ಮೈಸೂರು: ಸಂವಿಧಾನದ 77ನೇ ದಿನಾಚರಣೆ ಅಂಗವಾಗಿ ನವೆಂಬರ್ 26, 27ರಂದು ಮೈಸೂರಿನಲ್ಲಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನ ಆಯೋಜಿಸಲಾಗಿದೆ ಎಂದು ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ತಿಳಿಸಿದರು.
ಸಂವಿಧಾನದ ಕುರಿತು ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ‘ಸಂವಿಧಾನದ ಧ್ವನಿ ಭಾರತೀಯರ ಜೀವಧ್ವನಿ’ ಘೋಷಣೆಯೊಂದಿಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಆಯೋಜಿಸುವ ಸಮ್ಮೇಳನವನ್ನು ನಿವೃತ್ತ ಮುಖ್ಯ ಚುನಾವಣಾ ಆಯುಕ್ತ ಡಾ.ಶಹಬುದ್ಧೀನ್ ಖುರೇಷಿ ಉದ್ಘಾಟಿಸಲಿದ್ದು, ಮಾಜಿ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ಕುಮಾರ್ ಸಮಾರೋಪ ಭಾಷಣ ಮಾಡಲಿದ್ದಾರೆ ಎಂದು ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಈ ಕಾರ್ಯಕ್ರಮವನ್ನು ವರ್ಷವಿಡೀ ಆಚರಿಸಲು ತೀರ್ಮಾನಿಸಿದ್ದು, ರಾಜ್ಯ 31 ಜಿಲ್ಲೆಗಳಲ್ಲಿಯೂ ಕಾರ್ಯಕ್ರಮ ಆಯೋಜನೆ ಮಾಡಲಾಗುವುದು. ಈ ವರ್ಷ ಮೈಸೂರಿನಲ್ಲಿ ಉದ್ಘಾಟನೆಗೊಳ್ಳುವ ಕಾರ್ಯಕ್ರಮ 2027ರ ನವೆಂಬರ್ 27ರಂದು ಬೆಂಗಳೂರಿನ ಸ್ವಾತಂತ್ರೃ ಉದ್ಯಾನದಲ್ಲಿ ಬೃಹತ್ ಕಾರ್ಯಕ್ರಮದೊಂದಿಗೆ ಸಮಾರೋಪಗೊಳ್ಳಲಿದೆ ಎಂದು ಹೇಳಿದರು.
ಮೈಸೂರಿನಲ್ಲಿ ನಡೆಯುವ ಈ ಸಮ್ಮೇಳನವು ಮೂರು ಪ್ರಮುಖ ಪೂರ್ಣಾವಧಿವೇಶ ಹಾಗೂ ಆರು ಸಮಾನಾಂತರ ಗೋಷ್ಠಿಗಳನ್ನು ಒಳಗೊಂಡಿರುತ್ತದೆ. ಜತೆಗೆ ಸಂಜೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಯೋಜಿಸಲಾಗುವುದು. ಸಮಾವೇಶದ ಅಂಗವಾಗಿ ಅ.27ರಂದು ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ಕೊಡಗು ಜಿಲ್ಲೆಗಳಲ್ಲಿ ಪ್ರಚಾರಯಾನ ನಡೆಯಲಿದೆ. ಬೆಂಗಳೂರಿನಿಂದ ಮೈಸೂರಿಗೆ ಭಾರತ ಸಂವಿಧಾನದ ಸ್ತಬ್ಧ ಚಿತ್ರದ ಮೆರವಣಿಗೆ ಇರಲಿದೆ ಎಂದು ವಿವರಿಸಿದರು.
ಸಮಕಾಲೀನ ಪ್ರಜಾಪ್ರಭುತ್ವ ಸಮಾಜದಲ್ಲಿ ಭಾರತೀಯ ಸಂವಿಧಾನದ ಕಾರ್ಯನಿರ್ವಹಣೆಯನ್ನು ವಿಮರ್ಶಾತ್ಮವಾಗಿ ಪರಿಶೀಲಿಸುವುದು, ಸಾಂವಿಧಾನಿಕ ಮೌಲ್ಯಗಳು, ನೈತಿಕತೆಯ ಬಗ್ಗೆ ಸಾರ್ವಜನಿಕ ತಿಳವಳಿಕೆಯನ್ನು ಉತ್ತೇಜಿಸುವುದು, ಪ್ರಜಾಪ್ರಭುತ್ವದ ಸಂಸ್ಥೆಗಳಲ್ಲಿ ಯುವಜನರು, ಸಮುದಾಯವನ್ನು ಭಾಗವಹಿಸುವಂತೆ ಪ್ರೋತ್ಸಾಹಿಸುವುದು ಸಮ್ಮೇಳನದ ಉದ್ದೇಶವಾಗಿದೆ ಎಂದರು.
ಎಸ್ಐಆರ್ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ ಇತ್ತೀಚಿನ ಬೆಳವಣಿಗೆಗಳು ಸಂವಿಧಾನ ಹಾಗೂ ಪ್ರಜಾಪ್ರಭುತ್ವಕ್ಕೆ ಆತಂಕವನ್ನು ಉಂಟು ಮಾಡುತ್ತಿವೆ. ಇದನ್ನು ಎಚ್ಚರಿಸುವ ಕೆಲಸವನ್ನು ಮಾಡುವ ಮೂಲಕ ಪರಿಪೂರ್ಣವಾಗಿ ಸಂರಕ್ಷಣೆ ಮಾಡುವ ಕುರಿತು ಜಾಗೃತಿ ಮೂಡಿಸಲಾಗುವುದು ಎಂದು ಹೇಳಿದರು.
ಸಂವಿಧಾನದ ಜಾಗೃತಿ ಕುರಿತು ನನ್ನ ಗೌರವಾಧ್ಯಕ್ಷತೆಯಲ್ಲಿ ಆಯೋಜಿಸುತ್ತಿರುವ ಎರಡನೇ ಕಾರ್ಯಕ್ರಮ ಇದಾಇದೆ. 2017ರಲ್ಲಿ ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ದೇಶ, ವಿದೇಶದಿಂದ ಗಣ್ಯರು ಆಗಮಿಸಿದ್ದರು ಎಂದರು.
ವಿವಿಧ ಸಂಘಟನೆಯ ಚಿನ್ನಸ್ವಾಮಿ ವಡ್ಡಗೆರೆ, ಹರಿಹರ ಆನಂದಸ್ವಾಮಿ, ಹೊಸಕೋಟೆ ಬಸವರಾಜು, ಭಾಸ್ಕರ್ ಇದ್ದರು.