ಸರಗೂರು ತಹಸೀಲ್ದಾರ್ ಕಚೇರಿಯಲ್ಲಿ ಶಾಶ್ವತ ಆಧಾರ್ ಕೇಂದ್ರ ತೆರೆಯಬೇಕು ಎಂದು ಒತ್ತಾಯಿಸಿ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಲಕ್ಷ್ಮಿ ನಾರಾಯಣ ನಾಗವಾರ ಸ್ಥಾಪಿತ) ಯಿಂದ ಗ್ರೇಡ್-2 ತಹಸೀಲ್ದಾರ್ ಪರಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಲಾಯಿತು. 
ಮೈಸೂರು

ಶಾಶ್ವತ ಆಧಾರ್ ಕೇಂದ್ರ ಆರಂಭಿಸಲು ಒತ್ತಾಯ

ಸರಗೂರು ಗ್ರೇಡ್-2 ತಹಸೀಲ್ದಾರ್‌ಗೆ ಮನವಿ ಸಲ್ಲಿಕೆ

ಸರಗೂರು: ತಾಲೂಕು ಕಚೇರಿ ಆವರಣದಲ್ಲಿ ಶಾಶ್ವತ ಆಧಾರ್ ಕೇಂದ್ರವನ್ನು ಪ್ರಾರಂಭಿಸುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ (ಲಕ್ಷ್ಮಿ ನಾರಾಯಣ ನಾಗವಾರ ಸ್ಥಾಪಿತ) ವತಿಯಿಂದ ಗ್ರೇಡ್-2 ತಹಸೀಲ್ದಾರ್ ಪರಶಿವಮೂರ್ತಿ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.

ಜಿಲ್ಲಾ ಸಂಚಾಲಕ ಎಸ್.ಡಿ.ಸಣ್ಣಸ್ವಾಮಿ ಮಾತನಾಡಿ, ಸರಗೂರು ಪ್ರಮುಖ ತಾಲೂಕು ಕೇಂದ್ರವಾಗಿದ್ದು ಪ್ರಸ್ತುತ ಪಡಿತರ ಚೀಟಿಗಳ ಕೆವೈಸಿ ಕಾರ್ಯ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಆಧಾರ್ ನೋಂದಣಿ, ತಿದ್ದುಪಡಿ ಹಾಗೂ ಬಯೋಮೆಟ್ರಿಕ್ ನವೀಕರಣ ಸೇರಿದಂತೆ ವಿವಿಧ ಆಧಾರ್ ಸೇವೆಗಳ ಅಗತ್ಯತೆ ಹೆಚ್ಚಾಗಿದೆ. ಹಾಗಾಗಿ ಸಾರ್ವಜನಿಕರು ಆಧಾರ್ ಸೇವೆಗಳನ್ನು ಪಡೆಯಲು ಸೇವಾ ಕೇಂದ್ರದ ಕೊರತೆಯಿಂದ ಪರದಾಡುವಂತಾಗಿದೆ ಎಂದರು.

ಸರಗೂರು ಹಾಗೂ ಪಟ್ಟಣ ಸುತ್ತಮುತ್ತಲಿನ ಹಳ್ಳಿಗಳು, ಅರಣ್ಯ ಪ್ರದೇಶಗಳ ನಿವಾಸಿಗಳು ಆಧಾರ್ ಸಂಬಂಧಿತ ಸೇವೆಗಳನ್ನು ಪಡೆಯಲು ಎಚ್.ಡಿ.ಕೋಟೆ ಅಥವಾ ಮೈಸೂರು ನಗರಕ್ಕೆ ತೆರಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಹಿಂದೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆಧಾರ್ ಕೇಂದ್ರವೂ ಸ್ಥಗಿತಗೊಂಡಿದೆ. ಆದ್ದರಿಂದ ತಾಲೂಕು ಕಚೇರಿಯಲ್ಲಿಯೇ ಶಾಶ್ವತ ಆಧಾರ್ ಕೇಂದ್ರವನ್ನು ಶೀಘ್ರ ಪ್ರಾರಂಭಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಗ್ರೇಡ್-2 ತಹಸೀಲ್ದಾರ್ ಪರಶಿವಮೂರ್ತಿ ಅವರಿಗೆ ಮನವಿ ಸಲ್ಲಿಸಿದರು.

ತಾಲೂಕು ಸಂಘಟನಾ ಸಂಚಾಲಕ ಕಾರಯ್ಯ, ಮಹೇಶ್, ವಿಜಯ್, ಹರೀಶ್, ಶಿವು, ಕೃಷ್ಣ, ನಾಗರಾಜ್, ಅಣ್ಣಯ್ಯ ಸ್ವಾಮಿ, ಕದಂಬ, ಸತೀಶ್ ಉಪಸ್ಥಿತರಿದ್ದರು.