ಹುಣಸೂರು : ಪರಿಸರ ಸ್ವಚ್ಛತೆ ನಮ್ಮ ಕರ್ತವ್ಯ ಮತ್ತು ವೈಯಕ್ತಿಕ ಶುಚಿತ್ವ ನಮ್ಮ ಅಗತ್ಯ ಎನ್ನುವುದನ್ನು ನಾಟಕದ ಮೂಲಕ ಪರಿಣಾಮಕಾರಿಯಾಗಿ ಪ್ರದರ್ಶಿಸಿದ ಪುಟಾಣಿ ಮಕ್ಕಳು... ಸಾಮಾಜಿಕ ಜವಾಬ್ದಾರಿಯನ್ನು ವರ್ಗಾಯಿಸುವ ಪ್ರವೃತ್ತಿ ತೊರೆಯಲು ನೀಡಿದ ಅದ್ಭುತ ಸಂದೇಶ... ಮಕ್ಕಳ ಗಾಂಭೀರ್ಯ ಅಭಿನಯಕ್ಕೆ ಮನಸೋತ ಗ್ರಾಮಸ್ಥರು...
ಇದು ತಾಲೂಕಿನ ಗಾವಡಗೆರ ಹೋಬಳಿ ಮುಳ್ಳೂರು ಗ್ರಾಮದ ಬಾ ಸೃಷ್ಟಿ ಮಕ್ಕಳ ಉಚಿತ ರಂಗ ತರಬೇತಿ ಶಿಬಿರದಲ್ಲಿ ಗ್ರಾಮದ ಸರ್ಕಾರಿ ಶಾಲೆಯ ಮಕ್ಕಳು ಅಭಿನಯಿಸಿದ ವೃಕ್ಷಮಾತೆ ನಾಟಕದ ಜಲಕ್.
ಬಾ ಸೃಷ್ಟಿ ಸಂಸ್ಥೆ ಬುಧವಾರ ಆಯೋಜಿಸಿದ್ದ ತರಬೇತಿ ಶಿಬಿರದ ಸಮಾರೋಪ ಸಮಾರಂಭದಲ್ಲಿ 20ಕ್ಕೂ ಹೆಚ್ಚು ಮಕ್ಕಳು ನುರಿತ, ಅನುಭವಿ ಕಲಾವಿದರಂತೆ ರಂಗದ ಮೇಲೆ ಮಿಂಚಿದರು. ಖಡಕ್ ಮಾತು, ಸಹಜ ಅಭಿನಯ, ಪಾತ್ರಕ್ಕೆ ತಕ್ಕಂತೆ ಮಾತಿನ ಏರಿಳಿತ ಎಲ್ಲವೂ ಅನುಭವದಿಂದ ಬಂದಂತೆ ಇತ್ತು. ಪರಿಸರ ಸ್ವಚ್ಛತೆ ನಮ್ಮೆಲ್ಲರ ಆದ್ಯ ಕರ್ತವ್ಯ. ಸರ್ಕಾರ ಮಾಡುತ್ತದೆ ಎಂದು ಕುಳಿತುಕೊಳ್ಳುವುದು ತರವಲ್ಲವೆಂಬ ಸಂದೇಶವನ್ನು ನಾಟಕದ ಮೂಲಕ ಪ್ರಸ್ತುತಪಡಿಸಿದ ಮಕ್ಕಳು ಎಲ್ಲರ ಮೆಚ್ಚುಗೆಗೆ ಪಾತ್ರವಾದರು.
ಸಮಾರೋಪ ಸಮಾರಂಭದಲ್ಲಿ ತಾಲೂಕು ಶರಣ ಸಾಹಿತ್ಯ ಪರಿಷತ್ ಪ್ರಧಾನ ಕಾರ್ಯದರ್ಶಿ ರೇಣುಕಾ ಪ್ರಸಾದ್ ಮಾತನಾಡಿ, ಮಕ್ಕಳು ಮೊಬೈಲ್ ಜಗತ್ತಿನಲ್ಲಿ ಮುಳುಗಿರುವಾಗ, ಅವರನ್ನು ಪರಿಸರ ಹಾಗೂ ಸೃಜನಶೀಲತೆಯತ್ತ ಸೆಳೆಯಲು ಬಾ ಸೃಷ್ಟಿ ತಂಡದ ಪ್ರಯತ್ನ ಅನುಕರಣೀಯ. ರಂಗಕಲೆಯಲ್ಲಿ ತೊಡಗಿಸಿಕೊಳ್ಳುವುದರಿಂದ ಬದುಕನ್ನು ಎದುರಿಸುವ ಧೈರ್ಯ, ಉತ್ತಮ ಸಂವಹನ ಕಲೆ ಮತ್ತು ಯಾವುದೇ ಹಿಂಜರಿಕೆ ಇಲ್ಲದೆ ಮುಕ್ತವಾಗಿ ಮಾತನಾಡುವ ಸಾಮರ್ಥ್ಯ ಬೆಳೆಯುತ್ತದೆ. ಮಕ್ಕಳ ಭವಿಷ್ಯ ಗಮನದಲ್ಲಿಟ್ಟುಕೊಂಡು ಅವರನ್ನು ಇಂತಹ ರಂಗ ಚಟುವಟಿಕೆಯಲ್ಲಿ ತೊಡಗಿಸಿದ ತಂದೆ-ತಾಯಿಗಳಿಗೆ ಧನ್ಯವಾದ. ಶಿಕ್ಷಕರು ಹೇಳಿಕೊಡಲಾಗದ, ಪಾಲಕರಿಗೂ ತಿಳಿಯದ ವ್ಯಕ್ತಿತ್ವ ವಿಕಸನದ ಪಾಠವನ್ನು ರಂಗಭೂಮಿ ತಿಳಿಸಿಕೊಡುತ್ತದೆ ಎಂದು ಹೇಳಿದರು.
