ಮೈಸೂರು: ‘ವಂದೇ ಮಾತರಂ’ ಕೇವಲ ಗೀತೆಯಷ್ಟೇ ಅಲ್ಲ, ಅದು ದೇಶದ ಜನರಿಗೆ ಪ್ರೇರಣೆ ಮತ್ತು ಸ್ಫೂರ್ತಿಯ ಸೆಲೆ ಎಂದು ಸಾವರ್ಕರ್ ಮೊಮ್ಮಗ ಸಾತ್ಯಕಿ ಸಾವರ್ಕರ್ ಹೇಳಿದರು.
ಯುವ ಬ್ರಿಗೇಡ್ ಸಂಘಟನೆ ವತಿಯಿಂದ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಸೋಮವಾರ ಸಂಜೆ ಆಯೋಜಿಸಿದ್ದ ‘ವಂದೇ ಮಾತರಂ ರಥಯಾತ್ರೆ’ಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಬಂಗಾಳಿ ಸಾಹಿತಿ ಬಂಕಿಮಚಂದ್ರ ಚಟರ್ಜಿ ಅವರು 1870ರ ದಶಕದಲ್ಲಿ ರಚಿಸಿರುವ ಈ ಗೀತೆ ಈಗಲೂ ಅಮರ. ಸ್ವಾತಂತ್ರೃ ಹೋರಾಟದ ಸಂದರ್ಭದಲ್ಲಿ ಇದು ಮಹಾಮಂತ್ರವಾಗಿತ್ತು. ಅನೇಕ ಚಳವಳಿಗಾರರಿಗೆ ಪ್ರೇರಣೆಯೂ ಆಗಿತ್ತು ಎಂದು ಸ್ಮರಿಸಿದರು.
ಐತಿಹಾಸಿಕ ಹಿನ್ನೆಲೆಯ ‘ವಂದೇ ಮಾತರಂ’ ಗೀತೆಯನ್ನೇ ಪ್ರಸಕ್ತ ಕಾಲದಲ್ಲಿ ನಿರಾಕರಣೆ ಮಾಡಲಾಗುತ್ತಿದೆ. ತಾಯಿ, ಕಮಲ ಇನ್ನಿತರ ಪದಗಳ ಉಲ್ಲೇಖದ ಕಾರಣಕ್ಕೆ ಗೀತೆಯನ್ನೇ ಮತ್ತೊಮ್ಮೆ ವಿಭಜನೆ ಮಾಡಿ 2 ಚರಣಕ್ಕೆ ಸೀಮಿತಗೊಳಿಸಲಾಗಿದೆ. 5 ಚರಣಗಳನ್ನು ಕೈಬಿಡಲಾಗಿದೆ. ಯಾರದ್ದೋ ಭಾವನೆ ಧಕ್ಕೆಯಾಗುತ್ತದೆಂಬ ಕಾರಣಕ್ಕೆ ಈ ಗೀತೆಯನ್ನು ಮೊಟಕುಗೊಳಿಸಲಾಗಿದೆ ಎಂದು ಹೇಳಿದರು.
ಮೊದಲು ‘ವಂದೇ ಮಾತರಂ’ ಗೀತೆಯನ್ನು ವಿಭಜನೆ ಮಾಡಿದ್ದರು. ಬಳಿಕ ಭಾರತ ಎಂಬ ಮಾತೃಭೂಮಿಯನ್ನೇ ವಿಘಟಿಸಿದರು. ಇಂತಹ ರಾಷ್ಟ್ರವಿರೋಧಿ ಮನಸ್ಸುಗಳು ಸ್ವಾತಂತ್ರೃ ಪೂರ್ವ ಮತ್ತು ನಂತರವೂ ವಿಜೃಂಭಿಸುತ್ತಿವೆ. ಈಗಲೂ ದೇಶ ವಿಭಜನೆ ಘೋಷಣೆಗಳು ಕೇಳಿಬರುತ್ತಿವೆ. ಅಂತಹವರ ಬಾಯಿಯಲ್ಲಿ ವಂದೇ ಮಾತರಂ ಗೀತೆ ಬರಲ್ಲ ಎಂದು ಕಿಡಿಕಾರಿದರು.
ದೇಶ ವಿಭಜನೆ ಶಕ್ತಿಗಳು ಜಾತಿ, ಪ್ರಾಂತ್ಯ, ಧರ್ಮ ಹೆಸರಿನಲ್ಲಿ ಜನಸಮೂಹವನ್ನು ವಿಘಟನೆ ಮಾಡುತ್ತಿದ್ದು, ಇಂತಹ ದುಷ್ಟ ಶಕ್ತಿಗಳಿಗೆ ತಿರುಗೇಟು ಕೊಡಲು ‘ವಂದೇ ಮಾತರಂ’ ಮಂತ್ರವನ್ನು ನಿರಂತರವಾಗಿ ಜಪಿಸಬೇಕಿದೆ. ಇದರೊಂದಿಗೆ ದೇಶಾದ್ಯಂತ ಜನರ ಮನಸ್ಸನ್ನು ಜಾಗೃತಿಗೊಳಿಸುವ ಅಗತ್ಯವೂ ಇದೆ. ಈ ಹಿನ್ನೆಲೆಯಲ್ಲಿ ಈ ರಥಯಾತ್ರೆ ಪೂರಕವಾಗಿದ್ದು, ಇದಕ್ಕೆ ಸಮಸ್ತ ಹಿಂದೂಗಳು ಬೆಂಬಲ, ಸಹಕಾರ ನೀಡಬೇಕು ಎಂದರು.
