ಎಚ್.ಡಿ.ಕೋಟೆ ತಾಲೂಕು ಆಡಳಿತ ಸೌಧದ ತಹಸೀಲ್ದಾರ್ ಕಚೇರಿ ಆವರಣದಲ್ಲಿ ಲೋಕಾಯುಕ್ತ ಪೊಲೀಸ್ ಡಿವೈಎಸ್ಪಿ ಶೈಲೇಂದ್ರ ಅಧ್ಯಕ್ಷತೆಯಲ್ಲಿ ಸಾರ್ವಜನಿಕರ ದೂರು ಸ್ವೀಕಾರ ಸಭೆ ಆಯೋಜಿಸಲಾಗಿತ್ತು. ಶ್ರೀನಿವಾಸ್, ರವಿಚಂದ್ರ, ಪ್ರಶಾಂತ್, ಗಿರೀಶ್, ವಿಜಯಕುಮಾರ್ ಇತರರು ಇದ್ದರು. 
ಮೈಸೂರು

ವಿಳಂಬ ಮಾಡದೆ ಜನರ ಕೆಲಸ ನಿರ್ವಹಿಸಿ

ಅಧಿಕಾರಿಗಳಿಗೆ ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ಸೂಚನೆ

ಎಚ್.ಡಿ.ಕೋಟೆ: ಅಧಿಕಾರಿಗಳು ಸಾರ್ವಜನಿಕರ ಕೆಲಸ ಕಾರ್ಯಗಳನ್ನು ವಿಳಂಬವಿಲ್ಲದೆ ಮಾಡಿ ಕೊಟ್ಟರೆ ಲೋಕಾಯುಕ್ತ ಪೊಲೀಸರು ಸಾರ್ವಜನಿಕರ ದೂರು ಸ್ವೀಕಾರ ಸಭೆ ಮಾಡುವ ಅವಶ್ಯಕತೆ ಇರುವುದಿಲ್ಲ ಎಂದು ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ ಅಭಿಪ್ರಾಯಪಟ್ಟರು.

ಪಟ್ಟಣದ ತಾಲೂಕು ಆಡಳಿತ ಕಚೇರಿ ಆವರಣದಲ್ಲಿ ಗುರುವಾರ ಲೋಕಾಯುಕ್ತ ಪೊಲೀಸರಿಂದ ಆಯೋಜಿಸಿದ್ದ ಸಾರ್ವಜನಿಕರ ದೂರು ಸ್ವೀಕಾರ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಎಚ್.ಡಿ.ಕೋಟೆ ಮತ್ತು ಸರಗೂರು ತಾಲೂಕಿನಲ್ಲಿ ಹೆಚ್ಚು ಜಮೀನು ವಿವಾದಗಳು ಇದ್ದು, ಜಮೀನಿಗೆ ರಸ್ತೆ , ಒತ್ತುವರಿ ತೆರವು, ದುರಸ್ತು, ಸರ್ವೇ, ಹದ್ದುಬಸ್ತು, ದಾಖಲಾತಿ ಸೇರಿದಂತೆ ಇನ್ನಿತರ ಕಾರ್ಯಗಳಿಗಾಗಿ ಅರ್ಜಿಗಳನ್ನು ಸಂಬಂಧಿಸಿದ ಕಚೇರಿಗೆ ನೀಡಿದಾಗ ನಿಗದಿತ ಸಮಯದಲ್ಲಿ ಅರ್ಜಿಗಳನ್ನು ವಿಲೇವಾರಿ ಮಾಡಿ ಇತ್ಯರ್ಥ ಮಾಡಿದರೆ ಅವರು ಮೇಲ್ಮಟ್ಟದಲ್ಲಿ ದೂರು ನೀಡಲು ಹೋಗುವುದಿಲ್ಲ. ಆದರೆ ರೈತರ ಅರ್ಜಿಗಳನ್ನು ವಿಳಂಬ ಮಾಡಿದಾಗ ಅವರು ಅನಿವಾರ್ಯವಾಗಿ ತಳಮಟ್ಟದ ಅಧಿಕಾರಿಗಳ ವಿರುದ್ಧ ಮೇಲ್ಮಟ್ಟದ ಅಧಿಕಾರಿಗಳಿಗೆ ದೂರು ನೀಡುತ್ತಾರೆ. ಅಲ್ಲಿಯೂ ಕೂಡ ತಮ್ಮ ಅರ್ಜಿಗೆ ಸಮರ್ಪಕ ಉತ್ತರ ಸಿಗದಿದ್ದಾಗ ಅನಿವಾರ್ಯವಾಗಿ ಲೋಕಾಯುಕ್ತರಿಗೆ ದೂರು ನೀಡುತ್ತಾರೆ. ಹಾಗಾಗಿ ಅಧಿಕಾರಿಗಳು ಸಾರ್ವಜನಿಕರ ಸೇವೆ ವಿಳಂಬ ಮಾಡದೆ ಇತ್ಯರ್ಥ ಮಾಡಬೇಕು ಎಂದು ನಿರ್ದೇಶನ ನೀಡಿದರು.

