ಪಿರಿಯಾಪಟ್ಟಣದ ಇತಿಹಾಸ ಪ್ರಸಿದ್ಧ ಶ್ರೀ ಮಹದೇಶ್ವರ ಸ್ವಾಮಿಯ ಮೆರವಣಿಗೆ ನಡೆಯಿತು. 
ಮೈಸೂರು

ಶ್ರೀ ಮಹದೇಶ್ವರ ಸ್ವಾಮಿ ಜಾತ್ರೆ ಸಂಪನ್ನ

ಸಹಸ್ರಾರು ಭಕ್ತರ ನಡುವೆ ವಿಜೃಂಭಣೆಯ ರಥೋತ್ಸವ

ಪಿರಿಯಾಪಟ್ಟಣ: ದೀಪಾವಳಿ ಹಬ್ಬದ ಅಂಗವಾಗಿ ಪಟ್ಟಣದ ಶ್ರೀ ಮಹದೇಶ್ವರ ಸ್ವಾಮಿ ದೇವಾಲಯದಲ್ಲಿ 4 ದಿನಗಳ ಜಾತ್ರಾ ಮಹೋತ್ಸವ ಬುಧವಾರ ಸಂಪನ್ನವಾಯಿತು.

ಪ್ರತಿ ವರ್ಷ ದೀಪಾವಳಿ ಹಬ್ಬದ ಸಂದರ್ಭದಲ್ಲಿ ನಡೆಯುವ ಈ ಜಾತ್ರಾ ಮಹೋತ್ಸವದಲ್ಲಿ ಪಟ್ಟಣ ಸೇರಿದಂತೆ ತಾಲೂಕಿನ ವಿವಿಧ ಗ್ರಾಮಗಳಿಂದ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ್ದ ಭಕ್ತರು ಸ್ವಾಮಿಯ ರಥೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ನ.8ರ ಭಾನುವಾರ ಸ್ವಾಮಿಯ ಉತ್ಸವ ಮೂರ್ತಿಯನ್ನು ಪಟ್ಟಣದಲ್ಲಿರುವ ಸ್ವಾಮಿಯ ಮಠದಿಂದ ಉದ್ಭವ ಸ್ಥಾನಕ್ಕೆ ಕೊಂಡೊಯ್ದು ರಾತ್ರಿ ಸ್ವಾಮಿಗೆ ಎಣ್ಣೆಮಜ್ಜನ ನಡೆಸಿದ ಬಳಿಕ ಪ್ರಸಾದ ವಿನಿಯೋಗ ನಡೆಸಲಾಯಿತು. ನ.9ರ ಸೋಮವಾರ ಸ್ವಾಮಿಗೆ ಹಾಲರವಿ ಸೇವೆ ಸಲ್ಲಿಸಿ ಬಳಿಕ ಸಾಯಂಕಾಲ ದಾಸೋಹ ಸಂತರ್ಪಣೆ ಮಾಡಲಾಯಿತು.

ನ.10ರಂದು ಮಧ್ಯಾಹ್ನ 12.30ರ ಶುಭ ಲಗ್ನದಲ್ಲಿ ಸ್ವಾಮಿಯ ಉತ್ಸವ ಮೂರ್ತಿಯನ್ನು ಅಲಂಕೃತ ರಥದಲ್ಲಿ ಪ್ರತಿಷ್ಠಾಪನೆ ಮಾಡಿ ರಥೋತ್ಸವ ಜರುಗಿತು. ಸಂಜೆ ದೇವಾಲಯದ ಮುಂದೆ ಕೊಂಡೋತ್ಸವ ನೆರವೇರಿತು.

ನ.11ರಂದು ದೇವಾಲಯದ ಆವರಣದಲ್ಲಿ ಸ್ವಾಮಿಗೆ ಪಾನಕ ಪೂಜೆ ನಡೆಸಿದ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು. ಸಾಯಂಕಾಲ ಉತ್ಸವ ಮೂರ್ತಿಯನ್ನು ದೇವಾಲಯದ ಆವರಣದಿಂದ ಮೆರವಣಿಗೆಯಲ್ಲಿ ಕೊಂಡೊಯ್ದು ವಿಜೃಂಭಣೆಯಿಂದ ಊರಿನ ಮುಖ್ಯ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.

4 ದಿನಗಳ ಜಾತ್ರಾ ಮಹೋತ್ಸವದಲ್ಲಿನ ಎಲ್ಲ ಧಾರ್ಮಿಕ ಪೂಜಾ ಕಾರ್ಯಕ್ರಮಗಳಲ್ಲಿ ಭಕ್ತರು ಉತ್ಸಾಹದಿಂದ ಭಾಗವಹಿಸಿದ್ದರು.