ಲಕ್ಷ ದೀಪೋತ್ಸವದ ಬೆಳಕಿನಲ್ಲಿ ಕಂಗೊಳಿಸಿದ ತಿ.ನರಸೀಪುರ ಪಟ್ಟಣದ ಶ್ರೀ ಗುಂಜಾನರಸಿಂಹ ಸ್ವಾಮಿ ದೇವಾಲಯ. 
ಮೈಸೂರು

ವಿಜೃಂಭಣೆಯ ಲಕ್ಷ ದೀಪೋತ್ಸವ

ಶ್ರೀ ಗುಂಜಾನರಸಿಂಹ ಸ್ವಾಮಿ ದರ್ಶನ ಪಡೆದ ಭಕ್ತರು

ತಿ.ನರಸೀಪುರ: ಪಟ್ಟಣದ ಪುರಾತನ ಪ್ರಸಿದ್ಧ ಶ್ರೀ ಗುಂಜಾನರಸಿಂಹ ಸ್ವಾಮಿ ದೇವಾಲಯದಲ್ಲಿ ಭಾನುವಾರ ರಾತ್ರಿ ಕಾರ್ತಿಕ ಮಾಸದ ಪ್ರಯುಕ್ತ ಸೇವಾ ಸಮಿತಿಯಿಂದ ಹಮ್ಮಿಕೊಂಡಿದ್ದ 15ನೇ ವರ್ಷದ ಲಕ್ಷ ದೀಪೋತ್ಸವ ಹಾಗೂ ಕಪಿಲಾ ನದಿಯಲ್ಲಿ ತೆಪ್ಪೋತ್ಸವ ವಿಜೃಂಭಣೆಯಿಂದ ನೆರವೇರಿತು.

ಈ ಅಂಗವಾಗಿ ಬೆಳಗ್ಗೆಯಿಂದಲೇ ದೇವಾಲಯದಲ್ಲಿ ಧಾರ್ಮಿಕ ವಿಧಿವಿಧಾನಗಳು ಆರಂಭಗೊಂಡಿದ್ದವು. ಮೂಲ ವಿಗ್ರಹಕ್ಕೆ ವಿಶೇಷ ಅಭಿಷೇಕ, ಹೋಮ-ಹವನ, ವಿಶೇಷ ಪೂಜೆ ಹಾಗೂ ಮಹಾಮಂಗಳಾರತಿ ನೆರವೇರಿಸಲಾಯಿತು. ಸೂರ್ಯಾಸ್ತವಾಗುತ್ತಿದ್ದಂತೆ ತ್ರಿವೇಣಿ ಸಂಗಮದ ತೀರದಲ್ಲಿರುವ ದೇವಾಲಯದ ಆವರಣದಲ್ಲಿ ಜ್ಯೋತಿ ಬೆಳಗಲು ಆರಂಭವಾಯಿತು.

ಪಟ್ಟಣದ ನೂರಾರು ಭಕ್ತರು ಬೆಳಗ್ಗೆಯಿಂದಲೇ ದೇವಾಲಯದ ಆವರಣಕ್ಕೆ ಆಗಮಿಸಿ ಸ್ವಯಂ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ದೇವಾಲಯದ ಪ್ರಾಂಗಣದಾದ್ಯಂತ ಆಕರ್ಷಕ ರಂಗೋಲಿ ಬಿಡಿಸಿ ಲಕ್ಷಾಂತರ ಮಣ್ಣಿನ ಹಣತೆಗಳನ್ನು ಹಚ್ಚಿದರು.

ಸಂಜೆ ಕತ್ತಲಾಗುತ್ತಿದ್ದಂತೆ ಪಟ್ಟಣ ಸೇರಿದಂತೆ ಸುತ್ತಲಿನ ಗ್ರಾಮಗಳಿಂದ ಆಗಮಿಸಿದ್ದ ಸಹಸ್ರಾರು ಭಕ್ತರು ಹಣತೆಗಳನ್ನು ಹಚ್ಚಿದರು. ಲಕ್ಷ ದೀಪಗಳ ಬೆಳಕಿನಲ್ಲಿ ಇಡೀ ದೇವಾಲಯದ ಆವರಣ ಕಂಗೊಳಿಸುತ್ತಿತ್ತು. ಭಕ್ತರು ದೀಪಗಳನ್ನು ಬೆಳಗಿ ಶ್ರೀ ಗುಂಜಾ ನರಸಿಂಹಸ್ವಾಮಿಗೆ ಪ್ರಾರ್ಥನೆ ಸಲ್ಲಿಸಿದರು. ನಂತರ ಗುಂಜಾ ನರಸಿಂಹಸ್ವಾಮಿಯ ಉತ್ಸವ ಮೂರ್ತಿಯನ್ನು ಸಕಲ ವಾದ್ಯಗೋಷ್ಠಿಗಳೊಂದಿಗೆ ಪವಿತ್ರ ಕಪಿಲಾ ನದಿಯ ತೀರಕ್ಕೆ ಕೊಂಡೊಯ್ಯಲಾಯಿತು. ವಿದ್ಯುತ್ ದೀಪಗಳು ಹಾಗೂ ಪುಷ್ಪಗಳಿಂದ ಅಲಂಕೃತಗೊಂಡಿದ್ದ ತೆಪ್ಪದಲ್ಲಿ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಿ ನದಿಯಲ್ಲಿ ವಿಜೃಂಭಣೆಯಿಂದ ತೆಪ್ರೋತ್ಸವ ನೆರವೇರಿಸಲಾಯಿತು.

ಸೇವಾ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಉಪಸ್ಥಿತರಿದ್ದರು. ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

ಪಟ್ಟಣದ ಶ್ರೀ ಗುಂಜಾನರಸಿಂಹ ಸ್ವಾಮಿ ದೇವಾಲಯದಲ್ಲಿ ಕಾರ್ತಿಕ ಮಾಸದ ಅಂಗವಾಗಿ ಲಕ್ಷ ದೀಪೋತ್ಸವ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಪುರಸಭೆ ವತಿಯಿಂದ ಭಕ್ತರಿಗೆ ಅನುಕೂಲಕವಾಗಲೆಂದು ದೇವಸ್ಥಾನದ ಆವರಣ ಹಾಗೂ ತೇಪ್ಪುೋತ್ಸವ ನಡೆಯುವ ನದಿಯ ಪಾತ್ರದಲ್ಲಿ ಸ್ವಚ್ಛತೆ ಕೈಗೊಂಡು ಭಕ್ತರಿಗೆ ಅನುಕೂಲ ಕಲ್ಪಿಸಿಕೊಡಲಾಗಿದೆ.

ಸಿ.ಶ್ರೀನಿವಾಸ್, ಮುಖ್ಯಾಧಿಕಾರಿ ಪುರಸಭೆ