ಚೇತನಗಿರಿ ಮಹಾರಾಜ ಸ್ವಾಮೀಜಿ ಮಾತನಾಡಿ, ಹಿಂದೂ ಸಂಸ್ಕೃತಿಯನ್ನು ಕೀಳಾಗಿ ಬಿಂಬಿಸುವ ದುಷ್ಕೃತ್ಯಗಳು ನಡೆದಿವೆ. ವಂದೇ ಮಾತರಂ, ಗೋವು, ಸಂಸ್ಕೃತಿ, ಆಚಾರ-ವಿಚಾರಗಳ ಕುರಿತು ಕೆಟ್ಟದಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಇದಕ್ಕೆ ಕಡಿವಾಣ ಹಾಕಬೇಕಿದೆ ಎಂದರು.
ವಂದೇ ಮಾತರಂ ರಥಯಾತ್ರೆ ಮಾದರಿಯಲ್ಲಿ ‘ಗೋವು ಮಾತಾ, ರಾಷ್ಟ್ರ ಮಾತಾ’ ಎಂಬ ಅಭಿಯಾನವನ್ನೂ ರಾಷ್ಟ್ರಾದ್ಯಂತ ನಡೆಸಲಾಗುತ್ತಿದೆ. ಗೋವುಗಳ ಸಂರಕ್ಷಣೆ ಕುರಿತ ಜನಸಮೂಹದಲ್ಲಿ ಅರಿವು ಮೂಡಿಸಲಾಗುತ್ತಿದೆ. ಅದಕ್ಕಾಗಿ ಅಭಿಯಾನದೊಂದಿಗೆ ಸಾರ್ವಜನಿಕರ ಸಹಿ ಸಂಗ್ರಹವೂ ನಡೆಸಲಾಗುತ್ತಿದೆ. ಇದಕ್ಕೆ ಕರ್ನಾಟಕ ರಾಜ್ಯದಲ್ಲೂ ಬೆಂಬಲ ಕೊಡಬೇಕು ಎಂದು ಕೋರಿದರು.
ಕ್ಯಾಪ್ಟನ್ ಯೂಯಿಸ್ ಮಾತನಾಡಿ, ಈಗಿನ ಯುವ ಜನರು ಟಿವಿ, ಮೊಬೈಲ್ನಲ್ಲಿ ಕಳೆದುಹೋಗಿದ್ದಾರೆ. ತಂದೆ-ತಾಯಿ-ಹಿರಿಯರಿಗೆ ಗೌರವ ಕೊಡುತ್ತಿಲ್ಲ. ಸಂಬಂಧಗಳಿಗೂ ಬೆಲೆ ಕೊಡುತ್ತಿಲ್ಲ. ಇಂತಹ ಯುವ ಜನರನ್ನು ಸರಿದಾರಿಗೆ ತಂದು ದೇಶಾಭಿಮಾನ ಮೂಡಿಸಬೇಕಿದೆ. ಪ್ರತಿಯೊಬ್ಬರಿಗೂ ಗುರಿ, ದೇವರ ಭಯ, ದೇಶ ಭಕ್ತಿ ಇರಬೇಕು ಎಂದರು.
ಯುವ ಬ್ರಿಗೇಡ್ ಸಂಘಟನೆ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಮಾತನಾಡಿ, ವಂದೇ ಮಾತರಂ ಗೀತೆಗೆ ಇದೀಗ 150 ವರ್ಷದ ಸಂಭ್ರಮ. ಈ ಗೀತೆ ದೇಶದ ಜನರನ್ನು ಜಾಗೃತಗೊಳಿಸಿ ಸ್ವಾತಂತ್ರೃ ಹೋರಾಟದ ಕುರಿತು ಹೊಸ ಉತ್ಸಾಹವನ್ನೇ ಹುಟ್ಟುಹಾಕಿತು. ಈ ಗೀತೆಯಿಂದ ಮತ್ತೊಮ್ಮೆ ಅದೇ ಪ್ರೇರಣೆ ಪಡೆದುಕೊಳ್ಳಬೇಕಾಗಿದೆ. ಈ ಹಿನ್ನೆಲೆಯಲ್ಲಿ ಸಾಂಸ್ಕೃತಿಕ ನಗರಿ ಮೈಸೂರಿನಿಂದ ಕೈಗೊಂಡಿರುವ ಈ ವಂದೇ ಮಾತರಂ ರಥಯಾತ್ರೆಯು ರಾಜ್ಯದ ವಿವಿಧ ಜಿಲ್ಲೆಗಳೊಂದಿಗೆ ಗೋವಾ, ಮಹಾರಾಷ್ಟ್ರ, ಆಂಧ್ರ, ತಮಿಳುನಾಡು ರಾಜ್ಯದ ಕೆಲ ಗಡಿಭಾಗಗಳಲ್ಲೂ ಸಂಚಾರ ಮಾಡಲಿದೆ ಎಂದು ಮಾಹಿತಿ ನೀಡಿದರು.