ಮೈಸೂರು: ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರಕ್ಕೆ ಕರ್ನಾಟಕದ ಕೊಡುಗೆ ಅಪಾರ ಎಂದು ಕೇಂದ್ರದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.
ನಗರದ ಚಾಮುಂಡಿಬೆಟ್ಟ ತಪ್ಪಲಿನಲ್ಲಿ ನಿರ್ಮಾಣಗೊಂಡಿರುವ ಕಾಸ್ಮೋಸ್ ತಾರಾಲಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಜ್ಞಾನ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಮೈಸೂರು ಮಹಾರಾಜರು ಸಾಕಷ್ಟು ಉತ್ತೇಜನ ನೀಡಿದ್ದಾರೆ. ಭಾರತೀಯ ವಿಜ್ಞಾನ ಸಂಸ್ಥೆ, ಎಚ್ಎಎಲ್ಗೆ ಅಗತ್ಯ ನೆರವು ನೀಡಿದ್ದಾರೆ. ಇದರಿಂದಾಗಿ ಕರ್ನಾಟಕ ಸ್ಪೇಸ್, ಏರೋ ಟೆಕ್ನಾಲಜಿ, ಐಟಿ, ಬಿಟಿ ಕ್ಷೇತ್ರದಲ್ಲಿ ಸಾಕಷ್ಟು ಪ್ರಗತಿ ಸಾಧಿಸಿದೆ ಎಂದರು.
ಯುವ ಭಾರತೀಯ ವಿದ್ಯಾರ್ಥಿಗಳಲ್ಲಿ ಯಾರಾದರೂ ಭವಿಷ್ಯದಲ್ಲಿ ಮಹಾನ್ ವಿಜ್ಞಾನಿಗಳಾಗಿ ಹೊರಹೊಮ್ಮಿ, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುವ ದಿನ ದೂರವಿಲ್ಲ. ಈ ತಾರಾಲಯವು ಕರ್ನಾಟಕದ ಸುಮಾರು 10 ಸಾವಿರ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಯನ್ನು ತಲುಪುವಂತಾಗಬೇಕು.
ವಿಜ್ಞಾನ ಕ್ಷೇತ್ರಕ್ಕೆ ಮೈಸೂರಿನ ಕೊಡುಗೆ ಅಪಾರ ಮತ್ತು ಅದರ ಬೇರು ಹಳೆಯದು. ಮಕ್ಕಳ ವಿಜ್ಞಾನ ಕಲಿಕೆಗೆ ಈ ತಾರಾಲಯ ಸಾಕಷ್ಟು ಅವಕಾಶ ನೀಡಲಿದೆ. ಅಸ್ಟ್ರಾನಮಿ ಕಲಿಕೆಗೆ ಉತ್ತೇಜನ ದೊರೆಯುತ್ತದೆ. ಕಾಸ್ಮೋಸ್ ಈಗ ಬಾಹ್ಯಾಕಾಶ ಯಾನವನ್ನು ಆರಂಭಿಸಿದೆ ಎಂದು ಹೇಳಿದರು.
2047ರ ವೇಳೆಗೆ ಭಾರತವನ್ನು ವಿಕಸಿತ ರಾಷ್ಟ್ರವನ್ನಾಗಿ ರೂಪಿಸುವ ಗುರಿಯತ್ತ ನಾವು ಸಾಗುತ್ತಿದ್ದೇವೆ. ಈ ಮಹತ್ವದ ಪಯಣದಲ್ಲಿ ಇಸ್ರೋದಂತಹ ಸಂಸ್ಥೆಗಳು ಅನ್ವೇಷಿಸುವ ಹಾಗೂ ಹೊಸ ಆವಿಷ್ಕಾರಗಳನ್ನು ಮಾಡುವ ಸಾಮರ್ಥ್ಯವುಳ್ಳ ಯುವ ಪೀಳಿಗೆಯನ್ನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿವೆ ಎಂದರು.
ಕರ್ನಾಟಕ ಹಿಂದಿನಿಂದಲೂ ವಿಜ್ಞಾನಕ್ಕೆ ತನ್ನದೇ ಕೊಡುಗೆ ನೀಡುತ್ತಾ ಬಂದಿದೆ. ತಾರಾಲಯ ಕರ್ನಾಟಕಕ್ಕೆ ಮತ್ತೊಂದು ಗರಿ. ಮೈಸೂರಿನ ವಿದ್ಯಾರ್ಥಿಗಳಿಗೆ ಇದು ಸುವರ್ಣ ಅವಕಾಶ. ಮೈಸೂರಿನ ಪ್ರವಾಸೋದ್ಯಮಕ್ಕೂ ಇದು ಕೊಡುಗೆ ನೀಡಲಿದೆ.
ತಾರಾಲಯ ವೀಕ್ಷಣೆಗೆ ಬರುವ ಪ್ರವಾಸಿಗರು ಇತರ ಪ್ರವಾಸಿ ತಾಣಕ್ಕೂ ಭೇಟಿ ನೀಡಲಿದ್ದಾರೆ. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಯಾಗಲಿದೆ. ಸ್ಥಳೀಯ ವ್ಯಾಪಾರ ವೃದ್ಧಿಯಾಗಲಿದೆ. ವಿದ್ಯಾರ್ಥಿಗಳು ಹಾಗೂ ಸಂದರ್ಶಕರಿಗೆ ಇದು ಬಾಹ್ಯಕಾಶದ ಸಂಪೂರ್ಣ ಮಾಹಿತಿ ನೀಡಲಿದೆ ಎಂದು ತಿಳಿಸಿದರು.