ಹನಗೋಡು: ಹೋಬಳಿಯ ವಡ್ಡಂಬಾಳು ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಬಲ್ಕ್ ಮಿಲ್ಕ್ ಕೂಲರ್(ಬಿಎಂಸಿ) ಕೇಂದ್ರವನ್ನು ಶಾಸಕ ಜಿ.ಡಿ.ಹರೀಶ್ಗೌಡ ಶನಿವಾರ ಉದ್ಘಾಟಿಸಿದರು.
ನಂತರ ಮಾತನಾಡಿ, ಗ್ರಾಮೀಣ ಭಾಗದ ರೈತರ ಪ್ರಮುಖ ಉಪಕಸುಬಾಗಿರುವ ಹೈನುಗಾರಿಕೆ ಸಾವಿರಾರು ಕುಟುಂಬಗಳಿಗೆ ಆರ್ಥಿಕ ಆಸರೆಯಾಗಿದೆ. ಹೈನುಗಾರರು ಉತ್ಪಾದಿಸುವ ಹಾಲನ್ನು ಗುಣಮಟ್ಟದೊಂದಿಗೆ ಸಂಗ್ರಹಿಸಿ ಸಂರಕ್ಷಿಸುವುದು ಅತ್ಯಂತ ಮುಖ್ಯ. ಈ ನಿಟ್ಟಿನಲ್ಲಿ ಬಿಎಂಸಿ ಕೇಂದ್ರಗಳು ಮಹತ್ವದ ಪಾತ್ರ ವಹಿಸಲಿವೆ ಎಂದರು.
ಬಿಎಂಸಿ ಕೇಂದ್ರ ಸ್ಥಾಪನೆಯಿಂದ ಗ್ರಾಮದಲ್ಲಿಯೇ ಹಾಲು ಸಂಗ್ರಹಿಸಿ ತಂಪಾಗಿಡಲು ಅನುಕೂಲವಾಗಲಿದೆ. ಇದರಿಂದ ಹಾಲಿನ ಗುಣಮಟ್ಟ ಕಾಪಾಡುವುದರ ಜತೆಗೆ ಹೈನುಗಾರರಿಗೆ ಉತ್ತಮ ಸೇವೆ ದೊರೆಯಲಿದೆ. ರೈತರು ಕೃಷಿಯೊಂದಿಗೆ ಹೈನುಗಾರಿಕೆಯನ್ನೂ ಕೈಗೊಂಡು ಆರ್ಥಿಕವಾಗಿ ಸದೃಢರಾಗಬೇಕು. ಹಾಲು ಉತ್ಪಾದಕರ ಸಹಕಾರ ಸಂಘಗಳ ಅಭಿವೃದ್ಧಿಗೆ ಆಡಳಿತ ಮಂಡಳಿ ಹಾಗೂ ಉತ್ಪಾದಕರು ಪರಸ್ಪರ ಸಹಕಾರ ನೀಡಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಹಾಲು ಉತ್ಪಾದಕರ ಸಹಕಾರ ಸಂಘದ ಅಭಿವೃದ್ಧಿಗಾಗಿ 8 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು. ಕಾರ್ಯಕ್ರಮದಲ್ಲಿ ಕೆಎಂಎಫ್ ನಿರ್ದೇಶಕ ಕೆ.ಎಸ್. ಕುಮಾರ್, ಮೈಮುಲ್ ನಿರ್ದೇಶಕಿ ಶಿವಗಾಮಿ, ಮುಖಂಡರಾದ ಹರವೆ ಶ್ರೀಧರ್, ಸತೀಶ್, ಪಾಪಣ್ಣ, ಕಿರಂಗೂರು ಬಸವರಾಜು, ಗ್ರಾಪಂ ಮಾಜಿ ಅಧ್ಯಕ್ಷರಾದ ಮುದಗನೂರು ಸುಭಾಷ್, ದಾರಾ ಮಹೇಶ್, ರಾಣಿ ಉದಯಕುಮಾರ್, ಗ್ರಾಮದ ಯಜಮಾನ ತಿಮ್ಮೇಗೌಡ, ಸಹಕಾರ ಸಂಘದ ಅಧ್ಯಕ್ಷೆ ಮಂಜುಳಾ, ಸಾವಿತ್ರಮ್ಮ, ಸುವರ್ಣ, ಪಾರ್ವತಮ್ಮ, ಇಂದ್ರಮ್ಮ, ಭಾರತಿ, ಮೀನಾಕ್ಷಿ, ಕಟ್ಟನಾಯ್ಕ, ನರಸನಾಯ್ಕ, ದೇವರಾಜನಾಯ್ಕ, ಸೋಮಾಚಾರಿ, ಮಹಾದೇವ, ಹೈನುಗಾರರು ಹಾಗೂ ಗ್ರಾಮಸ್ಥರು ಇದ್ದರು.