ಸಾರ್ವಜನಿಕರು ಲೋಕಾಯುಕ್ತ ಪೊಲೀಸರಿಗೆ ಸಲ್ಲಿಸಿರುವ ದೂರುಗಳನ್ನು ಇನ್ನೊಂದು ತಿಂಗಳೊಳಗೆ ತಾಲೂಕು ಅಧಿಕಾರಿಗಳು ಇತ್ಯರ್ಥ ಮಾಡಬೇಕು. ಒಂದು ವೇಳೆ ಅರ್ಜಿಗಳ ವಿಲೇವಾರಿ ಮಾಡಲು ವಿಳಂಬ ಮಾಡಿ ಕೆಲಸ ಮಾಡದೆ ಇದ್ದರೆ ಮತ್ತೆ ನಮಗೆ ದೂರು ನೀಡಿದರೆ ಆರೋಪಿತ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ ಎಂದು ದೂರುದಾರರಿಗೆ ತಿಳಿಸಿದರು.

ತಾರಕ ನಾಲೆಗೆ ಜಮೀನು ಭೂ ಸ್ವಾಧೀನ ಆಗಿದ್ದರೂ ಕೂಡ ನೀರಾವರಿ ಅಧಿಕಾರಿಗಳು ಪರಿಹಾರ ನೀಡುವಲ್ಲಿ ವಿಳಂಬ ಮಾಡುತ್ತಿದ್ದಾರೆ ಎಂದು ಸೋಗಹಳ್ಳಿ ಗ್ರಾಮದ ಪುಟ್ಟಣ್ಣ ಲೋಕಾಯುಕ್ತರಿಗೆ ದೂರು ನೀಡಿದರು.

ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಡಿವೈಎಸ್ಪಿ ಶೈಲೇಂದ್ರ, ತಾರಕ ನಾಲಾ ಉಪವಿಭಾಗದ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಅನ್ನು ತರಾಟೆ ತೆಗೆದುಕೊಂಡರು. ರೈತರ ಜಮೀನನ್ನು ಭೂಸ್ವಾಧೀನ ಮಾಡಿಕೊಂಡ ಮೇಲೆ ಅವರಿಗೆ ಪರಿಹಾರ ಕೊಡಲು ಏಕೆ ವಿಳಂಬ ಮಾಡುತ್ತಿದ್ದೀರಾ? ರೈತರು ಜಮೀನು ಕಳೆದುಕೊಂಡರೂ ಪರಿಹಾರಕ್ಕಾಗಿ ನಿಮ್ಮ ಇಲಾಖೆಗೆ ಅಲೆದಾಡಬೇಕೆ? ಎಂದು ಕಿಡಿಕಾರಿದರು. ಇನ್ನೂಂದು ತಿಂಗಳೊಳಗೆ ಪರಿಹಾರ ನೀಡಲು ಕ್ರಮ ವಹಿಸುವಂತೆ ತಾಕೀತು ಮಾಡಿದರು.

ವ್ಯವಸಾಯ ಮಾಡಲು ಜಮೀನಿಗೆ ಹೋಗಲು ರಸ್ತೆ ಇಲ್ಲದೆ ಇರುವುದರಿಂದ ತುಂಬ ತೊಂದರೆ ಆಗಿದ್ದು, ಭೂಮಿ ಪಾಳುಬಿದ್ದಿದೆ. ಕಂದಾಯ ಇಲಾಖೆ ಮತ್ತು ಸರ್ವೇ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ಮಾಡಿ ತಹಸೀಲ್ದಾರ್‌ಗೆ ವರದಿ ಮಾಡಿದ್ದಾರೆ. ಆದರೆ ತಹಸೀಲ್ದಾರ್ ಎರಡು ತಿಂಗಳು ಕಳೆದರೂ ಆದೇಶದ ಹೊರಡಿಸದೆ ವಿಳಂಬ ಮಾಡುತ್ತಿದ್ದಾರೆ ಎಂದು ಹೆಗ್ಗಡಾಪುರ ಕುಮಾರ್ ದೂರಿದರು.

ಕೆ.ಬೆಳ್ತೂರು ಗ್ರಾಮದ ಮಹೇಶ್ ಮಾತನಾಡಿ, ತುಂಬಸೋಗೆ ಗ್ರಾಮದ ಸ.ನಂ 52 ದುರಸ್ತು ಪೋಡ್ ಆಗದೆ ಇರುವುದರಿಂದ ಹಲವು ರೈತರಿಗೆ ಸರ್ಕಾರದ ಸವಲತ್ತು ಪಡೆಯಲು ತೊಂದರೆಯಾಗಿದೆ. ಹಾಗಾಗಿ ತುರ್ತಾಗಿ ದುರಸ್ತು ಮಾಡಲು ತಹಸೀಲ್ದಾರ್‌ಗೆ ನಿರ್ದೇಶನ ನೀಡಬೇಕು ಎಂದು ಮನವಿ ಮಾಡಿದರು.

ಬಹುತೇಕ ಸಾರ್ವಜನಿಕರು ಕಂದಾಯ ಇಲಾಖೆಗೆ ಸಂಬಂಧಿಸಿದ ದೂರುಗಳನ್ನು ಲೋಕಾಯುಕ್ತ ಪೊಲೀಸರಲ್ಲಿ ಇತ್ಯರ್ಥ ಮಾಡಲು ಅವಲತ್ತುಕೊಂಡರು.

ಎಚ್.ಮಟಕೆರೆ ಗ್ರಾಮದ ಚನ್ನೇಗೌಡ, ಗ್ರಾಮದಲ್ಲಿ ನನ್ನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ ಹಾಕಿದ್ದು, ಪರಿಶೀಲನೆ ಮಾಡಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.ಸಭೆ ಸ್ಥಳಾಂತರಕ್ಕೆ ಖಂಡನೆ

ಲೋಕಾಯುಕ್ತ ಪೊಲೀಸರ ದೂರು ಸ್ವೀಕಾರ ಸಭೆಯು ತಾಲೂಕು ಆಡಳಿತ ಕಚೇರಿಯ ಆವರಣದಲ್ಲಿ ನಿಗದಿ ಮಾಡಲಾಗಿತ್ತು. ಆದರೆ ಏಕಾಏಕಿ ತಹಸೀಲ್ದಾರ್ ಕಚೇರಿ ಒಳಗೆ ದೂರು ಸ್ವೀಕಾರ ಸಭೆ ನಡೆಸಿದರು. ಅರ್ಜಿದಾರರನ್ನು ಒಬ್ಬೊಬ್ಬರಾಗಿ ಒಳಗೆ ಕರೆದು ದೂರು ಸ್ವೀಕರಿಸಿ ವಿಚಾರಣೆ ಮಾಡಲು ಮುಂದಾದರು. ಲೋಕಾಯುಕ್ತ ಪೊಲೀಸರ ನಡೆಯನ್ನು ಖಂಡಿಸಿದ ಸಾರ್ವಜನಿಕರು, ಬಹಿರಂಗವಾಗಿ ದೂರು ಸ್ವೀಕರಿಸಿ, ಇದರಿಂದ ಜನರಿಗೆ ಸಮಸ್ಯೆ ಪರಿಹಾರವಾಗುವುದು ನಮಗೆ ತಿಳಿಯುತ್ತದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ಈ ವೇಳೆ ಸಾರ್ವಜನಿಕರು ಮತ್ತು ಲೋಕಾಯುಕ್ತ ಪೊಲೀಸರ ನಡುವೆ ಕೆಲ ಸಮಯ ವಾಗ್ವಾದ ಏರ್ಪಟ್ಟಿತು. ನಂತರ ಸಾರ್ವಜನಿಕರ ಆಕ್ರೋಶಕ್ಕೆ ಮಣಿದ ಲೋಕಾಯುಕ್ತ ಪೊಲೀಸರು ಬಹಿರಂಗವಾಗಿ ದೂರು ಸ್ವೀಕಾರ ಸಭೆ ನಡೆಸಿದರು.

ಸಭೆಯಲ್ಲಿ ತಹಸೀಲ್ದಾರ್ ಶ್ರೀನಿವಾಸ್, ಇಒ ರವಿಚಂದ್ರ, ಲೋಕಾಯುಕ್ತ ಪೋಲಿಸ್ ಇನ್‌ಸ್ಪೆಕ್ಟರ್‌ಗಳಾದ ಪ್ರಶಾಂತ್, ಗಿರೀಶ್, ವಿಜಯಕುಮಾರ್, ತಾಲೂಕು ಮಟ್ಟದ ಅಧಿಕಾರಿಗಳಾದ ಡಾ.ರವಿಕುಮಾರ್, ಪ್ರಸಾದ್, ರಮೇಶ್, ಮಹೇಶ್, ಗೋವಿಂದನಾಯಕ, ಸುರೇಶ್, ಬಸವರಾಜು, ಶಂಭು, ನೇತ್ರಾವತಿ, ಶಶಿಕಲಾ, ಹರ್ಷಿತಾ, ರಂಜಿತಾ, ಉಪ ತಹಸೀಲ್ದಾರ್ ಮಹೇಶ್, ವಿಶ್ವನಾಥ್, ಸುಗುಣಾ ಇದ್ದರು.