ತಿ.ನರಸೀಪುರ: ದುಶ್ಚಟರಹಿತ ಜೀವನ ನಡೆಸಲು ವಿದ್ಯಾರ್ಥಿಗಳು ಶೈಕ್ಷಣಿಕ ಹಂತದಿಂದಲೇ ಶಿಸ್ತು ರೂಢಿಸಿಕೊಳ್ಳಬೇಕು ಎಂದು ಕರ್ನಾಟಕ ಸುಗಮ ಸಂಗೀತ ಪರಿಷತ್ ಅಧ್ಯಕ್ಷ ಡಾ. ನಾಗರಾಜ್ ವಿ.ಬೈರಿ ಸಲಹೆ ನೀಡಿದರು.
ತಾಲೂಕಿನ ಬನ್ನೂರು ಪಟ್ಟಣದ ಸಂತೆಮಾಳದಲ್ಲಿರುವ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ಕೇಂದ್ರ ಸರ್ಕಾರದ ಮೇರಾ ಯುವ ಭಾರತ್, ಯಾಚೇನಹಳ್ಳಿ ನನ್ನವ್ವ ಸಾಂಸ್ಕೃತಿಕ ಕಲಾತಂಡ ಸಹಯೋಗದಲ್ಲಿ ಮಧ್ಯಾಹ್ನ ಆಯೋಜಿಸಿದ್ದ ನಶೆ ಮುಕ್ತ ಯುವ ನೆರೆಹೊರೆ ಯುವ ಸಂಸತ್ತು-2026 ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಶಿಕ್ಷಣದಲ್ಲಿ ನಿರ್ದಿಷ್ಟ ಗುರಿ ಸಾಧಿಸುವ ಹಂಬಲ ಪ್ರತಿಯೊಬ್ಬ ವಿದ್ಯಾರ್ಥಿಯಲ್ಲೂ ಇರಬೇಕು ಎಂದು ಕಿವಿಮಾತು ಹೇಳಿದರು.
ಕೆಟ್ಟ ಅಭ್ಯಾಸಗಳಿಂದ ಸಮಾಜದಲ್ಲಿ ವ್ಯಕ್ತಿಯ ಮೇಲೆ ಮಾತ್ರವಲ್ಲದೆ ಅವರ ಕುಟುಂಬದ ಮೇಲೆ ಆಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಈಗಿಂದಲೇ ವಿದ್ಯಾರ್ಥಿಗಳು ತಿಳಿದುಕೊಳ್ಳಬೇಕು. ಡ್ರಗ್ಸ್ ಮಾಫಿಯಾಗೆ ಹಲವು ವಿದ್ಯಾರ್ಥಿಗಳು ಬಲಿಯಾಗಿದ್ದಾರೆ. ಇದರಿಂದ ದೂರವಿರಲು ಹಾಗೂ ಇಂತಹ ಸಾಮಾಜಿಕ ಸಮಸ್ಯೆ ತಡೆಗಟ್ಟಲು ಜಾಗೃತಿ ಅಗತ್ಯ ಎಂಬ ಕಾರಣಕ್ಕೆ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದರು.
ಬನ್ನೂರು ಸಮುದಾಯ ಆರೋಗ್ಯ ಕೇಂದ್ರದ ಆಡಳಿತ ವೈದ್ಯಾಧಿಕಾರಿ ಡಾ.ಮಾಲತೇಶ್ ಶಿವಪ್ಪ ಹವನೂರು ಮಾತನಾಡಿ, ಸಮಾಜಕ್ಕೆ ಆಸ್ತಿಯಾಗಬೇಕಿದ್ದ ಚಿಕ್ಕ ವಯಸ್ಸಿನ ಯುವ ಸಮುದಾಯ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಹಲವು ಘಟನೆಗಳಲ್ಲಿ ನಶೆಯಿಂದಾಗಿ ಅಪರಾಧಗಳು ನಡೆದಿವೆ. ಈ ಹಿನ್ನೆಲೆಯಲ್ಲಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಯುವ ಸಮುದಾಯ, ವಿದ್ಯಾರ್ಥಿಗಳು ದುಶ್ಚಟದಿಂದ ದೂರವಿದ್ದು, ಉತ್ತಮ ಬದುಕು ರೂಪಿಸಿಕೊಳ್ಳುವ ಬಗ್ಗೆ ಆಲೋಚಿಸಬೇಕು ಎಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ನನ್ನವ್ವ ಸಾಂಸ್ಕೃತಿಕ ಕಲಾ ತಂಡದ ಅಧ್ಯಕ್ಷ ವೈ.ಜಿ.ಮಹದೇವ್, ಯುವ ಸಮುದಾಯಕ್ಕೆ ಜಾಗೃತಿ ಮೂಡಿಸುವ ಆಶಯದೊಂದಿಗೆ ಮೇರಾ ಯುವ ಭಾರತ್ ಹಾಗೂ ನಮ್ಮ ಸಂಸ್ಥೆ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿ ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಪೂರಕವಾಗಿ ಕಾರ್ಯಕ್ರಮ ರೂಪಿಸಿದೆ ಎಂದರು.
ಉಪನ್ಯಾಸಕ ಎಂ.ಮಹದೇವ್, ಸಾಮಾಜಿಕ ಜಾಲ ತಾಣಗಳ ಉಪಯುಕ್ತತೆ, ಅತಿ ಬಳಕೆ ಹಾಗೂ ದುರ್ಬಳಕೆಯಿಂದಾಗುವ ಪರಿಣಾಮಗಳ ಕುರಿತು ತಿಳಿಸಿದರಲ್ಲದೆ, ಸಾಮಾಜಿಕ ಜಾಲತಾಣ ಬಳಕೆಯಲ್ಲಿ ಎಚ್ಚರ ವಹಿಸುವ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಭಾರ ಪ್ರಾಂಶುಪಾಲ ಕೆ.ನಂದೀಶ್ ಕುಮಾರ್ ವಹಿಸಿದ್ದರು. ಲಯನ್ಸ್ ಕ್ಲಬ್ ನ ದಿಲೀಪ್ ಸೇರಿದಂತೆ ಕಾಲೇಜು ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಇದ್ದರು.