ಸಾಲಿಗ್ರಾಮ ತಾಲೂಕಿನ ತಂದ್ರೆ ಗ್ರಾಮದಲ್ಲಿ ಶ್ರೀ ಸಪ್ತಮಾತೃಕೆ ದೇವಿರಮ್ಮ ದೇವಿಯ ಜಾತ್ರಾ ಮಹೋತ್ಸವ ಅದ್ದೂರಿಯಾಗಿ ನೆರವೇರಿತು. 
ಮೈಸೂರು

ಸಪ್ತಮಾತೃಕೆ ದೇವಿರಮ್ಮ ಬ್ರಹ್ಮರಥೋತ್ಸವ ಅದ್ದೂರಿ

ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದ ಮಹಿಳೆಯರು

ಸಾಲಿಗ್ರಾಮ: ತಾಲೂಕಿನ ದೇವಿತಂದ್ರೆ ಗ್ರಾಮ ದೇವತೆ ಸಪ್ತಮಾತೃಕೆ ದೇವಿರಮ್ಮ ತಾಯಿಯ ಬ್ರಹ್ಮರಥೋತ್ಸವ ಶನಿವಾರ ಸಾವಿರಾರು ಭಕ್ತರ ಜಯ ಘೋಷಣೆಯೊಂದಿಗೆ ಅದ್ದೂರಿಯಾಗಿ ನೆರವೇರಿತು.

ಶುಕ್ರವಾರ ರಾತ್ರಿ ತಂದ್ರೆ ಅಂಕನಹಳ್ಳಿ, ದೇವಿತಂದ್ರೆ, ಹಾಸನ ಜಿಲ್ಲೆ ಗೋಹಳ್ಳಿ ಗ್ರಾಮಗಳ ಭಕ್ತರು ಶ್ರದ್ಧಾ ಭಕ್ತಿಯಿಂದ ಸಿಡಿಗಳನ್ನು ತಂದು ದೇವಾಲಯದ ಪ್ರಾಂಗಣದಲ್ಲಿ ನಿಲ್ಲಿಸಿದರು. ಶನಿವಾರ ಮುಂಜೆನೆಯಿಂದಲೇ ಮಹಿಳೆಯರು ಸರತಿ ಸಾಲಿನಲ್ಲಿ ನಿಂತು ದೇವರ ದರ್ಶನ ಪಡೆದು ಇಷ್ಟಾರ್ಥ ಸಿದ್ಧಿಗಾಗಿ ಪ್ರಾರ್ಥಿಸಿದರು.

ದೇವಾಲಯ ಒಳ ಪ್ರಾಂಗಣದಲ್ಲಿದ್ದ ದೇವಿಯ ಉತ್ಸವ ಮೂರ್ತಿಯನ್ನು ಭಕ್ತರು ಹೊತ್ತು ತಂದು ದೇವಾಲಯ ಹೊರ ಪ್ರಾಂಗಣದಲ್ಲಿ ಹೂವಿನಿಂದ ಅಲಂಕೃತಗೊಂಡಿದ್ದ ರಥದಲ್ಲಿ ಪ್ರತಿಷ್ಠಾಪಿಸಿ ರಥೋತ್ಸವ ನಡೆಸಿದರು.

ಭಕ್ತರು ದೇವಿಗೆ ಜಯಘೋಷಣೆ ಕೂಗುತ್ತಾ ಬಾಳೆ ಹಣ್ಣು ಜವನ ಎಸೆಯುತ್ತ ರಥ ಎಳೆದರು.

ಬ್ರಹ್ಮರಥೋತ್ಸವಕ್ಕೆ ಮಂಡ್ಯ, ಮಡಿಕೇರಿ, ಹಾಸನ, ಬೆಂಗಳೂರು, ಚಾಮರಾಜನಗರ, ಚಿಕ್ಕಮಗಳೂರು ಜಿಲ್ಲೆಗಳಿಂದ ಭಕ್ತರು ಆಗಮಿಸಿದ್ದರು.

ಶಾಸಕ ಡಿ.ರವಿಶಂಕರ್, ಮಾಜಿ ಸಚಿವ ಎಚ್.ವಿಶ್ವನಾಥ್, ಎಂಡಿಸಿಸಿ ಬ್ಯಾಂಕ್ ಅಧ್ಯಕ್ಷ ದೊಡ್ಡಸ್ವಾಮಿಗೌಡ, ಉದ್ಯಮಿ ವಿಜಯ್, ಸಿ.ಪಿ.ರಮೇಶ್, ಉಮಾಶಂಕರ್, ಬಿಜೆಪಿ ಮುಖಂಡ ಹೊಸಹಳ್ಳಿ ವೆಂಕಟೇಶ್, ಕಾಂಗ್ರೆಸ್ ಮುಖಂಡ ಗಂಧನಹಳ್ಳಿ ವೆಂಕಟೇಶ್, ತಾ.ಪಂ.ಮಾಜಿ ಸದಸ್ಯೆ ವೀಣಾದಿಲೀಪ್, ಗ್ರಾಪಂ ಮಾಜಿ ಅಧ್ಯಕ್ಷೆ ರೇಣುಕಾ ವೆಂಕಟೇಶ್ ನಾಯಕ, ದಿನೇಶ್ ನಂಜಪ್ಪ, ದಿಲೀಪ್, ರಾಣಿಕುಮಾರ್, ಸುಮಾ ಜಗದೀಶ್, ಕೃಷ್ಣನಾಯಕ, ಕಾಳಯ್ಯ, ಧರ್ಮೇಂದ್ರ, ತಂದ್ರೆಕೊಪ್ಪಲು ಚಿಕ್ಕೇಗೌಡ, ರಂಗೇಗೌಡ, ಜೆಡಿಎಸ್ ಮುಖಂಡ ಲೋಕೇಶ್, ಬಾಬು ಹನುಮಾನ್, ಮಹದೇವಪ್ಪ ಇತರರು ಇದ್ದರು.