ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ 
ಮೈಸೂರು

ಶೂಟೌಟ್ ಪ್ರಕರಣ 3 ಆರೋಪಿಗಳ ಸೆರೆ

ಹುಣಸೂರಿನಲ್ಲಿ ಕುರಿಗಾಹಿಗಳ ಮೇಲೆ ಗುಂಡಿನ ದಾಳಿ ಮಾಡಿದ್ದ ದುರುಳರು

ಹುಣಸೂರು : ಹುಣಸೂರಿನಲ್ಲಿ ಇತ್ತೀಚೆಗೆ ನಡೆದ ಕುರಿಗಾಹಿಗಳ ಮೇಲಿನ ಶೂಟೌಟ್ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ.

ಹುಣಸೂರು ತಾಲೂಕಿನ ಬಿಳಿಕೆರೆ ಹೋಬಳಿಯ ಶ್ಯಾಮಭೋಗನಹಳ್ಳಿಯ ಪ್ರಮೋದ(28), ಹಿಂಡಗೂಡ್ಲು ಗ್ರಾಮದ ದೇವರಾಜ(31), ಪಿರಿಯಾಪಟ್ಟಣ ತಾಲೂಕಿನ ಚೌತಿ ಗ್ರಾಮದ ಸಿ.ವಿ.ಸುದೀಪ್ ಬಂಧಿತರು.

ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಗೌಡಗೆರೆ ಗ್ರಾಮದ ಮೂರು ಅಲೆಮಾರಿ ಕುಟುಂಬಗಳು, ಹುಣಸೂರು ತಾಲೂಕಿನ ಗುರುಪುರ ಗ್ರಾಮದ ರೈತರ ಜಮೀನಿನಲ್ಲಿ ಕುರಿ ಹಿಂಡು ಬಿಟ್ಟಿದ್ದವು. ನ.6ರಂದು ತಡರಾತ್ರಿ ಸುಮಾರಿಗೆ ಈ ಆರೋಪಿಗಳು ಬೈಕ್‌ನಲ್ಲಿ ಬಂದೂಕಿನೊಂದಿಗೆ ಬಂದು ಕುರಿ ಕದಿಯಲು ಹೊಂಚು ಹಾಕಿದ್ದರು. ಕುರಿಗಾಹಿಗಳು ಅವರನ್ನು ನೋಡಿ ಹಿಮ್ಮೆಟ್ಟಿಸಿದಾಗ, ಅವರು ನಾವು ಬೇಟೆಯಾಡಲು ಬಂದಿರುವುದಾಗಿ ತಿಳಿಸಿದ್ದಾರೆ. ಅನುಮಾನ ಬಂದು ಕುರಿಗಾಹಿಗಳು ಕೂಗಿದಾಗ, ಪರಾರಿಯಾಗಲು ಯತ್ನಿಸಿದ್ದಾರೆ. ಅವರನ್ನು ಹಿಡಿಯಲು ಪ್ರಯತ್ನಿಸಿದಾಗ ಅವರಲೊಬ್ಬ ಬಂದೂಕಿನಿಂದ ಶೂಟ್ ಮಾಡಿದ್ದಾನೆ. ಇದ್ದರಿಂದ ಗಾಯಗೊಂಡಿದ್ದ ಗೋವಿಂದ, ಭೀಮ, ಜುಂಜಣ್ಣ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು

ಆರೋಪಿಗಳ ಪತ್ತೆಗಾಗಿ ಎರಡು ತಂಡ ರಚನೆ ಮಾಡಲಾಗಿತ್ತು. ಘಟನಾ ಸ್ಥಳದಲ್ಲಿ ದೊರೆತ ಬೈಕ್, ಮೊಬೈಲ್ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಲಾಗಿದೆ. ಎಸ್‌ಬಿಬಿಎಲ್ ಬಂದೂಕು, ಎರಡು ಮದ್ದುಗುಂಡು ಜಪ್ತಿ ಮಾಡಲಾಗಿದೆ. ಇದು ಹಿಂಡಗೂಡ್ಲು ಗ್ರಾಮದ ರಾಮಕೃಷ್ಣೇಗೌಡ ಹೇಸರಿನಲ್ಲಿ ಪರವಾನಗಿ ಹೊಂದಿರುವ ಬಂದೂಕು ಆಗಿದೆ. ಅವರನ್ನೂ ವಶಕ್ಕೆ ಪಡೆದು ವಿಚಾರಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದರು.

ಮೂರು ಆರೋಪಿಗಳ ವಿರುದ್ಧ ಕ್ರಿಮಿನಲ್ ಪ್ರಕರಣಗಳಿವೆ. ಪ್ರಮೋದ್ ವಿರುದ್ಧ ಮಾರಣಾಂತಿಕ ಹಲ್ಲೆ ಪ್ರಕರಣ, ದೇವರಾಜ, ಸುದೀಪ್ ವಿರುದ್ಧ ಸುಲಿಗೆ ಪ್ರಕರಣ ದಾಖಲಾಗಿದ್ದು, ಜಾಮೀನಿನ ಮೇಲೆ ಮೂವರು ಹೊರಬಂದಿದ್ದಾರೆ. ಕಾಡುಪ್ರಾಣಿಗಳ ಬೇಟೆಯಾಡಿರುವ ಮಾಹಿತಿ ಇದೆ. ಈ ಕುರಿತು ತನಿಖೆ ನಡೆದಿದೆ ಎಂದು ತಿಳಿಸಿದರು.

ಡಿವೈಎಸ್‌ಪಿ ರವಿ, ಹುಣಸೂರು ಗ್ರಾಮಾಂತರ ಪೊಲೀಸ್ ಇನ್‌ಸ್ಪೆಕ್ಟರ್ ಸಂತೋಷ್ ಕಶ್ಯಪ್ ನೇತೃತ್ವದಲ್ಲಿ ಪಿಎಸ್‌ಐ ತಾಜುದ್ದೀನ, ಸಿಬ್ಬಂದಿ ಅರುಣ್, ವಸಂತಕುಮಾರ್, ಪ್ರಸನ್ನ, ನಾರಾಯಣಶೆಟ್ಟಿ, ಕೆ.ಪಿ.ನಂದೀಶ್, ಇರ್ಫಾನ್, ನಾಗರಾಜು, ಸತೀಶ್, ಚೇತನ, ಟೆಕ್ನಿಕಲ್ ಸೆಲ್ ವಿಭಾಗದ ಎಎಸ್‌ಐ ವಸಂತ್‌ಕುಮಾರ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ಅರಣ್ಯದಲ್ಲಿ ತಲೆಮರೆಸಿಕೊಂಡಿದ್ದ ಖದೀಮರು: ಹುಣಸೂರು, ಎಚ್.ಡಿ.ಕೋಟೆ ಮತ್ತು ಮೈಸೂರು ತಾಲೂಕುಗಳ ಅರಣ್ಯಪ್ರದೇಶ ವ್ಯಾಪ್ತಿಯ ಗಡಿಗ್ರಾಮವಾದ ಮನುಗನಹಳ್ಳಿ ಮತ್ತು ಮರಯ್ಯನಹುಂಡಿ ಅರಣ್ಯ ಪ್ರದೇಶದಲ್ಲಿ ಕಳೆದೊಂದು ವಾರದಿಂದ ಅಡಗಿದ್ದರು ಎಂದು ವಿಚಾರಣೆ ವೇಳೆ ಆರೋಪಿಗಳು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.