ಪ್ರತಿಯೊಬ್ಬ ವ್ಯಕ್ತಿಯೂ ಸ್ವತಂತ್ರವಾಗಿ ಬದುಕಲು ಸಹಕಾರಿಯಾಗುವ ಪ್ರಮುಖ ಸಾಧನ ಶಿಕ್ಷಣ. ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಶಿಕ್ಷಣ ದೊರೆಯುವಂತಾಗಬೇಕು ಎಂದು ಸುತ್ತೂರು ಶ್ರೀ ವೀರಸಿಂಹಾಸನ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅಭಿಪ್ರಾಯಟ್ಟರು.
ಪಿರಿಯಾಪಟ್ಟಣ ತಾಲೂಕು ಬೆಟ್ಟದಪುರದ ಶ್ರೀ ಸಲೀಲಾಖ್ಯ ಮತ್ತು ಕನ್ನಡ ಮಠದಲ್ಲಿ ಮಂಗಳವಾರ ಆಯೋಜಿಸಿದ್ದ ಮೈಸೂರು-ಚಾಮರಾಜನಗರ ಜಿಲ್ಲಾ ವೀರಶೈವ ಲಿಂಗಾಯತ ಮಠಾಧಿಪತಿಗಳ ಗೋಷ್ಠಿ, ಡಾ.ಶ್ರೀ ಶಿವರಾತ್ರಿ ರಾಜೇಂದ್ರ ಸ್ವಾಮೀಜಿ ಅವರ 111ನೇ ಜಯಂತಿ, ದೀಕ್ಷಾ ಸಂಸ್ಕಾರ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನಾಡು-ನುಡಿ, ಶಿಕ್ಷಣ, ಸೇವೆ ಸೇರಿದಂತೆ ಸಮಾಜದ ಪ್ರತಿಯೊಂದು ಕಾಯಕದಲ್ಲೂ ಮಠಗಳ ಪಾತ್ರ ಮಹತ್ವದ್ದಾಗಿದೆ. ಸಮಾಜವನ್ನು ಮುನ್ನಡೆಸುವಲ್ಲಿ ಮಠಗಳು ಶತಮಾನಗಳಿಂದ ಪ್ರಮುಖ ಪಾತ್ರ ವಹಿಸುತ್ತಿವೆ. ವಿಶೇಷವಾಗಿ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಿ, ಅವರಲ್ಲಿರುವ ಪ್ರತಿಭೆ ಗುರುತಿಸಿ ಪ್ರೋತ್ಸಾಹಿಸುವ ಕೆಲಸ ಅತ್ಯಂತ ಮಹತ್ವದ್ದು. ಪ್ರತಿಭಾವಂತ ಮಕ್ಕಳಿಗೆ ಅವಕಾಶ ನೀಡಿದಾಗ ಅವರು ಸಮಾಜಕ್ಕೆ ದೊಡ್ಡ ಕೊಡುಗೆ ನೀಡಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಸಚಿವ ವಿಜಯಾನಂದ ಎಸ್.ಕಾಶಪ್ಪನವರ್ ಮಾತನಾಡಿ, ಹಲವು ಹೋರಾಟಗಳ ಬಳಿಕ ಕನ್ನಡ ಮಠದ ಆಸ್ತಿ ಮಠಕ್ಕೆ ಸೇರಿದೆ. ಎಲ್ಲ ಸಮುದಾಯಗಳನ್ನು ಅಪ್ಪಿಕೊಂಡು, ಒಪ್ಪಿಕೊಂಡು ವೀರಶೈವ ಸಮಾಜ ಮುನ್ನಡೆಯುತ್ತಿದೆ. ಕಾಯಕ, ದಾಸೋಹ ಹಾಗೂ ಶಿಕ್ಷಣದ ಮೂಲಕ ನಾಡಿಗೆ ಮತ್ತು ಇಡೀ ಜಗತ್ತಿಗೆ ಕೊಡುಗೆ ನೀಡಿದ ಕೀರ್ತಿ ವೀರಶೈವ ಸಮಾಜಕ್ಕೆ ಸಲ್ಲುತ್ತದೆ ಎಂದರು.
ಸಮಾಜವು ಸಾಮಾಜಿಕ, ರಾಜಕೀಯ ಹಾಗೂ ಧಾರ್ಮಿಕವಾಗಿ ಮತ್ತಷ್ಟು ಬಲಿಷ್ಠವಾಗಿ ಬೆಳೆಯಬೇಕಾದರೆ ಎಲ್ಲರೂ ಒಗ್ಗಟ್ಟಿನಿಂದ ಸಾಗಬೇಕು. ಮುಂದಿನ ದಿನಗಳಲ್ಲಿ ಕೂಡಲಸಂಗಮದಲ್ಲಿ ನಡೆಯುವ ಆರ್ಶೀವಚನ ಸಭೆಯಲ್ಲಿ ಎಲ್ಲ ಮಠಾಧಿಪತಿಗಳು ಭಾಗವಹಿಸಬೇಕು. ಮುಂದಿನ ದಿನಗಳಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಮತ್ತಷ್ಟು ದೊಡ್ಡದಾಗಿ ನಡೆಯಬೇಕು. ಈ ಉದ್ದೇಶದಿಂದ ನಾನು 2 ಲಕ್ಷ ರೂ. ದತ್ತಿ ನೀಡುತ್ತೇನೆ ಎಂದು ಭರವಸೆ ನೀಡಿದರು.
ಶಾಸಕ ಕೆ.ವೆಂಕಟೇಶ್ ಮಾತನಾಡಿ, 1985ರಲ್ಲಿ ನಾನು ಶಾಸಕನಾಗಿದ್ದ ಸಂದರ್ಭದಲ್ಲಿ ನನ್ನ ಅಕ್ಕನ ಮಗನಿಗೆ ವೈದ್ಯಕೀಯ ಸೀಟು ಕೊಡಿಸುವ ಉದ್ದೇಶದಿಂದ ಅಂದಿನ ಶಿಕ್ಷಣ ಸಚಿವರೊಂದಿಗೆ ಚುಂಚನಗಿರಿ ಮಠಕ್ಕೆ ತೆರಳಿದ್ದೆವು. ಅಲ್ಲಿ ಸೀಟು ದೊರೆಯಲಿಲ್ಲ. ಬಳಿಕ ಸುತ್ತೂರು ಮಠಕ್ಕೆ ತೆರಳಿದಾಗ ಯಾವುದೇ ವಿಳಂಬವಿಲ್ಲದೆ ವೈದ್ಯಕೀಯ ಸೀಟು ದೊರೆಯಿತು. ಇಂದು ಆತ ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವುದು ಸುತ್ತೂರು ಮಠದ ಶಿಕ್ಷಣ ಸೇವೆಯ ಫಲ ಎಂದು ಸ್ಮರಿಸಿದರು.
ಜಾತಿ-ಜನಾಂಗದ ಭೇದವಿಲ್ಲದೆ ಸಮಾಜಮುಖಿ ಕಾರ್ಯದಲ್ಲಿ ತೊಡಗಿರುವ ಸುತ್ತೂರು ಮಠ, ವಿಶೇಷವಾಗಿ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದೆ. ಮಠಗಳು ಕೇವಲ ಧಾರ್ಮಿಕ ಕಾರ್ಯಗಳಿಗೆ ಸೀಮಿತವಾಗದೆ ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ. ಮಠಗಳ ಆಶೀರ್ವಾದ ಹಾಗೂ ಮಾರ್ಗದರ್ಶನದಿಂದ ಸಮಾಜ ಇನ್ನಷ್ಟು ಪ್ರಗತಿ ಸಾಧಿಸಬೇಕು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಮುಂದಿನ ಪ್ರತಿಭಾ ಪುರಸ್ಕಾರ ಕಾರ್ಯಕ್ರಮಕ್ಕೆ 5 ಲಕ್ಷ ರೂ.ದತ್ತಿ ನೀಡುವುದಾಗಿ ಘೋಷಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಅಭಿನಂದಿಸಲಾಯಿತು. ಇದೇ ವೇಳೆ ವಿವಿಧ ಮಠಾಧಿಪತಿಗಳು ಹಾಗೂ ಗಣ್ಯರನ್ನು ಗೌರವಿಸಲಾಯಿತು. ವಾಟಾಳ್ ಸೂರ್ಯ ಸಿಂಹಾಸನ ಮಠದ ಶ್ರೀ ಸಿದ್ದಲಿಂಗ ಶಿವಾಚಾರ್ಯ ಸ್ವಾಮೀಜಿ, ಕನ್ನಡ ಮಠದ ಶ್ರೀ ಚನ್ನಬಸವದೇಶಿಕೇಂದ್ರ ಸ್ವಾಮೀಜಿ, ಗುಂಡ್ಲುಪೇಟೆ ಶಾಸಕ ಎಚ್.ಎಂ.ಗಣೇಶ್ ಪ್ರಸಾದ್, ಮಾಜಿ ಶಾಸಕ ಎಚ್.ಸಿ.ಬಸವರಾಜು, ಗಾವಡಗೆರೆ ಮಠದ ಶ್ರೀ ನಟರಾಜ ಸ್ವಾಮೀಜಿ, ತಾಲೂಕು ಗ್ಯಾರಂಟಿ ಅನುಷ್ಠಾನ ಮತ್ತು ಆಶ್ರಯ ಸಮಿತಿ ಅಧ್ಯಕ್ಷ ನಿತಿನ್ ವೆಂಕಟೇಶ್, ಕೊಡಗು ಜಿಲ್ಲಾ ವೀರಶೈವ ಸಮಾಜದ ಅಧ್ಯಕ್ಷ ಎಚ್.ಪಿ.ಶಿವಪ್ಪ, ತಾಲೂಕು ವೀರಶೈವ ಸಮಾಜದ ಅಧ್ಯಕ್ಷ ಪರಮೇಶ್, ಯುವ ಘಟಕದ ಅಧ್ಯಕ್ಷ ಅಭಿ ಕಿರಂಗೂರು, ನಿಕಟಪೂರ್ವ ಅಧ್ಯಕ್ಷ ಮಂಜು, ಮಹಿಳಾ ಘಟಕದ ಅಧ್ಯಕ್ಷೆ ಶಿಲ್ಪಾ, ಅನಿತಾ ತೊಟ್ಟಪ್ಪಶೆಟ್ಟಿ, ಟಿ.ಸಿ.ಶಿವುದೇವ್, ದೀಪ್ತಿ ಡೆವಲಪರ್ಸ್‌ನ ಎ.ಎಸ್.ಜಗದೀಶ್ ಉಪಸ್ಥಿತರಿದ್ದರು.