ಸತ್ಯ ಎಂಎಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ಮಾತನಾಡಿ, ಗ್ರಾಮೀಣ ಭಾಗದ ಮಕ್ಕಳಿಗೆ ಸದುಪಯೋಗವಾಗಲೆಂದು ಬಾ ಸೃಷ್ಟಿ ತಂಡದ ಕಾರ್ಯದರ್ಶಿ ಚೇತನ್ ಜಗತಾಪ್ ಉಚಿತವಾಗಿ ರಂಗಕಲೆ ಹಾಗೂ ಸೃಜನಾತ್ಮಕ ಕಲೆಗಳ ತರಬೇತಿ ಕಾರ್ಯಾಗಾರ ನಡೆಸುತ್ತಿರುವುದು ನಿಜಕ್ಕೂ ಸ್ವಾಗತಾರ್ಹ ಎಂದು ಪ್ರಶಂಸಿಸಿದರು.
ಕಾರ್ಯಕ್ರಮದಲ್ಲಿ ಮುಳ್ಳೂರು ಸರ್ಕಾರಿ ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ನಟರಾಜು, ಗಂಗಾಧರ, ಗ್ರಾಮದ ಯಜಮಾನ ವಿನಯ್, ಶಿಕ್ಷಕ ಗಂಗಾಧರ್ ಮತ್ತು ಗ್ರಾಮಸ್ಥರು ಹಾಜರಿದ್ದರು.
ನಾಟಕವನ್ನು ಬೆಳಗಾವಿಯ ವೀರು ಅಣ್ಣಿಗೇರಿ ನಿರ್ದೇಶಿಸಿದ್ದು, ಸಂಗೀತ ನಿರ್ದೇಶನ ದಿಗ್ವಿಜಯ ಹೆಗ್ಗೋಡುರವರದ್ದಾಗಿತ್ತು. ಇದೇ ವೇಳೆ ಮಾರಿ ಕುಣಿತ, ಕೋಲಾಟ ಹಾಗೂ ಹಲವು ಜನಪದ ನೃತ್ಯಗಳಿಗೆ ಮುಳ್ಳೂರು ಶಾಲೆಯ ಮಕ್ಕಳು ಹೆಜ್ಜೆ ಹಾಕಿದರು. ಅಂಧರ ಕಲಾತಂಡ ಕೆ.ಆರ್.ನಗರದ ವಸಂತ ಹಾಗೂ ಲಿಂಗರಾಜು ಅಂಧ ದಂಪತಿ ಜನಪದ ಹಾಗೂ ಭಾವಗೀತೆ ಹಾಡಿ ರಂಜಿಸಿದರು.
ನಟಿಸಿದ ಪುಟಾಣಿಗಳಿವರು: ಪುಟಾಣಿಗಳಾದ ವಿವೇಕ್, ಕುಸುಮಾ, ಅಂಕಿತಾ, ಮಾನಸಾ, ಸಾನ್ವಿ, ಚೈತ್ರಾ, ನಿರೀಕ್ಷಾ, ವಿದ್ಯಾ, ಮಾನ್ವಿ, ಮೋಕ್ಷಿತ್, ರೋಹಿತ್ರಾವ್, ಸಗನ್, ಪೂರ್ವಜಾ, ಲೋಹಿತ್, ಹೇಮಂತ್, ಹರ್ಷ, ಧನುಷ್, ಡಿಂಪಲ್ ಲಕ್ಷ್ಮೀ, ಬೈರವಿ, ತಾನ್ವಿಕಾ, ನಿಶ್ಚಿತಾ, ನೇತ್ರಾವತಿ, ಭರತ್,ದಿವ್ಯಾ ಸೇರಿದಂತೆ 24ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದರು.